ನೀಚ ಯುದ್ದ ಎದುರಿಸಲು ನವೀನ ಪರಿಕಲ್ಪನೆ ಅಗತ್ಯ : ಬಿಪಿನ್ ರಾವತ್

Update: 2017-05-28 14:11 GMT

ಹೊಸದಿಲ್ಲಿ, ಮೇ 28: ಜಮ್ಮು-ಕಾಶ್ಮೀರದಲ್ಲಿ ಭಾರತೀಯ ಸೇನೆ ‘ನೀಚ ಯುದ್ದ’ವನ್ನು ಎದುರಿಸುತ್ತಿದ್ದು ಇದರ ವಿರುದ್ಧ ನವೀನ ಪರಿಕಲ್ಪನೆಯೊಂದಿಗೆ ಹೋರಾಡಬೇಕಿದೆ ಎಂದು ಭೂಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿದ್ದಾರೆ.

ಪಿಟಿಐಯೊಂದಿಗೆ ನಡೆಸಿದ ಸಂವಾದದಲ್ಲಿ ಅವರು ಕಾಶ್ಮೀರದಲ್ಲಿ ಯುವಕನೋರ್ವನನ್ನು ಮಾನವ ಗುರಾಣಿಯಂತೆ ಬಳಸಿಕೊಂಡ ಸೇನಾಧಿಕಾರಿ ಮೇಜರ್ ನಿತಿನ್ ಲೀಟಲ್ ಗೊಗೊಯಿ ಅವರ ಕ್ರಮವನ್ನು ಸಮರ್ಥಿಸಿಕೊಂಡರು.

  ಇದೊಂದು ಛಾಯಾ ಸಮರವಾಗಿದೆ ಮತ್ತು ಛಾಯಾ ಸಮರ ಯಾವತ್ತೂ ನೀಚವಾಗಿರುತ್ತದೆ. ಎದುರು ಬದುರು ನಿಂತು ಹೋರಾಡುವ ನೈಜ ಸಮರದಲ್ಲಿ ನೀತಿ-ನಿಯಮ ಪಾಲಿಸಲಾಗುತ್ತದೆ. ಆದರೆ ನೀಚ ಸಮರದಲ್ಲಿ ಹಾಗಲ್ಲ. ಅವರು ಅಡಗಿ ಕುಳಿತು ದಾಳಿ ನಡೆಸುತ್ತಾರೆ. ಆದ್ದರಿಂದ ಈ ಯುದ್ದವನ್ನು ಹೊಸ ಪರಿಕಲ್ಪನೆಯೊಂದಿಗೆ ನಡೆಸಬೇಕಾಗುತ್ತದೆ. ಮೇಜರ್ ಗೊಗೊಯಿ ಇದನ್ನೇ ಮಾಡಿದ್ದಾರೆ. ನೀಚ ಯುದ್ದವನ್ನು ಹೊಸ ಪರಿಕಲ್ಪನೆಯೊಂದಿಗೆ ಇದಿರಿಸಬೇಕು ಎಂದು ಬಿಪಿನ್ ರಾವತ್ ಹೇಳಿದರು.

 ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವ ಹಂತದಲ್ಲಿ ನಿತಿನ್ ಗೊಗೊಯಿಗೆ ಪ್ರಶಂಸಾ ಪತ್ರದೊಂದಿಗೆ ಪದಕವನ್ನು ಪ್ರದಾನ ಮಾಡಿದ ಬಗ್ಗೆ ಪ್ರತಿಕ್ರಿಯಿಸಿದ ರಾವತ್, ಉಗ್ರರ ಹಿಂಸಾಕೃತ್ಯಗಳಿಂದ ನಲುಗಿರುವ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನೆಲೆಸಲು ಶ್ರಮಿಸುತ್ತಿರುವ ಯುವ ಸೇನಾಧಿಕಾರಿಯಲ್ಲಿ ಆತ್ಮವಿಶ್ವಾಸ ತುಂಬುವ ಕ್ರಮ ಇದಾಗಿದೆ ಎಂದು ಸಮರ್ಥಿಸಿಕೊಂಡರು.

 ಯುದ್ಧಭೂಮಿಯಿಂದ ಸಾಕಷ್ಟು ದೂರದಲ್ಲಿ ನಾನಿರುತ್ತೇನೆ. ಆದರೂ ಸದಾ ನಿಮ್ಮಂದಿಗೆ ಇರುತ್ತೇನೆ ಎಂದಷ್ಟೇ ಯೋಧರಿಗೆ ನಾನು ಹೇಳುತ್ತೇನೆ. ಕೆಲವೊಮ್ಮೆ ತಪ್ಪಾಗಬಹುದು, ಆದರೆ ದುರುದ್ದೇಶದ ತಪು ್ಪ ನಡೆದಿಲ್ಲವಾದರೆ ನಾನು ನಿಮ್ಮಾಂದಿಗೆ ಇದ್ದೇನೆ ಎಂದವರಲ್ಲಿ ಧೈರ್ಯ ತುಂಬುತ್ತೇನೆ ಎಂದರು.

 ಜನರು ನಮ್ಮತ್ತ ಕಲ್ಲೆಸೆಯುತ್ತಾರೆ, ಪೆಟ್ರೋಲ್ ಬಾಂಬ್ ಎಸೆಯುತ್ತಾರೆ. ಆಗ ನಾವೇನು ಮಾಡಬೇಕು ಎಂದು ನಮ್ಮ ಯೋಧರು ಕೇಳಿದಾಗ- ಸುಮ್ಮನಿದ್ದು ಸಾಯಿರಿ. ದೇಶದ ಧ್ವಜ ಹೊದಿಸಿರುವ ಹೆಣಪೆಟ್ಟಿಗೆ ಬರುತ್ತದೆ. ನಿಮ್ಮ ಮೃತದೇಹವನ್ನು ಅದರಲ್ಲಿಟ್ಟು ಸಕಲ ಗೌರವದೊಂದಿಗೆ ಊರಿಗೆ ಕಳುಹಿಸುತ್ತೇವೆ ಎಂದು ಅವರಿಗೆ ಹೇಳಬೇಕೇ ಎಂದು ಪ್ರಶ್ನಿಸಿದ ರಾವತ್, ಅಲ್ಲಿ ಕಾರ್ಯ ನಿರ್ವಹಿಸುವ ನಮ್ಮ ಯೋಧರ ಆತ್ಮವಿಶ್ವಾಸಕ್ಕೆ ಘಾಸಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದಾಗಿದೆ ಎಂದರು.

       ಕಲ್ಲೆಸೆಯುವ ಬದಲು ನಮ್ಮತ್ತ ಗುಂಡಿನ ದಾಳಿ ನಡೆಸಿದರೆ ಆಗ ಸೂಕ್ತ ರೀತಿಯಲ್ಲಿ ಅವರಿಗೆ ತಿರುಗೇಟು ನೀಡಬಹುದು ಎಂದ ರಾವತ್, ದೇಶದ ಜನರಲ್ಲಿ ಸೇನೆಯ ಕುರಿತು ಭಯದ ಭಾವನೆ ಇಲ್ಲ ಎಂದಾದಲ್ಲಿ ಆ ದೇಶದ ಸರ್ವನಾಶ ಖಂಡಿತ ಎಂದರು. ನಿಮ್ಮ ಎದುರಾಳಿಗಳಿಗೆ ನಿಮ್ಮ ಬಗ್ಗೆ ಭಯವಿರಬೇಕು. ಇದೇ ವೇಳೆ ನಿಮ್ಮ ದೇಶದ ಜನರಿಗೂ ನಿಮ್ಮ ಬಗ್ಗೆ ಭಯ ಇರಬೇಕು. ನಮ್ಮದು ಸ್ನೇಹಪರ ಸೇನೆ. ಆದರೆ ಕಾನೂನು ಮತ್ತು ಸುವ್ಯವಸ್ಥೆ ನೆಲೆಗೊಳಿಸಲು ನಮ್ಮನ್ನು ಕರೆದಾಗ ಜನತೆಯ ಮನದಲ್ಲಿ ನಮ್ಮ ಬಗ್ಗೆ ಭಯದ ಭಾವನೆ ಇರಬೇಕಾಗುತ್ತದೆ . ಅದಾಗ್ಯೂ, ಜಮ್ಮು-ಕಾಶ್ಮೀರದಲ್ಲಿ ಭಾರತದ ಸೇನೆ ಗರಿಷ್ಠ ಸಂಯಮದಿಂದ ವರ್ತಿಸುತ್ತಿದೆ ಎಂದು ಬಿಪಿನ್ ರಾವತ್ ಹೇಳಿದರು.

 ಜಮ್ಮು-ಕಾಶ್ಮೀರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಭದ್ರತಾ ಪಡೆಗಳ ಮಧ್ಯೆ ಅಪನಂಬಿಕೆ ಬೆಳೆಸುವ ಕಾರ್ಯವಾಗುತ್ತಿದೆ ಎಂದ ರಾವತ್, ಇದಕ್ಕೆ ಆಸ್ಪದ ನೀಡಲಾಗದು ಎಂದರು. ಸಶಸ್ತ್ರ ಪಡೆಗಳು ಸ್ವಯಂ ರಕ್ಷಣೆಯ ಹಕ್ಕು ಹೊಂದಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News