ಮನವಿಗೆ ಸ್ಪಂದನೆ: ಪಾಳು ಬಿದ್ದ ಬಾವಿಯ ದುರಸ್ಥಿ
ಉಡುಪಿ, ಮೇ 27: ಅಜ್ಜರಕಾಡು ಕಿತ್ತೂರು ಚೆನ್ನಮ್ಮ ಮಾರ್ಗದ ಲೋಕೋಪಯೋಗಿ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿ ಆವರಣ ಗೋಡೆಯ ಮುಂಭಾಗದಲ್ಲಿರುವ ಪಾಳು ಬಿದ್ದ ಸರಕಾರಿ ತೆರೆದ ಬಾವಿಯನ್ನು ದುರಸ್ತಿ ಮಾಡುವಂತೆ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಜಿಲ್ಲಾಡಳಿತ, ಇದೀಗ ಬಾವಿಯ ದುರಸ್ತಿ ಕಾರ್ಯವನ್ನು ಕೈಗೆತ್ತಿಕೊಂಡಿದೆ.
ಈ ಬಾವಿಯು ಪಾಳು ಬಿದ್ದು ಹಲವು ದಶಕಗಳೆ ಕಳೆದಿದ್ದು. ದುರಂತಗಳಿಗೆ ಆಹ್ವಾನಿಸುವ ಸ್ಥಿತಿಯಲ್ಲಿತ್ತು. ಸಾರ್ವಜನಿಕರ ಹಿತದೃಷ್ಠಿಯಿಂದ ಸರಕಾರಿ ಬಾವಿ ಶುಚಿಗೊಳಿಸಿ, ಆವರಣ ಗೋಡೆ ಕಟ್ಟಿ ಜಲಮೂಲವನ್ನು ಸಂರಕ್ಷಿಸುವ ಕುರಿತು, ಸಾಮಾಜಿಕ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿ ಅನುರಾಧ ಜಿ. ಮೂಲಕ ಜಿಲ್ಲಾಡಳಿತಕ್ಕೆ ಮೇ 22ರಂದು ಮನವಿ ಸಲ್ಲಿಸಿದ್ದರು.
ಮನವಿಯನ್ನು ಸ್ವೀಕರಿಸಿದ ಅಧಿಕಾರಿಗಳು ಬಾವಿ ಶುಚಿಗೊಳಿಸಿ ದುರಸ್ಥಿ ಪಡಿ ಸುವ ಭರವಸೆ ನೀಡಿದ್ದರು. ಈಗ ಬಾವಿಯ ದುರಸ್ಥಿಕಾರ್ಯ ಭರದಿಂದ ಸಾಗುತ್ತಿದೆ. ಪರಿಸರದ ಬಾವಿಗಳಲ್ಲಿ ನೀರು ಬತ್ತಿದರೂ ಈ ಬಾವಿಯಲ್ಲಿ ಕೊನೆ ಯವರೆಗೆ ನೀರು ಇರುತ್ತಿತ್ತೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮನವಿಗೆ ಸ್ಪಂದಿಸಿ ಶಿಘ್ರಗತಿಯಲ್ಲಿ ಕಾಮಗಾರಿಗೆ ಮುಂದಾದ ಜಿಲ್ಲಾ ಡಳಿತ, ನಗರಾಡಳಿತವನ್ನು ಸಾರ್ವಜನಿಕರು ಅಭಿನಂದಿಸಿದ್ದಾರೆ.