ಇಬ್ಬರು ಮಹಿಳೆಯರಿಗೆ 14 ಜನರಿಂದ ಪೀಡನೆ: ದೃಶ್ಯ ಚಿತ್ರೀಕರಿಸಿ ಆನ್‌ಲೈನ್‌ನಲ್ಲಿ ಪ್ರಸಾರ

Update: 2017-05-28 12:53 GMT

ಲಕ್ನೊ, ಮೇ 28: ಇಬ್ಬರು ಮಹಿಳೆಯರನ್ನು ಅಡ್ಡಗಟ್ಟಿದ 14 ಮಂದಿಯ ತಂಡವೊಂದು ಅವರೊಂದಿಗೆ ಅಸಭ್ಯವಾಗಿ ವರ್ತಿಸಿ ಪೀಡಿಸಿದ್ದಲ್ಲದೆ ಈ ದೃಶ್ಯವನ್ನು ವಿಡಿಯೋ ಚಿತ್ರೀಕರಣ ನಡೆಸಿ ಅಂತರ್ಜಾಲದಲ್ಲಿ ಪ್ರಸಾರ ಮಾಡಿದ ಹೇಯ ಘಟನೆ ಉತ್ತರಪ್ರದೇಶದ ರಾಂಪುರ ಜಿಲ್ಲೆಯ ತಾಂಡ ಪೊಲೀಸ್ ಠಾಣಾ ವ್ಯಾಪ್ತಿಯ ಗ್ರಾಮವೊಂದರಲ್ಲಿ ನಡೆದಿದೆ.

ಯಾವಾಗ ಈ ವಿಡಿಯೋ ಚಿತ್ರೀಕರಣ ನಡೆಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಆದರೆ ಕಳೆದ ಸುಮಾರು 15 ದಿನಗಳಿಂದ ಈ ಘಟನೆಯ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿಬಿಟ್ಟಿದೆ. ಪೀಡನೆಯ ಪ್ರಕರಣ ದಾಖಲಿಸಿರುವ ಪೊಲೀಸರು ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.

ವಿಡಿಯೋ ದೃಶ್ಯಾವಳಿಯ ಆಧಾರದಲ್ಲಿ ಸಂತ್ರಸ್ತರನ್ನು ಗುರುತಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ . ಆದರೆ ಮರಗಿಡಗಳಿಂದ ಆವೃತವಾದ ಕಿರಿದಾದ ದಾರಿಯಲ್ಲಿ ಸಾಗುತ್ತಿದ್ದ ಇಬ್ಬರು ಮಹಿಳೆಯರನ್ನು ಬೈಕ್‌ನಲ್ಲಿ ಬಂದ 14 ಮಂದಿ ಸುತ್ತುವರಿದು ಕಿರುಕುಳ ನೀಡುವ ದೃಶ್ಯ ಸ್ಪಷ್ಟವಾಗಿದೆ. ಮಹಿಳೆಯರ ಮೈದಡವುತ್ತಾ, ಅವರನ್ನು ಎಳೆದಾಡಿ, ಅಸಭ್ಯವಾಗಿ ನಿಂದಿಸುವ , ಮಹಿಳೆಯರು ಗೋಳಾಡುತ್ತಾ ಕಿರುಚುವ ದೃಶ್ಯವಿದೆ. ತಮ್ಮನ್ನು ಬಿಟ್ಟುಬಿಡಿ ಎಂದು ಗೋಗರೆದರೂ ಈ ತಂಡ ಪೀಡನೆ ಮುಂದುವರಿಸಿದೆ. ಈ ದೃಶ್ಯವನ್ನು ತಮ್ಮ ಮೊಬೈಲ್ ಫೋನಿನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ಮಾಡಿದೆ.

ಘಟನೆಯಲ್ಲಿ ಒಳಗೊಂಡಿರುವ ವ್ಯಕ್ತಿಗಳನ್ನು ಗುರುತಿಸಲಾಗಿದ್ದು ಪ್ರಮುಖ ಅರೋಪಿಯನ್ನು ಬಂಧಿಸಲಾಗಿದೆ. ಪ್ರಕರಣದ ಬಗ್ಗೆ ಎಫ್‌ಐಆರ್ ದಾಖಲಿಸಲಾಗಿದೆ ಎಂದು ರಾಂಪುರ್ ಜಿಲ್ಲಾ ಎಸ್‌ಪಿ ವಿಪಿನ್ ಟಾಡ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News