ಲಿಬಿಯದ ಉಗ್ರ ನೆಲೆಗಳ ಮೇಲೆ ಈಜಿಪ್ಟ್ ವಾಯುದಾಳಿ

Update: 2017-05-27 15:20 GMT

ಕೈರೋ,ಮೇ 27: ಈಜಿಪ್ಟ್ ರಾಜಧಾನಿ ಕೈರೋದಲ್ಲಿ ಶಂಕಿತ ಐಸಿಸ್ ಉಗ್ರರ ದಾಳಿಗೆ 28 ಮಂದಿ ಕ್ರೈಸ್ತರು ಬಲಿಯಾದ ಘಟನೆಯ ಬೆನ್ನಲ್ಲೇ ಈಜಿಪ್ಟ್ ಸೇನೆ ಲಿಬಿಯದಲ್ಲಿರುವ ಭಯೋತ್ಪಾದಕ ಗುಂಪುಗಳ ನೆಲೆಗಳ ಮೇಲೆ ತೀವ್ರವಾದ ವಾಯುದಾಳಿಯನ್ನು ಆರಂಭಿಸಿದೆಯೆಂದು ಸೇನಾ ವಕ್ತಾರರೊಬ್ಬರು ತಿಳಿಸಿದ್ದಾರೆ.

 ಈಜಿಪ್ಟ್ ಸೇನೆಯ ಈ ಪ್ರತೀಕಾರ ದಾಳಿಯ ವಿಡಿಯೋ ತುಣುಕುಗಳನ್ನು, ಈಜಿಪ್ಟ್ ಸೇನಾ ವಕ್ತಾರ ತಾಮೆರ್ ರಿಫಾಯಿ ಅವರು ಸಾಮಾಜಿಕ ಜಾಲತಾಣಗಳಿಗೆ ಬಿಡುಗಡೆ ಗೊಳಿಸಿದ್ದಾರೆ. ಸೇನಾ ಕಾರ್ಯಾಚರಣೆ ಈಗಲೂ ಮುಂದುವರಿದಿದೆಯೆಂದು ಅವರು ತಿಳಿಸಿದ್ದಾರೆ. ಕೈರೋದಲ್ಲಿ ಕ್ರೈಸ್ತರ ಮೇಲೆ ನಡೆದ ದಾಳಿಯಲ್ಲಿ ಭಯೋತ್ಪಾದಕರು ಶಾಮೀಲಾಗಿರುವ ಕುರಿತ ಮಾಹಿತಿಯನ್ನು ಈಜಿಪ್ಟ್ ಸೇನೆ ಕಲೆಹಾಕಿದ ಬಳಿಕ ಅದು ಉಗ್ರರ ನೆಲೆಗಳ ಮೇಲೆ ವಾಯುದಾಳಿ ಆರಂಭಿಸಿರುವುದಾಗಿ ಅವರು ಹೇಳಿಕೆಯಲ್ಲಿ ತಿಳಿಸಿದ್ದಾಎ.

 ಶುಕ್ರವಾರ ಮುಸುಕುಧರಿಸಿದ ಬಂದೂಕುಧಾರಿಗಳು ಮಿನ್ಯಾ ಪ್ರಾಂತದಲ್ಲಿರು ಅನ್ಬಾ ಸ್ಯಾಮುಯೆಲ್ ಕ್ರೈಸ್ತ ಪ್ರಾರ್ಥನಾಲಯಕ್ಕೆ ಕಾಪ್ಟಿಕ್ ಪಂಥದ ಕ್ರೈಸ್ತರು ಪ್ರಯಾಣಿಸುತ್ತಿದ್ದ ಬಸ್‌ಹಾಗೂ ಇತರ ವಾಹನಗಳ ಮೇಲೆ ದಾಳಿ ನಡೆಸಿಕನಿಷ್ಠ 28 ಮಂದಿಯನ್ನು ಹತ್ಯೆಗೈದಿದ್ದರು.

ಹಂತಕರು 8ರಿಂದ 10ರಷ್ಟಿದ್ದು ಅವರು ಸೇನಾ ಸಮವಸ್ತ್ರಗಳನ್ನು ಧರಿಸಿದ್ದರೆಂದು ವರದಿಗಳು ತಿಳಿಸಿವೆ. ದಾಳಿ ನಡೆದ ಬೆನ್ನಲ್ಲೇ ಈಜಿಪ್ಟ್ ಅಧ್ಯಷ ಅಬ್ಜೆಲ್ ಫತಹ್ ಅಲ್ ಸಿಸಿ ಅವರು ಈಜಿಪ್ಟ್‌ನಲ್ಲಿ ಅಥವಾ ಹೊರಗಡೆ ಉಗ್ರರು ಈಜಿಪ್ಟ್ ವಿರುದ್ಧ ದಾಳಿಗೆ ತರಬೇತು ಪಡೆಯುತ್ತಿರುವ ನೆಲೆಗಳ ಮೇಲೆ ದಾಳಿ ನಡೆಸುವುದಾಗಿ ಶಪಥಗೈದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News