ಶ್ರೀಲಂಕಾ: ಪ್ರವಾಹಪೀಡಿತರಿಗೆ ಭಾರತ ನೆರವು

Update: 2017-05-27 14:53 GMT

 ಕೊಲಂಬೊ,ಮೇ 27: ದ್ವೀಪರಾಷ್ಟ್ರ ಶ್ರೀಲಂಕಾದಲ್ಲಿ ದಶಕದಲ್ಲೇ ಕಂಡರಿಯದಂತಹ ಭೀಕರ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 100 ದಾಟಿದ್ದು, ಸಂತ್ರಸ್ತರಿಗೆ ಆಹಾರ, ಔಷಧಿ ಮತ್ತಿತರ ಪರಿಹಾರ ಸಾಮಾಗ್ರಿಗಳನ್ನು ಹೊತ್ತ ಭಾರತೀಯ ನೌಕಾಪಡೆಯ ಹಡಗೊಂದು ಶನಿವಾರ ಕೊಲಂಬೊ ಬಂದರನ್ನು ತಲುಪಿದೆ.

 ರಾಜಧಾನಿ ಕೊಲಂಬೊ ಸೇರಿದಂತೆ ದಕ್ಷಿಣ ಶ್ರೀಲಂಕಾದ ವಿವಿಧೆಡೆ ಭಾರೀ ಮಳೆ ಮುಂದುವರಿಯಲಿದೆಯೆಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದ್ದು, ಕೆಲಾನಿ ನದಿಯ ದಂಡೆಯುದ್ದಕ್ಕೂ ವಾಸಿಸುವ ನಿವಾಸಿಗಳು, ಸ್ಥಳಾಂತರಗೊಳ್ಳುವಂತೆ ವಿಪತ್ತು ನಿರ್ವಹಣಾ ಕೇಂದ್ರವು ಶನಿವಾರ ತುರ್ತು ಎಚ್ಚರಿಕೆ ನೀಡಿದೆ. ಹಾಗೆಯೇ ಕೊಲ್ಲೊನೊವಾ, ಕಡುವೇಲಾ,ವೆಲ್ಲಂಪಿಟಿಯಾ, ಎಲನಿಯಾ, ಬಿಯಾಗಾಮ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿಯಲಿದೆಯೆಂದು ಅದು ಹೇಳಿದೆ.

   ದಕ್ಷಿಣ ಶ್ರೀಲಂಕಾದ 14 ಜಿಲ್ಲೆಗಳ 52,603 ಕುಟುಂಬಗಳ ಒಟ್ಟು 2,00,382 ಮಂದಿ ಪ್ರವಾಹಪೀಡಿತರಾಗಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ. ಶನಿವಾರ ಬೆಳಗ್ಗೆ ಒಟ್ಟು 12,007 ಮಂದಿಯನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆಯೆಂದು ಅವು ಹೇಳಿವೆ.

ಶ್ರೀಲಂಕಾ ಪ್ರವಾಹಕ್ಕೆ ಬಲಿಯಾದವರ ಸಂಖ್ಯೆ 100 ದಾಟಿದ್ದು, ಇನ್ನೂ 99 ಮಂದಿ ನಾಪತ್ತೆಯಾಗಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ. 1 ಸಾವಿರ ಯೋಧರು ಸೇರಿದಂತೆ ಶ್ರೀಲಂಕಾದ ಮೂರೂಪಡೆಗಳ ಯೋಧರು ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗಳಲ್ಲಿ ನಿರತರಾಗಿದ್ದಾರೆಂದು ಮೂಲಗಳು ತಿಳಿಸಿವೆ. ಗಾಲೆ ಜಿಲ್ಲೆಯ ನೆಲುವಾ ಪ್ರದೇಶದಲ್ಲಿ ಪ್ರವಾಹ ಪೀಡಿತರ ರಕ್ಷಣೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಸಂದರ್ಭ ಶ್ರೀಲಂಕಾ ವಾಯುಪಡೆಯ ಯೋಧನೊಬ್ಬ ಹೆಲಿಕಾಪ್ಟರ್‌ನಿಂದ ಬಿದ್ದು ಸಾವನ್ನಪ್ಪಿದ್ದಾನೆ.

 ಭಾರೀ ಮಳೆ ಹಾಗೂ ಬಿರುಗಾಳಿಯ ಪರಿಸ್ಥಿತಿಯು ಮುಂದುವರಿಯುವ ನಿರೀಕ್ಷೆಯಿದೆಯೆಂದು ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News