×
Ad

ಮೊಗ್ರಾಲ್ ಸರಕಾರಿ ಯುನಾನಿ ಆಸ್ಪತ್ರೆಯಲ್ಲಿ ಮದ್ದಿಲ್ಲ!

Update: 2017-05-28 15:14 IST

ಕಾಸರಗೋಡು, ಮೇ 28: ಮೊಗ್ರಾಲ್ ನಲ್ಲಿರುವ ಸರಕಾರಿ ಯುನಾನಿ ಆಸ್ಪತ್ರೆ ಮೇಲ್ದರ್ಜೆಗೇರಿಸುವ ಭರವಸೆ ಕಡತದಲ್ಲೇ ಉಳಿದಿದ್ದು, ದಿನಂಪ್ರತಿ ನೂರಾರು ರೋಗಿಗಳಿಗೆ ನೆರವಾಗಬೇಕಾದ ಆಸ್ಪತ್ರೆಗೇ ಮದ್ದು ನೀಡಬೇಕಾದ ಅನಿವಾರ್ಯತೆ ಎದುರಾಗಿದೆ.

25 ವರ್ಷಗಳ ಹಿಂದೆ ಆರಂಭವಾಗಿದ್ದ ಕೇರಳದ ಏಕೈಕ ಯುನಾನಿ ಆಸ್ಪತ್ರೆ ಎಂಬ  ಹೆಗ್ಗಳಿಕೆಗೆ ಪಾತ್ರವಾಗಿದ್ದ ಮೊಗ್ರಾಲ್ ಆಸ್ಪತ್ರೆಯಲ್ಲೀಗ ಔಷಧಿಗಳ ಕೊರತೆ ಸಮಸ್ಯೆ ಉಂಟಾಗಿದೆ. ಕುಂಬಳೆ ಗ್ರಾಮ ಪಂಚಾಯತ್  ಔಷಧಿಗೆ ಅಗತ್ಯವಾದ ಅನುದಾನ ಒದಗಿಸಿದ್ದರೂ ಟೆಂಡರ್ ಪ್ರಕ್ರಿಯೆ ವಿಳಂಬವಾದುದರಿಂದ ಔಷಧಿ ಕೊರತೆಗೆ ಉಂಟಾಗಿದೆ.

ಕಳೆದ ಆರ್ಥಿಕ ವರ್ಷ 5 ಲಕ್ಷ ರೂ. ಮೊತ್ತವನ್ನು ಔಷಧಿಗಾಗಿ ಕುಂಬಳೆ ಗ್ರಾಮ ಪಂಚಾಯತ್ ತೆಗೆದಿರಿಸಿತ್ತು. ಆದರೆ ಅನುದಾನ ಸಮಯಕ್ಕನುಗುಣವಾಗಿ ಬಳಸದೆ ಇರುವುದು ಔಷಧಿ ಖರೀದಿ ಸ್ಥಗಿತಗೊಳ್ಳಲು ಕಾರಣವಾಗಿದೆ. ನೂರಾರು ರೋಗಿಗಳು ಮೊಗ್ರಾಲ್ ನ ಯುನಾನಿ ಆಸ್ಪತ್ರೆಗೆ ತಲಪುತ್ತಾರೆ. ಇದರ ಜೊತೆಗೆ ಆಸ್ಪತ್ರೆಗೆ ಲ್ಯಾಬ್  ಟೆಕ್ನಿಷಿಯನ್ ನೇಮಕ ವಿಳಂಬವಾಗುತ್ತಿದೆ. ಆಸ್ಪತ್ರೆಯ ಲ್ಯಾಬ್  ಉದ್ಘಾಟನೆ ನಡೆದಿಲ್ಲ. ಲ್ಯಾಬ್ ಗೆ ಎಲ್ಲಾ ವ್ಯವಸ್ಥೆ ತಿಂಗಳುಗಳ ಹಿಂದೆಯೇ ಕಲ್ಪಿಸಿದ್ದರೂ  ಮುಂದಿನ ಪ್ರಕ್ರಿಯೆ ನಡೆದಿಲ್ಲ.

ಮಳೆಗಾಲ ಹತ್ತಿರವಾಗುತ್ತಿರುವುದರಿಂದ ಅಗತ್ಯ  ಔಷಧಿ, ಸೌಲಭ್ಯಗಳು ಇಲ್ಲದಿರುವುದು ಸಮಸ್ಯೆಗೆ ಕಾರಣವಾಗಿದ್ದು, ಕೂಡಲೇ ಅಗತ್ಯ ಔಷಧಿ, ಸೌಲಭ್ಯ  ಕಲ್ಪಿಸಬೇಕೆಂಬ  ಒತ್ತಾಯ ಕೇಳಿಬರುತ್ತಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News