ಉಗ್ರವಾದದ ಪ್ರಸಾರ ಹತ್ತಿಕ್ಕಲು ಸಾಮಾಜಿಕ ತಾಣಗಳಿಗೆ ಜಿ7 ಕರೆ

Update: 2017-05-27 15:14 GMT

   ಟಾವ್‌ರೊಮಿನಾ, ಮೇ 26: ಬ್ರಿಟನ್‌ನ ಮ್ಯಾಂಚೆಸ್ಟರ್‌ನಲ್ಲಿ ನಡೆದ ಭಯೋತ್ಪಾದಕ ದಾಳಿ ಘಟನೆಯ ಹಿನ್ನೆಲೆಯಲ್ಲಿ ಭಯೋತ್ಪಾದನೆಯ ವಿರುದ್ಧ ತಮ್ಮ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಜಿ7 ಸಮೂಹದ ರಾಷ್ಟ್ರಗಳು ಶುಕ್ರವಾರ ಪ್ರತಿಜ್ಞೆ ಮಾಡಿವೆ.

  ಅಂತರ್ಜಾಲ ತಾಣಗಳಲ್ಲಿ ಭಯೋತ್ಪಾದನೆಯನ್ನು ಉತ್ತೇಜಿಸುವ ವಿಷಯಗಳನ್ನು ಪ್ರಸಾರ ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ್ಧ ಇಂಟರ್‌ನೆಟ್ ಸೇವಾದಾರರು ಹಾಗೂ ಸಾಮಾಜಿಕ ಜಾಲತಾಣಗಳು ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ಅವು ಆಗ್ರಹಿಸಿವೆ.

  ಸಿಸಿಲಿಯ ಬಂದರು ವಿಹಾರಧಾಮವಾದ ಟಾರೊಮಿನಾದಲ್ಲಿ ಜಿ7 ರಾಷ್ಟ್ರಗಳು ಆಯೋಜಿಸಿರುವ ಭಯೋತ್ಪಾದನೆ ವಿರುದ್ಧ ಹೋರಾಟ ಕುರಿತ ಚರ್ಚಾಕೂಟದ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಲಾಗಿದೆ. ಬ್ರಿಟನ್ ಪ್ರಧಾನಿ ತೆರೆಸಾ ಮೇ ಸಭೆಯ ಅಧ್ಯಕ್ಷತೆ ವಹಿಸಿದ್ದರು.

‘‘ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ವಿಷಯಗಳನ್ನು ಅಂತರ್ಜಾಲ ತಾಣಗಳಲ್ಲಿ ಪ್ರಸಾರ ಮಾಡುವುದನ್ನು ತಡೆಗಟ್ಟುವ ಪ್ರಯತ್ನಗಳನ್ನು ಗಣನೀಯವಾಗಿ ಹೆಚ್ಚಿಸುವಂತೆ ಜಿ7 ಎಲ್ಲಾ ಸಂವಹನ ಸೇವಾದಾರರಿಗೆ ಹಾಗೂ ಸಾಮಾಜಿಕ ಜಾಲತಾಣ ಸಂಸ್ಥೆಗಳಿಗೆ ಕರೆ ನೀಡುತ್ತದೆ ’’ ಎಂದು ಜಿ7 ಸದಸ್ಯ ರಾಷ್ಟ್ರಗಳು ಜಂಟಿ ಪ್ರಕಟಣೆಯೊಂದರಲ್ಲಿ ತಿಳಿಸಿವೆ.

 ಅಂತಾರ್ಜಾಲ ತಾಣಗಳಲ್ಲಿ ಹಿಂಸೆಯನ್ನು ಪ್ರಚೋದಿಸುವ ವಿಷಯಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚುವ ತಂತ್ರಜ್ಞಾನ ಹಾಗೂ ಸಾಧನಗಳನ್ನು ಅಭಿವೃದ್ಧಿಪಡಿಸಲು ಹಾಗೂ ಹೊಸ ತಂತ್ರಜ್ಞಾನವನ್ನು ಹಂಚಿಕೊಳ್ಳುವ ನಿಟ್ಟಿನಲ್ಲಿ ತುರ್ತಾಗಿ ಕಾರ್ಯಪ್ರವೃತ್ತವಾಗುವಂತೆ ನಾವು ಅಂತರ್ಜಾಲ ಉದ್ಯಮವನ್ನು ಪ್ರೋತ್ಸಾಹಿಸುತ್ತೇವೆ’’ ಎಂದು ಜಿ7 ಒಕ್ಕೂಟವು ಹೇಳಿಕೆಯೊಂದರಲ್ಲಿ ತಿಳಿಸಿದೆ.

 ಸಿರಿಯದಂತಹ ಯುದ್ಧಭೂಮಿಗಳಿಂದ ಚದುರಿಹೋಗಿರುವ ವಿದೇಶಿ ಉಗ್ರರನ್ನು ಪತ್ತೆಹಚ್ಚುವ ಹಾಗೂ ಅವರನ್ನು ವಿಚಾರಣೆಗೊಳಪಡಿಸುವ ನಿಟ್ಟಿನಲ್ಲಿ ಸಾಮೂಹಿಕವಾಗಿ ಪ್ರಯತ್ನಿಸಲು ಜಿ7 ರಾಷ್ಟ್ರಗಳು ನಿರ್ಧರಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News