×
Ad

ಜಾತ್ಯತೀತ ನೆಲೆಯ ಅಗ್ರ ಪಂಕ್ತಿಯ ರಾಜಕಾರಣಿ: ಎಂ.ವೀರಪ್ಪ ಮೊಯ್ಲಿ

Update: 2017-05-28 17:01 IST

ಮಂಗಳೂರು, ಮೇ 28: ಕೆ.ಆರ್.ಶ್ರೀಯಾನ್‌ ಜಿಲ್ಲೆಯ ದಲಿತ, ಶೋಷಿತ ಜನಾಂಗದ ನಡುವಿನ ಜಾತ್ಯತೀತ ನೆಲೆಯ ಅಗ್ರ ಪಂಕ್ತಿಯ ಪ್ರಾಮಾಣಿಕ ರಾಜಕಾರಣಿ, ನಾಯಕ ಎಂದು ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ ತಿಳಿಸಿದ್ದಾರೆ.

ನಗರದ ಪುರಭವನದಲ್ಲಿ ಅಭಿನಂದನಾ ಸಮಿತಿಯಿಂದ ಹಮ್ಮಿಕೊಂಡ ಕೆ.ಆರ್.ಶ್ರೀಯಾನ್ ಅಭಿನಂದನಾ ಸಮಾರಂಭ ಹಾಗೂ ಅವರ ಆತ್ಮಕಥೆ ‘ನನ್ನ ಜೀವನ ಕಥನದ ನೆನಪಿನಂಗಳದಿಂದ’ ಕೃತಿಯನ್ನು ಅವರು ಇಂದು ಲೋಕಾರ್ಪಣೆ ಗೊಳಿಸಿ ಮಾತನಾಡುತ್ತಿದ್ದರು.

ನಾನು ರಾಜಕೀಯ ಪ್ರವೇಶ ಮಾಡುವ ಮೊದಲೇ ಜಿಲ್ಲೆಯಲ್ಲಿ ದಲಿತ, ಶೋಷಿತರ, ಕಾರ್ಮಿಕರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಹಿರಿಯ ರಾಜಕಾರಣಿ , ಸೈದ್ದಾಂತಿಕವಾಗಿ ನಿಷ್ಠುರವಾದಿಯಾಗಿದ್ದರು ಸೌಮ್ಯ ಸ್ವಭಾವದ ರಾಜಕಾರಣಿಯಾಗಿ ನಮೆಗೆಲ್ಲಾ ಸ್ಫೂರ್ತಿಯಾಗಿದ್ದರು. ಅವರ ಜೀವನ ಕಥನದಲ್ಲಿ ಅವಿಭಜಿತ ಜಿಲ್ಲೆಯ ಚಳವಳಿಯ ನಾನಾ ಮುಖಗಳನ್ನು ಅನಾವರಣಗೊಳಿಸಿದ್ದಾರೆ. ಮಂಗಳೂರಿಗೆ ತೈಲ ಸಂಸ್ಕರಣಾಗಾರ ಬೇಕು, ಕೊಂಕಣ ರೈಲ್ವೇ ಆಗಬೇಕು ಎಂಬ ಚಿಂತನೆಯನ್ನು ಹೊಂದಿದ್ದ ಕೆ.ಆರ್.ಶ್ರೀಯಾನ್ ಈ ಯೋಜನೆ ಜಾರಿಯಾಗಲು ಪರೋಕ್ಷವಾಗಿ ಕಾರಣರಗಿದ್ದಾರೆ ಎಂದು ಮೊಯ್ಲಿ ತಿಳಿಸಿದ್ದಾರೆ.

ಕೋಮುವಾದಿ ಶಕ್ತಿಗಳ ಉಚ್ಛಾಟನೆಯಾಬೇಕು:- ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕೋಮುವಾದಿ ಶಕ್ತಿಗಳು ಪ್ರಬಲ ವಾಗುತ್ತಿರುವ ದಿನಗಳಲ್ಲಿ ಕಾಂಗ್ರೆಸ್ ಸಮಾನ ಮನಸ್ಕರ ಜೊತೆ ಹೋರಾಟಕ್ಕೆ ಕೈ ಜೋಡಿಸುತ್ತಿದೆ. ಕೋಮುವಾದಿ ಶಕ್ತಿಗಳ ಉಚ್ಛಾಟನೆ ಯಾಗದಿದ್ದರೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ ಎಂದು ಮೊಯ್ಲಿ ತಿಳಿಸಿದರು.

ಸಮಾಜದಲ್ಲಿ ಹಸಿವು, ಅನಾರೋಗ್ಯದಿಂದ ಮುಕ್ತರಾಗುವ ಸ್ವಾತಂತ್ರ ಜನರಿಗೆ ದೊರೆಯದೆ ಹೋದರೆ ಪ್ರಜಾಪ್ರಭುತ್ವ ವ್ಯವಸ್ಥೆ ಅರ್ಥಹೀನವಾಗುತ್ತದೆ. ಮಾನವೀಯ ಮೌಲ್ಯಗಳನ್ನು ಪೋಷಿಸುವ ಕೆಲಸ ಸಮಾಜದ ಎಲ್ಲಾ ಸ್ಥರಗಳಿಂದ ಪಕ್ಷಾತೀತವಾಗಿ ಮೂಡಿ ಬರಬೇಕು ಎಂದು ವೀರಪ್ಪ ಮೊಯ್ಲಿ ತಿಳಿಸಿದರು.

ದೇಶದ ಅಧಿಕಾರ ಫ್ಯಾಸಿಸ್ಟ್ ಶಕ್ತಿಗಳ ಕೈಯಲ್ಲಿ:- ದೇಶ ಅತ್ಯಂತ ಅಪಾಯಕಾರಿ ಸ್ಥಿತಿಯಲ್ಲಿದೆ. ದೇಶದ ಅಧಿಕಾರ ಪ್ಯಾಸಿಸ್ಟ್ ಶಕ್ತಿಗಳ ಕೈಯಲ್ಲಿದೆ. ಆ ಕಾರಣದಿಂದ ಸಂವಿಧಾನವನ್ನು ಬುಡಮೇಲು ಮಾಡುವ ಸರ್ವಾಧಿಕಾರಿ ಪ್ರಯತ್ನಗಳು ನಡೆಯುತ್ತಿವೆ. ಇದರ ಭಾಗವಾಗಿ ಗೋಹತ್ಯೆ ನಿಷೇಧ ಕಾನೂನು ಜಾರಿ ಮಾಡಲಾಗಿದೆ. ಈ ಸಂದರ್ಭದಲ್ಲಿ ಮುದಿ ದನಗಳನ್ನು ಏನು ಮಾಡಬೇಕು ಎನ್ನುವ ನೀತಿಯನ್ನು ರೂಪಿಸದೆ ಸರಕಾರ ಗೊಂದಲ ಸೃಷ್ಟಿಸುತ್ತಿದೆ. ಇಂತಹ ಸ್ಥಿತಿಯಲ್ಲಿ ಹಲವು ದಶಕಗಳ ಹೋರಾಟದ ಮೊನಚನ್ನು ಉಳಿಸಿಕೊಂಡು ಬಂದಿರುವ ಕೆ.ಆರ್.ಶ್ರೀಯಾನ್‌ರ ಬದುಕಿನ ಕಥನ ಮಹತ್ವದ ಕೃತಿಯಾಗಿದೆ ಎಂದು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಶ್ರೀರಾಮ ರೆಡ್ಡಿ ತಿಳಿಸಿದ್ದಾರೆ.

ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ಮಾಜಿ ಸಚಿವ ಶ್ರೀ ಅಮರನಾಥ ಶೆಟ್ಟಿ ಮಾತನಾಡುತ್ತಾ, ಕೆ.ಆರ್.ಶ್ರೀಯಾನ್ ಜಿಲ್ಲೆಯಲ್ಲಿ ಜನಸಾ ಮನ್ಯರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಉತ್ತಮ ರಾಜಕಾರಣಿ ಎಂಬ ಹೆಸರನ್ನು ಗಳಿಸಿದ್ದಾರೆ ಎಂದರು. ಅಭಿನಂದನಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಕೆ.ಆರ್.ಶ್ರೀಯಾನ್ ಮಾತನಾಡುತ್ತಾ, 63 ವರ್ಷಗಳಿಂದ ಕಮ್ಯುನಿಸ್ಟ್ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿದಿದ್ದೇನೆ. ನನ್ನ ಕೊನೆಯ ಉಸಿರಿರುವ ತನಕ ಪಕ್ಷದ ತತ್ವ ಸಿದ್ಧಾಂತದೊಂದಿಗೆ ಅದರ ಆಶಯವನ್ನು ಈಡೇರಿಸಲು ದುಡಿಯುವುದಾಗಿ ತಿಳಿಸಿದರು.

ನನ್ನ ಜೀವನ ಕಥನ ಭವಿಷ್ಯದ ಪೀಳಿಗೆಗೆಗ ಸಹಕಾರಿಯಾದರೆ ಸಂತೋಷ. ದೇಶದಲ್ಲಿ ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ದ್ವೇಷ ರಾಜಕೀಯ ನಡೆಯುತ್ತಿರುವ ಸಂದರ್ಭದಲ್ಲಿ ಜಾತ್ಯತೀತ ಶಕ್ತಿಗಳು ಒಂದುಗೂಡಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಈ ಪುಸ್ತಕ ಬಿಡುಗಡೆ ವೇದಿಕೆ ಒಂದು ನಿಮಿತ್ತವಾಗಿದೆ ಎಂದು ಕೆ.ಆರ್.ಶ್ರೀಯಾನ್ ಕೃತಿ ಬಿಡುಗಡೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕೆ.ಆರ್.ಶ್ರೀಯಾನ್‌ರವರ ಜೀವನ ಕಥನ ಜಿಲ್ಲೆಯ ಕಾರ್ಮಿಕ ಚಳವಳಿಯ ಹಾಗು ಕೈಗಾರಿಕೆಗಳ ಬಗ್ಗೆ ಮಾಹಿತಿ ತಿಳಿಸುವ ಐತಿಹಾಸಿಕ ದಾಖಲೆಯಾಗಿ.ಈ ಬಗ್ಗೆ ಅಧ್ಯಯನ ನಡೆಸುವವರಿಗೆ ಈ ಪುಸ್ತಕ ಒಂದು ಆಕರ ಗ್ರಂಥವಾಗಿದೆ ಎಂದು ಕೃತಿ ಪರಿಚಯಿಸಿದ ಪ್ರೊ.ಭಾಸ್ಕರ ಮಯ್ಯ ತಿಳಿಸಿದರು.

ಸಮಾರಂಭದಲ್ಲಿ ಮಾತನಾಡಿದ ಉದ್ಯಮಿ ಶ್ರೀನಿವಾಸ ಶೇರಿಗಾರ್ ಕೆ.ಆರ್. ಶ್ರೀಯಾನ್‌ರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆಯಬೇಕಾಗಿದೆ ಎಂದರು.

ಸಮಾರಂಭದಲ್ಲಿ ಕಲಾವಿದೆ ಸರೋಜಿನಿ ಶೆಟ್ಟಿ,ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಕುಕ್ಯಾನ್,ಸಿಪಿಎಂ ಜಿಲ್ಲಾ ಕಾರ್ಯದರ್ಶಿ ವಸಂತ ಆಚಾರಿ,ಕ್ರೀಯಾ ಪ್ರಕಾಶನದ ಎನ್.ಕೆ.ವಸಂತರಾಜ್, ಉದ್ಯಮಿ ಹರೀಶ್ ಶೇರಿಗಾರ್, ಎಂ.ಬಿ.ಲೋಕಯ್ಯ, ಜೆ.ಬಾಲಕೃಷ್ಣ ಶೆಟ್ಟಿ, ಕೆ.ಯಾದವ ಶೆಟ್ಟಿ,ಸುನಿಲ್ ಕುಮಾರ್ ಬಜಾಲ್, ಯಶವಂತ ಮರೋಳಿ, ಕೆ.ಕೃಷ್ಣಪ್ಪ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News