ಬಿಎಸ್‌ಎಫ್ ಅಧಿಕಾರಿ ಲವ್‌ರಾಜ್ ಸಿಂಗ್ ದಾಖಲೆ

Update: 2017-05-28 12:16 GMT

ಹೊಸದಿಲ್ಲಿ, ಮೇ 28: ವಿಶ್ವದ ಅತ್ಯಂತ ಎತ್ತರದ ವೌಂಟ್ ಎವರೆಸ್ಟ್ ಶಿಖರವನ್ನು ಆರನೇ ಬಾರಿಗೆ ಏರುವ ಮೂಲಕ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಅಧಿಕಾರಿ ಲವ್‌ರಾಜ್ ಸಿಂಗ್ ಈ ಸಾಧನೆ ಮಾಡಿರುವ ಪ್ರಪ್ರಥಮ ಭಾರತೀಯ ಎಂಬ ದಾಖಲೆಗೆ ಪಾತ್ರವಾಗಿದ್ದಾರೆ.

     ಉತ್ತರಾಖಂಡ ಮೂಲದವರಾದ ಲವ್‌ರಾಜ್ ಸಿಂಗ್ 1998ರಲ್ಲಿ ಪ್ರಥಮ ಬಾರಿಗೆ ಎವರೆಸ್ಟ್ ಶಿಖರ ಏರಿದ್ದರು. ಬಳಿಕ 2008, 2009, 2012 ಮತ್ತು 2013ರಲ್ಲಿ ಈ ಸಾಧನೆ ಪುನರಾವರ್ತಿಸಿದ್ದರು. ಡೆಹ್ರಾಡೂನ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪದ್ಮಶ್ರೀ ಪುರಸ್ಕೃತ ಲವ್‌ರಾಜ್ ಸಿಂಗ್ ಒಎನ್‌ಜಿಸಿ(ತೈಲ ಮತ್ತು ನೈಸರ್ಗಿಕ ಅನಿಲ ನಿಗಮ)ದ ಮೂವರು ಪರ್ವತಾರೋಹಿಗಳ ತಂಡದ ನೇತೃತ್ವ ವಹಿಸಿದ್ದರು. ಶನಿವಾರ 6ಗಂಟೆ 10 ನಿಮಿಷಕ್ಕೆ ಲವ್‌ರಾಜ್ ಎವರೆಸ್ಟ್ ಏರಿದ ಬಗ್ಗೆ ಜಿಪಿಎಸ್ ಮಾಹಿತಿ ನೀಡಿದೆ ಎಂದು ಸಿಂಗ್ ಅವರ ಪತ್ನಿ ರೀನಾ ಕೌಶಲ್ ತಿಳಿಸಿದ್ದಾರೆ. ದೇಶದ ಯಾವುದೇ ಪರ್ವತಾರೋಹಿ ಇದುವರೆಗೆ ಆರು ಬಾರಿ ಎವರೆಸ್ಟ್ ಶಿಖರ ಏರಿಲ್ಲ . ಕುಟುಂಬ, ಸ್ನೇಹಿತರು ಮತ್ತು ದೇಶಕ್ಕೇ ಇದು ಹೆಮ್ಮೆಯ ವಿಷಯ ಎಂದು ರೀನಾ ಸಂತಸ ವ್ಯಕ್ತಪಡಿಸಿದ್ದಾರೆ.

   ಸಿಂಗ್ ಜೊತೆ ಒಎನ್‌ಜಿಸಿಯ ಯೋಗೇಂದರ್ ಗರ್ಬಿಯಲ್, ಎನ್.ಜಗೋಯ್ ಮತ್ತು ರಾಹುಲ್ ಪರ್ವತಾರೋಹಣಕ್ಕೆ ತೆರಳಿದ್ದು ಸಿಂಗ್ ಮತ್ತು ಯೋಗೇಂದರ್ 6:10ಕ್ಕೆ ಎವರೆಸ್ಟ್ ಶಿಖರದಲ್ಲಿ ಕಾಲಿಟ್ಟರೆ, ಜಗೋಯ್ ಮತ್ತು ರಾಹುಲ್ 7:45ರ ವೇಳೆಗೆ ಈ ಸಾಧನೆ ಮಾಡಿದರು ಎಂದು ಒಎನ್‌ಜಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ಪೆಟ್ರೋಲಿಯಂ ಖಾತೆ ಸಚಿವ ಧರ್ಮೇಂದ್ರ ಪ್ರಧಾನ್ ಮಾರ್ಚ್ 27ರಂದು ಈ ಆರೋಹಣ ಕಾರ್ಯಕ್ಕೆ ಹಸಿರು ನಿಶಾನೆ ತೋರಿದ್ದರು. ನೇಪಾಳ ತಲುಪಿದ್ದ ಈ ತಂಡ ಅಲ್ಲಿ ವಿವಿಧ ಪರ್ವತಗಳನ್ನು ಏರಿದ ಬಳಿಕ ಎವರೆಸ್ಟ್ ಶಿಖರಾರೋಹಣಕ್ಕೆ ಮುಂದಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News