ಖುರೇಶಿ ಪ್ರಕರಣ: ಮತ್ತೆ ಸಿಐಡಿಯಿಂದ ವಿಚಾರಣೆ
ಮಂಗಳೂರು, ಮೇ 27: ಕೊಲೆ ಯತ್ನ ಪ್ರಕರಣದ ಆರೋಪಿ ಅಹ್ಮದ್ ಖುರೇಷಿ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ್ದಾರೆಂಬ ಆರೋಪದ ತನಿಖೆ ನಡೆಸುತ್ತಿರುವ ಸಿಐಡಿ ತಂಡವು ಮೇ 25 ಮತ್ತು ಮೇ 26ರಂದು ಮತ್ತೆ ಮಂಗಳೂರಿಗೆ ಆಗಮಿಸಿ ವಿಚಾರಣೆ ನಡೆಸಿದೆ.
ಮೇ 25ರಂದು ಬೆಳಗ್ಗೆ ಬಂದ ತಂಡ ಖುರೇಷಿ ಸೇರಿದಂತೆ ಸಾಕ್ಷಿಗಳ ವಿಚಾರಣೆ ನಡೆಸಿದೆ. ಬಳಿಕ ಖುರೇಷಿ ನೀಡಿದ ಮಾಹಿತಿ ಮೇಲೆ ಕೆಲವು ಸ್ಥಳದ ಪರಿಶೀಲನೆ ನಡೆಸಿದೆ. ಈ ಸಂದರ್ಭದಲ್ಲಿ ಖುರೇಶಿಯು ಪೊಲೀಸರು ತನ್ನನ್ನು ಗುಪ್ತವಾಗಿ ಇಟ್ಟಿದ್ದ ಸೋಮೇಶ್ವರ ಬೀಚ್ ಬಳಿಯ ಮನೆ ಹಾಗೂ ನಂತೂರಿನ ಫ್ಲಾಟ್‌ವನ್ನು ಅಧಿಕಾರಿಗಳಿಗೆ ತೋರಿಸಿದ್ದಾರೆ. ಸಿಐಡಿ ಅಧಿಕಾರಿಗಳು ಸ್ಥಳಗಳನ್ನು ವಿಡಿಯೋ ಮೂಲಕ ದಾಖಲೀಕರಣ ಮಾಡಿದ್ದಾರೆ ಎಂದು ಖುರೇಷಿ ಪರ ವಕೀಲ ದಿನೇಶ್ ಹೆಗ್ಡೆ ಉಳೇಪಾಡಿ ತಿಳಿಸಿದ್ದಾರೆ.
ಮಾನಹಕ್ಕು ಆಯೋಗದಿಂದ ವಿಚಾರಣೆ: ಮಾನವ ಹಕ್ಕು ಆಯೋಗವು ಬೆಂಗಳೂರಿನಲ್ಲಿ ಶನಿವಾರ ಅಹ್ಮದ್ ಖುರೇಶಿ, ಆತನ ಸಹೋದರ ನಿಶಾದ್ ಮತ್ತು ಇಬ್ಬರು ಸಾಕ್ಷಿದಾರರನ್ನು ವಿಚಾರಣೆ ನಡೆಸಿದ್ದಾರೆ ಎಂದು ಉಳೇಪಾಡಿ ತಿಳಿಸಿದ್ದಾರೆ.