×
Ad

ಸಣ್ಣ ಮಕ್ಕಳನ್ನು ಪತ್ತೆ ಹಚ್ಚುವ ಸಾಧನ ಅಭಿವೃದ್ಧಿ

Update: 2017-05-27 21:16 IST

ಶಿರ್ವ, ಮೇ 27: ಅಪಹರಣಕ್ಕೆ ಒಳಗಾದ ಸಣ್ಣ ಮಕ್ಕಳನ್ನು ಪತ್ತೆ ಹಚ್ಚುವ ಸಾಧನವೊಂದನ್ನು ಬಂಟಕಲ್ಲು ಶ್ರೀಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾ ಲಯದ ವಿದ್ಯಾರ್ಥಿಗಳು ಅಭಿವೃದ್ಧಿ ಪಡಿಸಿದ್ದಾರೆ.

 ಇಂದು ಸಮಾಜದಲ್ಲಿ ಮಕ್ಕಳ ಅಪಹರಣದ ಸಂಖ್ಯೆ ಪ್ರತಿದಿನ ಏರುತ್ತಿದೆ. ಇದಕ್ಕೆ ಮುಖ್ಯ ಕಾರಣ ತಂದೆತಾಯಿ ತಮ್ಮ ದಿನನಿತ್ಯದ ಕೆಲಸದಲ್ಲಿ ತಲ್ಲೀನರಾಗಿ ಮಕ್ಕಳನ್ನು ನೋಡಿಕೊಳ್ಳಲು ಅಸಾಧ್ಯವಾಗಿರುವುದು. ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೊ ಪ್ರಕಾರ ಪ್ರತಿ ಎಂಟು ನಿಮಿಷಗಳಲ್ಲಿ ಒಂದು ಮಗುವಿನ ಅಪಹರಣವಾಗುತ್ತದೆ. ಬಾಲಕಾರ್ಮಿಕ, ಭಿಕ್ಷಾಟನೆ ಮತ್ತು ಲೈಂಗಿಕ ಶೋಷಣೆ ಗಳಿಗಾಗಿ ಭಾರತದಲ್ಲಿ ಅಪಾರ ಸಂಖ್ಯೆಯಲ್ಲಿ ಮಕ್ಕಳ ಕಳ್ಳಸಾಗಣೆ ನಡೆಯುತ್ತಿದೆ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವರದಿಯ ಪ್ರಕಾರ ಸುಮಾರು 40,000 ಮಕ್ಕಳನ್ನು ಪ್ರತಿ ವರ್ಷ ಅಪಹರಿಸಲಾಗುತ್ತಿದೆ. ಇದರಲ್ಲಿ ಸುಮಾರು 11,000 ಮಕ್ಕಳನ್ನು ಪತ್ತೆ ಹಚ್ಚಲು ಸಾಧ್ಯವಾಗುತ್ತಿಲ್ಲ. ಇದಕ್ಕೆಲ್ಲ ಪರಿಹಾರ ಸೂಚಿಸುವ ದಿಶೆಯಲ್ಲಿ ಇಲ್ಲಿದೆ ಒಂದು ಪ್ರಯತ್ನ.

ಈ ಯೋಜನೆಯಲ್ಲಿ ಮುಖ್ಯವಾಗಿ ರಾಸ್ಬರಿ ಪೈ 3, ಜಿಪಿಎಸ್ ಮತ್ತು ಆಂಡ್ರ್ಯೋಡ್ ಆ್ಯಪ್‌ಗಳನ್ನು ಬಳಸಲಾಗಿದೆ. ಇವುಗಳನ್ನು ಸಂಯೋಜಿಸಿ ಒಂದು ಚಿಪ್‌ನ ರೂಪದಲ್ಲಿ ಮಗುವಿನ ಶಾಲಾ ಸಮವಸ್ತ್ರದ ಒಂದು ಗುಪ್ತ ಜಾಗದಲ್ಲಿ ಅಳವಡಿಸಲಾಗುವುದು. ವಿದ್ಯುತ್ ಸಂಪರ್ಕದ ಮೂಲಕ ರಾಸ್ಬರಿ ಪೈಯನ್ನು ಜಿಪಿಎಸ್‌ಗೆ ಜೋಡಿಸಿ ಅದರಿಂದ ಉಪಲಬ್ದವಾಗುವ ವಿವರಗಳಾದ ಅಕ್ಷಾಂಶ ಮತ್ತು ರೇಖಾಂಶಗಳನ್ನು ಡೇಟಾ ಬೇಸ್‌ಗೆ ಅಂತರ್ಜಾಲದ ಬಳಕೆಯಿಂದ ಕಳುಹಿಸಲಾಗುವುದು. ಈ ವಿವರಗಳನ್ನು ವೀಕ್ಷಿಸಲು ಒಂದು ಆಂಡ್ರ್ಯೋಡ್ ಆ್ಯಪನ್ನು ಅಭಿವೃದ್ಧಿ ಪಡಿಸಲಾಗಿದೆ. ಈ ಆ್ಯಪ್‌ನ ಮೂಲಕ ತಂದೆ ತಾಯಿ ತಮ್ಮ ಮಕ್ಕಳ ಮೇಲೆ ಪ್ರತಿಕ್ಷಣ ನಿಗಾ ವಹಿಸಬಹುದು.

ಇದನ್ನು ಹೊರತುಪಡಿಸಿ ಈ ಆ್ಯಪ್‌ನ ಹಲವು ಉಪಯೋಗಗಳು ಇಂತಿವೆ. ಯಾವುದೇ ಸಮಯದಲ್ಲಿ ತಮ್ಮ ಮಕ್ಕಳ ಸ್ಥಳವನ್ನು ಆಂಡ್ರ್ಯೋಡ್ ಆ್ಯಪ್‌ನ ಮುಖಾಂತರ ನಕ್ಷೆಯ ರೂಪದಲ್ಲಿ ನೋಡಬಹುದು. ಮಗುವಿನ ವೇಗದ ಗತಿ ನಿರ್ದಿಷ್ಟ ಪಡಿಸಿದ ಗತಿಯನ್ನು ಮೀರಿದರೆ ಈ ವಿವರವು ಸಂದೇಶದ ರೂಪದಲ್ಲಿ ತಂದೆತಾಯಿಯ ಮೊಬೈಲ್ ಫೋನ್‌ನಲ್ಲಿ ಹೋಗುತ್ತದೆ. ಸೆಟ್‌ರೇಂಜ್ ಎಂಬ ಆಯ್ಕೆಯಿಂದ ಅವರು ನಿರ್ದಿಷ್ಟ ಪರಿಧಿಯನ್ನು ನಿಗದಿಪಡಿಸಬಹುದು. ಒಂದು ವೇಳೆ ನಿಗದಿಪಡಿಸಿದ ಪರಿಧಿಯಿಂದ ಮಗುವು ಹೊರಗೆ ಹೋದಲ್ಲಿ ಆ ಮಗು ಇರುವ ಸ್ಥಳದ ಅಕ್ಷಾಂಶ ಮತ್ತು ರೇಖಾಂಶವು ತಂದೆತಾಯಿಯ ಮೊಬೈಲ್ ಫೋನ್‌ನಲ್ಲಿ ಸಂದೇಶದ ರೂಪದಲ್ಲಿ ಹೋಗುತ್ತದೆ. ಮಗು ಚಲಿಸುವ ದಾರಿಯ ನಕ್ಷಾ ರೂಪದ ರೇಖೆಯನ್ನು ಕೂಡ ಈ ಆ್ಯಪ್‌ನಲ್ಲಿ ಕಾಣಬಹುದು.

‘ಈ ಆ್ಯಪ್ ಮುಖ್ಯವಾಗಿ ಕೆಲಸಕ್ಕೆ ಹೋಗುವ ತಂದೆತಾಯಿಯಂದಿರ ಮಾನಸಿಕ ನೆಮ್ಮದಿಯ ಮೇಲೆ ಧನಾತ್ಮಕ ಪರಿಣಾಮ ಬೀರುವಲ್ಲಿ ಸಫಲವಾಗು ತ್ತದೆ. ತಂದೆತಾಯಿ ತಮ್ಮ ಮಕ್ಕಳ ಬಗ್ಗೆ ಅನಗತ್ಯ ಚಿಂತಿಸುವುದನ್ನು ತಪ್ಪಿಸಿ ಶಾಂತಿ ಯಿಂದ ತಮ್ಮ ದೈನಂದಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಇದು ಸಹಕಾರಿ. ಈ ಮೂಲಕ ಸಮಾಜದಲ್ಲಿ ಉಂಟಾಗುತ್ತಿರುವ ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಅಪರಾಧದ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಾಣ ಬಹುದು ಎಂದು ಗಣಕಯಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಿ.ಎನ್. ರಾಮಚಂದ್ರ ಮಾರ್ಗದರ್ಶನದಲ್ಲಿ ಸಾಧನ ಅಭಿವೃದ್ದಿ ಪಡಿಸಿದ ವಿದ್ಯಾರ್ಥಿ ಗಳಾದ ಶ್ರೀರಾಜ್, ನಿಶ್ಮಿತಾ, ನಿವೇದಿತಾ ಹಾಗೂ ಸಾತ್ವಿಕ್ ಹೇಳುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News