×
Ad

14 ಕೆ.ಜಿ. ಗಾಂಜಾ ವಶ: ಇಬ್ಬರ ಬಂಧನ

Update: 2017-05-27 22:27 IST

ಮಂಗಳೂರು, ಮೇ 27: ಖಚಿತ ಮಾಹಿತಿ ಮೇರೆಗೆ ವಾಹನ ತಪಾಸಣೆ ಸಂದರ್ಭದಲ್ಲಿ ಪೊಲೀಸರು ಕಾರೊಂದರಲ್ಲಿ ಸಾಗಾಟವಾಗುತ್ತಿದ್ದ 14 ಕೆ.ಜಿ. ಗಾಂಜಾವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ.

ಬಂಟ್ವಾಳ ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್ ಅಬ್ದುಲ್ ಅಝೀಝ್ (35), ನರಿಂಗಾನ ಗ್ರಾಮದ ಮುಹಮ್ಮದ್ ಮುಸ್ತಫಾ ಯಾನೆ ಗಿಡಿ (44) ಬಂಧಿತ ಆರೋಪಿಗಳು.

ಅಬ್ದುಲ್ ಅಝೀಝ್ ಈ ಹಿಂದೆ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯಾಗಿದ್ದು, ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶನಿವಾರ ಸಿಸಿಬಿ ಘಟಕದ ಎಸಿಪಿ ವೆಲೆಂಟೈನ್ ಡಿಸೋಜ ಮತ್ತು ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಶ್ಯಾಮ್ ಸುಂದರ್ ರೌಂಡ್ಸ್ ಕರ್ತವ್ಯದಲ್ಲಿದ್ದರು.

ಈ ಸಮಯದಲ್ಲಿ ಸಿಲ್ವರ್ ಬಣ್ಣದ ಮಾರುತಿ 800 ಕಾರಿನಲ್ಲಿ ಗಾಂಜಾವನ್ನು ಸಾಗಿಸುತ್ತಿದ್ದಾರೆ ಎಂಬುದಾಗಿ ಬಂದ ಮಾಹಿತಿಯಂತೆ ಮುಡಿಪು ಬಳಿಯ ಕಾಯರ್‌ಗೋಳಿ ಕ್ರಾಸ್ ಬಳಿಯಲ್ಲಿ ವಾಹನ ತಪಾಸಣೆ ನಡೆಸಲಾಗಿತ್ತು. ಅದೇ ಮಾರ್ಗವಾಗಿ ಬಂದ ಮಾರುತಿ ಕಾರನ್ನು ನಿಲ್ಲಿಸಲಾಗಿದ್ದು, ಅದರಲ್ಲಿ ಇಬ್ಬರು ಆರೋಪಿಗಳಿದ್ದು, ಅವರನ್ನು ಬಂಧಿಸಿ ಗಾಂಜಾವನ್ನು ವಶಪಕ್ಕೆ ಪಡೆಯಲಾಗಿದೆ.

ಆಂದ್ರಪ್ರದೇಶದ ಪಳಮನೀರ್ ಎಂಬಲ್ಲಿರುವ ಶೇಖ್ ಸಲೀಂ ಭಾಷಾ ಎಂಬವನಿಂದ 14 ಕೆ.ಜಿ ಗಾಂಜಾವನ್ನು ತೆಗೆದುಕೊಂಡು ಬಂದಿದ್ದು, ಕೇರಳ ರಾಜ್ಯದ ಮಂಜೇಶ್ವರ, ಉಪ್ಪಳಕ್ಕೆ ಮಾರಾಟ ಮಾಡುವುದಾಗಿ ಆರೋಪಿಗಳು ತಿಳಿಸಿದರು.

ಸಿಸಿಬಿ ಪೊಲೀಸರು ಗಾಂಜಾ, ಕಾರು, ಮೊಬೈಲ್ ಪೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಸ್ವಾಧೀನಪಡಿಸಿಕೊಂಡಿರುವ ಸೊತ್ತುಗಳ ಮೌಲ್ಯ 3,35,400 ರೂ. ಎಂದು ಅಂದಾಜಿಸಲಾಗಿದೆ. ಪೊಲೀಸ್ ಆಯುಕ್ತ ಎಂ.ಚಂದ್ರಶೇಖರ್ ಅವರ ಆದೇಶದಂತೆ ಉಪ ಪೊಲೀಸ್ ಆಯುಕ್ತ ಡಾ. ಸಂಜೀವ ಎಂ.ಪಾಟೀಲ್ ನಿರ್ದೇಶನದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News