×
Ad

ಎಸ್ಸಿ-ಎಸ್ಟಿ ಮಾಸಿಕ ಸಭೆ: ಪಿಜಿ ಸೆಂಟರ್‌ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಆಗ್ರಹ

Update: 2017-05-28 17:23 IST

ಮಂಗಳೂರು, ಮೇ 28: ನಗರದಲ್ಲಿ ಅದರಲ್ಲೂ ದಲಿತ ಕಾಲನಿಯಲ್ಲಿರುವ ಪಿಜಿ ಸೆಂಟರ್ (ಖಾಸಗಿ ಅತಿಥಿ ಗೃಹಗಳು)ಗಳಲ್ಲಿ ಸಿಸಿ ಕ್ಯಾಮರಾ ಅಳಡವಡಿಸಲು ಸೂಕ್ತ ಕ್ರಮ ಜರಗಿಸಬೇಕು ಎಂದು ದಲಿತ ಸಂಘಟನೆಯ ಮುಖಂಡ ರಘುವೀರ್ ಸೂಟರ್‌ಪೇಟೆ ಆಗ್ರಹಿಸಿದರು.

ಮಂಗಳೂರು ನಗರ ಪೊಲೀಸ್ ಆಯುಕ್ತಾಲಯದಲ್ಲಿ ಡಿಸಿಪಿ ಡಾ. ಸಂಜೀವ ಪಾಟೀಲ್ ಅಧ್ಯಕ್ಷತೆಯಲ್ಲಿ ರವಿವಾರ ನಡೆದ ಮಾಸಿಕ ಎಸ್ಸಿ-ಎಸ್ಟಿ ಸಭೆಯಲ್ಲಿ ಅವರು ಅಹವಾಲು ಮಂಡಿಸಿದರು.

ನಗರದ ಬಹುತೇಕ ಕಡೆ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಪಿಜಿ ಸೆಂಟರ್‌ಗಳನ್ನು ತೆರೆಯಲಾಗಿದೆ. ಇಲ್ಲಿಗೆ ಯಾರು ಬರುತ್ತಾರೆ, ಹೋಗುತ್ತಾರೆ ಎಂಬುದರ ಬಗ್ಗೆ ಮಾಹಿತಿ ಇರುವುದಿಲ್ಲ. ಅಲ್ಲದೆ, ದಲಿತ ಕಾಲನಿಗಳ ಆಸುಪಾಸು ಇರುವ ಈ ಪಿಜಿ ಸೆಂಟರ್‌ಗಳಲ್ಲಿರುವ ಕೆಲವರು ದಲಿತ ಸಮುದಾಯದವರನ್ನು ಗುರಿಯಾಗಿಸಿಕೊಂಡು ಮಾದಕ ದ್ರವ್ಯದಂತಹ ಜಾಲಕ್ಕೆ ತಳ್ಳುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಪಿಜಿ ಸೆಂಟರ್‌ಗಳಲ್ಲಿ ಸಿಸಿ ಕ್ಯಾಮರಾ ಹಾಕಿಸಬೇಕು. ಅನಧಿಕೃತ ಪಿಜಿ ಸೆಂಟರ್‌ಗಳನ್ನು ಮುಚ್ಚಿಸಬೇಕು ಎಂದು ಒತ್ತಾಯಿಸಿದರು.

ದಲಿತ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ಪೊಲೀಸ್ ಠಾಣೆಗಳಲ್ಲಿ ಅಧಿಕಾರಿಗಳು, ಪೊಲೀಸರು ಪ್ರತಿ ದೂರು ಸಲ್ಲಿಸಲು ಸೂಚಿಸುತ್ತಾರೆ. ದಲಿತ ದೌರ್ಜನ್ಯ ಪ್ರಕರಣದ ಆರೋಪಿಗಳನ್ನು ಬಂಧಿಸದೆ ಅವರು ಜಾಮೀನು ಪಡೆಯಲು ಅವಕಾಶ ಕಲ್ಪಿಸಿಕೊಡುತ್ತಾರೆ ಎಂದು ದಲಿತ ಸಂಘಟನೆಯ ಮುಖಂಡರಾದ ಎಸ್ಪಿ ಆನಂದ, ರಘುವೀರ್ ಸೂಟರ್‌ಪೇಟೆ ಮತ್ತಿತರರು ಹೇಳಿದರು.

ದಲಿತ ದೌರ್ಜನ್ಯ ಆಗಲಿ, ಬೇರೆ ಯಾವುದೇ ಪ್ರಕರಣವಾದರೂ ಪೊಲೀಸರು ಪ್ರತಿ ದೂರು ನೀಡಲು ಕುಮ್ಮಕ್ಕು ನೀಡುವಂತಿಲ್ಲ. ಒಂದು ವೇಳೆ ಅಂತಹ ಪ್ರಯತ್ನ ನಡೆದಿದ್ದರೆ ಮಾಹಿತಿ ನೀಡಬಹುದು. ಅಂತಹ ಅಧಿಕಾರಿ ಅಥವಾ ಪೊಲೀಸರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ಡಿಸಿಪಿ ಸಂಜೀವ ಪಾಟೀಲ್ ಭರವಸೆ ನೀಡಿದರು.

ಎಸಿಪಿ ಮಟ್ಟದ ಸಭೆ ನಡೆಸಿ: ದಲಿತ ಕಾಲನಿಗಳಲ್ಲಿ ಎಸಿಪಿ ಮಟ್ಟದ ಅಧಿಕಾರಿಗಳು ಅಹವಾಲು ಸಭೆ ನಡೆಸಬೇಕು, ಇದರಿಂದ ದಲಿತರಲ್ಲಿ ಮಾನಸಿಕ ಸ್ಥೈರ್ಯ ತುಂಬಲು ಸಾಧ್ಯವಿದೆ ಎಂದು ರಘುವೀರ್ ಸೂಟರ್‌ಪೇಟೆ ಹೇಳಿದರು. ಈ ಬಗ್ಗೆ ಪರಿಶೀಲಿಸಿ ಕ್ರಮ ಜರಗಿಸಲಾಗುವುದು ಎಂದು ಡಿಸಿಪಿ ಸಂಜೀವ ಪಾಟೀಲ್ ಹೇಳಿದರು.

ದಲಿತೇತರರ ಉಪಸ್ಥಿತಿ ಬಗ್ಗೆ ಆಕ್ಷೇಪ: ದಲಿತ ಅಹವಾಲು ಆಲಿಸುವಿಕೆಗೆ ಸಂಬಂಧಿಸಿ ನಡೆಯುವ ವಿವಿಧ ಸಭೆಗಳಲ್ಲಿ ದಲಿತೇತರರು ಉಪಸ್ಥಿತರಿರುತ್ತಾರೆ. ಇದು ಸರಿಯಲ್ಲ. ಈ ಬಗ್ಗೆ ಕ್ರಮ ಜರಗಿಸಬೇಕು ಎಂದು ದಲಿತ ಸಂಘಟನೆ ಮುಖಂಡ ಮುಖೇಶ್ ಹೇಳಿದರು.

ದಲಿತರ ಪರವಾಗಿ ಇತರರು ಸಭೆಯಲ್ಲಿದ್ದು, ಅಹವಾಲು ಮಂಡಿಸಬಹುದು. ಅವರ ಉಪಸ್ಥಿತಿ ಬಗ್ಗೆ ಆಕ್ಷೇಪ ಬೇಡ. ದಲಿತ ಪರ ಸಭೆಗಳಲ್ಲಿ ಉಪಸ್ಥಿತರಿರುವ ದಲಿತೇತರರು ಇತರ ಸಮುದಾಯದ ಅಹವಾಲು ಆಲಿಸಿದರೆ ಕಡಿವಾಣ ಹಾಕಲಾಗುವುದು ಎಂದು ಡಾ. ಸಂಜೀವ ಪಾಟೀಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News