ನೈಜ ಘಟನೆ ತಿರುಚಿದ ಪೊಲೀಸರು: ಕಲ್ಲಡ್ಕ ಪ್ರಭಾಕರ ಭಟ್ ಆರೋಪ

Update: 2017-05-28 09:51 GMT

ಮಂಗಳೂರು, ಮೇ 28: ಕಲ್ಲಡ್ಕದಲ್ಲಿ ಶುಕ್ರವಾರ ನಡೆದ ಪ್ರಕರಣವನ್ನು ಪೊಲೀಸರು ತಿರುಚಿ ಹಿಂದೂ ಯುವಕರ ಮೇಲೆ ಕೇಸು ದಾಖಲಿಸಿದ್ದಾರೆ. ವೈಯಕ್ತಿಕ ಘಟನೆಗೆ ಕೋಮು ಬಣ್ಣ ಹಚ್ಚಿದ್ದಾರೆ. ಗುಂಪೊಂದು ಶನಿವಾರ ಅಂಗಡಿಗಳನ್ನು ಬಲವಂತವಾಗಿ ಬಂದ್ ಮಾಡಿಸುತ್ತಿದ್ದರೂ, ಪೊಲೀಸರು ಮೌನ ತಾಳಿದ್ದಾರೆ ಎಂದು ಆರೆಸ್ಸೆಸ್ ದಕ್ಷಿಣ ಕ್ಷೇತ್ರೀಯ ಕಾರ್ಯಕಾರಿಣಿ ಸದಸ್ಯ ಡಾ. ಪ್ರಭಾಕರ ಭಟ್ ಕಲ್ಲಡ್ಕ ಆರೋಪಿಸಿದ್ದಾರೆ.

ರವಿವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶುಕ್ರವಾರ ಯತಿನ್ ಎಂಬ ಯುವಕ ಬೈಕ್‌ನಲ್ಲಿ ಬಂದು ಪಂಚವಟಿ ಕಟ್ಟಡದ ಎದುರು ಬೈಕ್ ನಿಲ್ಲಿಸಿ ಒಳ ದಾರಿಯ ಮೂಲಕ ಪುತ್ತೂರು ರಸ್ತೆಗೆ ಬಂದಾಗ 7-8 ಜನ ಯುವಕರು ಅವನನ್ನು ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ನಿಂದಿಸಿದ ಹಿನ್ನೆಲೆಯಲ್ಲಿ ಗಲಾಟೆ ನಡೆದಿದೆ. ಆದರೆ ರಾಜಕೀಯ ದುರುದ್ದೇಶದಿಂದ ಮಸೀದಿ ಬಿಟ್ಟು ಹೋಗುವಾಗ ಬೆಂಬತ್ತಿ ಚೂರಿ ಹಾಕಲಾಗಿದೆ ಎಂದು ಪೊಲೀಸರು ಪ್ರಕರಣ ತಿರುಚಿದ್ದಾರೆ ಎಂದು ಆಪಾದಿಸಿದರು.

ಘಟನೆಯ ಹಿನ್ನೆಲೆಯಲ್ಲಿ ಶನಿವಾರ ಗುಂಪೊಂದು ಅಂಗಡಿಗಳನ್ನು ಬಲವಂತವಾಗಿ ಬಂದ್ ಮಾಡಲು ಮುಂದಾಗಿದ್ದು, ರಿಕ್ಷಾ ಚಲಾಯಿಸದಂತೆ ತಡೆಯೊಡ್ಡಿದೆ. ಈ ಸಂದರ್ಭ ತಾನು ಸ್ಥಳಕ್ಕೆ ಭೇಟಿ ನೀಡಲು ಹೋದಾಗ ಅಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು ನನ್ನನ್ನು ಕಾರಿನಿಂದ ಕೆಳಗೆ ಇಳಿಯಲು ಬಿಟ್ಟಿಲ್ಲ. ಅಂಗಡಿ ಮಾಲಕರಿಗೆ, ರಿಕ್ಷಾ ಚಾಲಕರಿಗೆ ರಕ್ಷಣೆ ನೀಡಬೇಕಾದ ಪೊಲೀಸರು ಅದನ್ನು ಮಾಡದೆ ಕರ್ತವ್ಯ ಚ್ಯುತಿ ಎಸಗಿದ್ದಾರೆ. ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಕೆಲವರು ಅಂಗಡಿಗಳನ್ನು ಬಂದ್ ಮಾಡಿಸುತ್ತಿದ್ದರು. ಪೊಲೀಸರು ಅವರನ್ನು ತಡೆಯವ ಪ್ರಯತ್ನವನ್ನೂ ಮಾಡಿಲ್ಲ. ಬದಲಾಗಿ ಸೆ. 144 ಹಾಕಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಬಜರಂಗದಳ ದಕ್ಷಿಣ ಪ್ರಾಂತ ಸಂಚಾಲಕ ಶರಣ್ ಪಂಪ್‌ವೆಲ್, ಪುತ್ತೂರು ಬಜರಂಗದಳ ಸಹ ಸಂಚಾಲಕ ಭರತ್ ಕುಂಬ್ಳೆ, ವಿಟ್ಲ ತಾಲೂಕು ಪ್ರಖಂಡ ವಿಎಚ್‌ಪಿ ಮುಖಂಡ ರಾಮಕೃಷ್ಣ ಕಲ್ಲಡ್ಕ, ಬಿಜೆಪಿ ಮುಖಂಡ ಶ್ರೀಕರ ಪ್ರಭು, ಜಿಲ್ಲಾ ಎಸ್‌ಸಿ ಮೋರ್ಚಾ ಜಿಲ್ಲಾಧ್ಯಕ್ಷ ದಿನೇಶ್ ಅಮ್ಟೂರು, ಬಂಟ್ವಾಳ ವಿಧಾನಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಉಪಸ್ಥಿತರಿದ್ದರು.

ದುರ್ಬಲ ಎಸ್ಪಿ: ಜಿಲ್ಲಾ ಪೊಲೀಸ್ ಅಧೀಕ್ಷಕರು ದುರ್ಬಲರಾಗಿದ್ದು, ಅವರಿಗೆ ಕೇವಲ ಸೆಕ್ಷನ್ ಹೇರಲು ಮಾತ್ರ ಗೊತ್ತು. ಆದ್ದರಿಂದ ಅವರನ್ನು ಬದಲಾಯಿಸಿ, ಧೈರ್ಯವಂತ ಎಸ್ಪಿಯನ್ನು ಜಿಲ್ಲೆಗೆ ನಿಯುಕ್ತಿಗೊಳಿಸಬೇಕು ಎಂದರು.

ರೈ ವರ್ತನೆ ಸರಿಯಿಲ್ಲ: ಕ್ಷೇತ್ರದ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ವರ್ತನೆಯೂ ಸರಿಯಿಲ್ಲ. ಅವರು ಒಂದು ಗುಂಪಿನ ಪರವಾಗಿದ್ದಾರೆ. ಮುಸ್ಲಿಮರ ಮೇಲೆ ಹಲ್ಲೆಯಾಗಿದೆ ಎಂದು ಅವರ ಮನೆಗೆ ಹೋಗಿ ಅಳುವ ರೈ, ಹಿಂದೂಗಳಿಗೆ ಹಲ್ಲೆಯಾದಾಗ ಮನೆಗೆ ಹೋಗುವುದು ಇರಲಿ, ಖಂಡನೆಯನ್ನೂ ಮಾಡುವುದಿಲ್ಲ. ಅವರು ಒಂದು ಕೋಮಿಗೆ ಮಾತ್ರ ಸಚಿವರಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News