ಭುವನ್ ಪಂ. ಮೊಬೈಲ್ ಅಪ್ಲಿಕೇಶನ್ ಅನುಷ್ಠಾನ
ಮಂಗಳೂರು, ಮೇ 27: ತಾಲೂಕು ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಗ್ರಾಮಗಳ ಆಸ್ತಿ ವಿವರಗಳನ್ನು ಉಪಗ್ರಹ ಆಧಾರಿತವಾಗಿ ಪರಿವರ್ತಿಸುವ ಯೋಜನೆಯನ್ನು ಭಾರತೀಯ ಬಾಹ್ಯಾಕಾಶ ಸಂಶೋದನಾ ಸಂಸ್ಥೆ (ಇಸ್ರೊ)ದ ಅಂಗ ಸಂಸ್ಥೆಯಾದ ನ್ಯಾಶನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಹೈದರಾಬಾಗ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮತ್ತು ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು, ಮೂಡುಬಿದಿರೆ ಇವರ ಜಂಟಿ ಸಹಭಾಗಿತ್ವದಲ್ಲಿ ಅನುಷ್ಟಾನಗೊಂಡಿದೆ.
ಮೊದಲಿಗೆ ಭುವನ್ ಪಂಚಾಯತ್ ಯೋಜನೆ ಬಗ್ಗೆ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ಪ್ರಾಧ್ಯಾಪಕರು ನ್ಯಾಶನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಹೈದರಾಬಾದ್‌ನಲ್ಲಿ ತರಬೇತಿ ಪಡೆದರು.ಅನಂತರ ಯೋಜನೆಯ ಬಗ್ಗೆ ಆಳ್ವಾಸ್ ಸಂಸ್ಥೆಯ ಟ್ರಸ್ಟಿಗಳಾದಂತಹ ವಿವೇಕ್ ಆಳ್ವರವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಎಮ್. ಆರ್. ರವಿಯವರ ಜೊತೆ ಚರ್ಚಿಸಿ ಅವರ ಒಪ್ಪಿಗೆ ಪಡೆದ ನಂತರ ಅವರ ಸಲಹೆಯ ಮೇರೆಗೆ ನ್ಯಾಶನಲ್ ರಿಮೋಟ್ ಸೆನ್ಸಿಂಗ್ ಸೆಂಟರ್ ಹೈದರಾಬಾದ್, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮತ್ತು ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯ ಪರಸ್ಪರ ಒಡಂಬಡಿಕೆಗೆ ಸಹಿ ಹಾಕಿದರು.
ಈ ಯೋಜನೆಯ ಮುಂದುವರಿದ ಭಾಗವಾಗಿ ನ್ಯಾಶನಲ್ ರಿಮೋಟ್ ಸೆನ್ಸಿಂಗ್ ಸೆಂಟರ್‌ನ ವಿಜ್ಞಾನಿ ಡಾ.ಜಯಶೀಲನ್ ಮತ್ತವರ ತಂಡ ಹಾಗೂ ಆಳ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ತರಬೇತಿ ಪಡೆದ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಗಳೂರು ತಾಲೂಕು ವ್ಯಾಪ್ತಿಯ ಜಿಲ್ಲಾ ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಭುವನ್ ಪಂಚಾಯತ್ ಯೋಜನೆಯನ್ನು ಪರಿಚಯಿಸಿದರು.
ಯೋಜನೆಯ ಮುಂದುವರಿದ ಭಾಗವಾಗಿ ಪ್ರತಿ ಗ್ರಾಮ ಪಂಚಾಯತ್‌ನ ಎಲ್ಲಾ ಸದಸ್ಯರಿಗೆ ಪಿಡಿಒಗಳ ಸಲಹೆಯ ಮೇರೆಗೆ ಆಳ್ವಾಸ್‌ನ ತರಬೇತಿ ಪಡೆದ 5 ಜನ ಉಪನ್ಯಾಸಕರು ಮತ್ತು 30 ವಿದ್ಯಾರ್ಥಿಗಳ ತಂಡ ಯೋಜನೆಯ ಬಗ್ಗೆ ಪಂಚಾಯತ್ ವ್ಯಾಪ್ತಿಯಲ್ಲಿ ಸದಸ್ಯರಿಗೆ ತರಬೇತಿ ನೀಡಿದರು.
ಈ ಯೋಜನೆಯ ಅನುಷ್ಟಾನದಲ್ಲಿ ಆಳ್ವಾಸ್ ನ 55 ಪ್ರಾಧ್ಯಾಪಕರು ಮತ್ತು 330 ವಿದ್ಯಾರ್ಥಿಗಳು 25 ದಿನಗಳು ಭಾಗವಹಿಸಿ ಸುಮಾರು 5000 ಆಸ್ತಿಗಳನ್ನು ಉಪಗ್ರಹ ಆಧಾರಿತವಾಗಿ ಪರಿವರ್ತಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.