ಮೌಲ್ಯಯುತ ಪುಸ್ತಕಗಳು ಓದುಗರ ಸಂಪತ್ತು: ಪುರಂದರ ಭಟ್

Update: 2017-05-27 15:00 GMT

ಪುತ್ತೂರು, ಮೇ 27: ಮೌಲ್ಯಯುತ ಪುಸ್ತಕಗಳು ಮಾತ್ರ ಓದುಗರ ಸಂಪತ್ತು. ಮೌಲ್ಯವಿಲ್ಲದ್ದು ಕೇವಲ ಕಾಳಧನದ ಸಾಹಿತ್ಯವೇ ಹೊರತು ನಿಜವಾದ ಸಾಹಿತ್ಯವಾಗಲು ಸಾಧ್ಯವಿಲ್ಲ ಎಂದು ಪುತ್ತೂರಿನ ಕರ್ನಾಟಕ ಸಂಘದ ಅಧ್ಯಕ್ಷ ಬಿ.ಪುರಂದರ ಭಟ್ ಅವರು ಹೇಳಿದರು.

ಪುತ್ತೂರಿನ ಅನುರಾಗ ವಠಾರದಲ್ಲಿ ಶನಿವಾರ ಸಂಜೆ ಪುತ್ತೂರಿನ ಕರ್ನಾಟಕ ಸಂಘ ಮತ್ತು ಕುಶಲ ಹಾಸ್ಯಪ್ರೀಯರ ಸಂಘದ ಜಂಟಿ ಆಶ್ರಯದಲ್ಲಿ ನಡೆದ ನಿವೃತ್ತ ಉಪನ್ಯಾಸಕ ಪ್ರೊ. ವಿ.ಬಿ.ಅರ್ತಿಕಜೆ ಅವರ ‘ನಗೆ ಮಿಂಚು’ ಪುಸ್ತಕ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಹಣಕೊಟ್ಟು ಪಡೆದ ಪುಸ್ತಕಗಳನ್ನು ಓದುವಂತೆಯೂ ಇಲ್ಲ. ಇತರ ಒಳ್ಳೆಯ ಪುಸ್ತಕಗಳ ಜೊತೆ ಇಡುವಂತೆಯೂ ಇಲ್ಲ ಎಂದ ಅವರು ಹಾಸ್ಯವೇ ಆಗಲೀ, ವಿನೋದವೇ ಆಗಿರಲಿ, ಅದು ಗ್ರಾಸ್ಯ ಆಗುವುದೇ ಮುಖ್ಯ ಎಂದರು. ವಾಚಾಳಿತನವಿಲ್ಲದೆ ವ್ಯಂಗ್ಯ,ವಿಡಂಬನೆ ಮತ್ತು ಹಾಸ್ಯ ಸಾಹಿತ್ಯವನ್ನು ವಿಸ್ತರಿಸಿಕೊಂಡು ಹೋಗಲು ಅಸಾಧ್ಯ ಎಂದ ಅವರು ಪ್ರೊ.ಅರ್ತಿಕಜೆ ಅವರಲ್ಲಿ ವಾಚಾಳಿತನ ಇರುವುದರಿಂದಲೇ ಈ ಪುಸ್ತಕ ಸೊಗಸಾಗಿ ಮೂಡಿಬಂದಿದೆ ಎಂದು ತಿಳಿಸಿದರು.

ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದ ಸಾಹಿತಿ ,ನಿವೃತ್ತ ಉಪನ್ಯಾಸಕ ಪ್ರೊ.ಹರಿನಾರಾಯಣ ಮಾಡಾವು ಅವರು ಯಾವುದೇ ಸಾಹಿತ್ಯ ಕೃತಿಗಳು ಹಸ್ತದಿಂದ ಮಸ್ತಕ ಸೇರಿ ಓದುಗನ ಹೃದಯಾಂಗತವಾದಾಗ ಮಾತ್ರ ಕೃತಿ ಪ್ರಕಟಿಸಿದ್ದಕ್ಕೆ ಸಾರ್ಥಕವಾಗುತ್ತದೆ ಎಂದರು. ಸ್ವವಿಡಂನೆ , ಹೊಸ ಗಾದೆ,ಹೊಸ ಶಬ್ಧಗಳ ಸೃಷ್ಠಿಯೊಂದಿಗೆ ಮೂಢಿ ಬಂದಿರುವ ನಗೆ ಮಿಂಚು ಹಾಸ್ಯ ಸಂಕಲನ ಓದಿಸುವಂತಿದೆ.

ನಗೆ ಮಿಂಚು ಪುಸ್ತಕದ ಲೇಖಕ ಪ್ರೊ.ವಿ.ಬಿ.ಅರ್ತಿಕಜೆ ಅವರು ಮಾತನಾಡಿ ಕೃತಜ್ಞತೆ ಸಲ್ಲಿಸಿ, ಸಹಕಾರ ನೀಡಿದ ಪುರಂದರ ಭಟ್ ಮತ್ತು ಹರಿನಾರಾಯಣ ಮಾಡಾವು ಅವರಿಗೆ ಶಾಲು ಹೊದಿಸಿ ಗೌರವಿಸಿದರು. ಕುಶಲ ಹಾಸ್ಯ ಪ್ರೀಯರ ಸಂಘದ ವತಿಯಿಂದ ಅರ್ತಿಕಜೆ ಅವರನ್ನು ಶಾಲು ಹೊದಿಸಿ,ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಕುಶಲ ಹಾಸ್ಯ ಪ್ರೀಯರ ಸಂಘದ ಅಧ್ಯಕ್ಷ ರಮೇಶ್ ಬಾಬು ಅವರು ಸ್ವಾಗತಿಸಿದರು. ಉಪನ್ಯಾಸಕ ರೋಹಿಣಾಕ್ಷ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News