ಜಿಎಸ್‌ಟಿ: ಟಿವಿ, ಎಸಿ ದುಬಾರಿ, ಸ್ಮಾರ್ಟ್‌ಪೋನ್ ಅಗ್ಗ

Update: 2017-05-28 14:20 GMT

ಹೊಸದಿಲ್ಲಿ: ಹೊಸ ಜಿಎಸ್‌ಟಿ ತೆರಿಗೆ ವ್ಯವಸ್ಥೆ ದೇಶದಲ್ಲಿ ಜಾರಿಗೆ ಬರುವುದರಿಂದ ತಂಪು ಪಾನೀಯಗಳು ಹಾಗೂ ಗ್ರಾಹಕ ವಸ್ತುಗಳಾದ ಟಿವಿ, ಹವಾನಿಯಂತ್ರಣ ಯಂತ್ರ, ವಾಷಿಂಗ್ ಮಿಷಿನ್ ಹಾಗೂ ಫ್ರಿಡ್ಜ್ ದುಬಾರಿಯಾಗಲಿದೆ. ಆದರೆ ಸ್ಮಾರ್ಟ್‌ಫೋನ್, ಸಣ್ಣ ಕಾರುಗಳು ಹಾಗೂ ದಿನಬಳಕೆ ವಸ್ತುಗಳು ಜುಲೈನಿಂದ ಅಗ್ಗವಾಗಲಿವೆ.

ಪ್ರಸ್ತಾವಿತ ತೆರಿಗೆ ದರಗಳ ಬಗ್ಗೆ ನಡೆಸಿದ ವಿಶ್ಲೇಷಣೆಯಿಂದ ಈ ಅಂಶ ದೃಢಪಟ್ಟಿದೆ. 1200 ಸರಕು ಹಾಗೂ 500 ಸೇವೆಗಳ ತೆರಿಗೆದರವನ್ನು ಜಿಎಸ್‌ಟಿ ಮಂಡಳಿ ಈಗಾಗಲೇ ಅಂತಿಮಪಡಿಸಿದೆ. ದಿನಬಳಕೆ ವಸ್ತುಗಳಾದ ಸೋಪು, ಟೂತ್‌ಪೇಸ್ಟ್ ಅಗ್ಗವಾಗಲಿದ್ದು, ತಾಜಾ ಹಣ್ಣುಗಳು, ತರಕಾರಿ, ಬೇಳೆಕಾಳು, ಬ್ರೆಡ್ ಹಾಗೂ ತಾಜಾ ಹಾಲು ಮುಂತಾದ ವಸ್ತುಗಳನ್ನು ತೆರಿಗೆ ವಿನಾಯ್ತಿ ಪಟ್ಟಿಯಲ್ಲಿ ಮುಂದುವರಿಸಲಾಗಿದೆ.

ಎಕಾನಮಿ ದರ್ಜೆಯ ವಿಮಾನಯಾನ ದರಗಳು ಸ್ವಲ್ಪ ಅಗ್ಗವಾಗಲಿದ್ದು, ಅಂತೆಯೇ ಟ್ಯಾಕ್ಸಿ ಸೇವೆಯ ಮೇಲಿನ ತೆರಿಗೆಯನ್ನೂ ಶೇಕಡ 5ಕ್ಕೆ ಇಳಿಸಲಾಗಿದೆ. ಪ್ರಸಕ್ತ ಶೇಕಡ 6ರಷ್ಟು ಸೇವಾತೆರಿಗೆ ವಿಧಿಸಲಾಗುತ್ತಿದೆ. ಶೂನ್ಯ ತೆರಿಗೆದರದ ಪಟ್ಟಿಯಲ್ಲಿರುವ ಆಹಾರಧಾನ್ಯಗಳು ಅಗ್ಗವಾಗಲಿದ್ದು, ಇದೀಗ ಖರೀದಿದಾರರು ಶೇಕಡ 2-5ರವರೆಗೆ ರಾಜ್ಯ ತೆರಿಗೆ ಪಾವತಿಸಬೇಕಾಗುತ್ತದೆ. ಜಿಎಸ್‌ಟಿ ವ್ಯವಸ್ಥೆಯಲ್ಲಿ ಇದು ರದ್ದಾಗಲಿದೆ. 1200 ಸರಕು ಹಾಗೂ 500 ಸೇವೆಗಳಿಗೆ ಶೇಕಡ 5,12,18 ಮತ್ತು ಶೇಕಡ 28ರ ತೆರಿಗೆಯನ್ನು ಜಿಎಸ್‌ಟಿ ಮಂಡಳಿ ಅಂತಿಮಪಡಿಸಿದೆ.

ಆದರೆ ಸಂಸ್ಕರಿತ ಆಹಾರ, ಸಿಹಿತಿನಸುಗಳು, ಐಸ್‌ಕ್ರೀಂಗಳ ಮೇಲಿನ ತೆರಿಗೆಯನ್ನು ಶೇಕಡ 22ರಿಂದ 18ಕ್ಕೆ ಇಳಿಸಲಾಗಿದೆ. ವೈಯಕ್ತಿಕ ಬಳಕೆಯ ಶಾಂಪೂ, ಸುಗಂಧದ್ರವ್ಯಯ, ಪ್ರಸಾದನ ಸಾಧನಗಳು ದುಬಾರಿಯಾಗಲಿದ್ದು, ಶೇಕಡ 28ರ ತೆರಿಗೆ ವಿಧಿಸಲಾಗುತ್ತಿದೆ. ಇದುವರೆಗೆ ಶೇಕಡ 22ರಷ್ಟು ತೆರಿಗೆ ವಿಧಿಸಲಾಗುತ್ತಿದೆ.

ಆಹಾರಧಾನ್ಯಗಳ ಜತೆಗೆ ಆರೋಗ್ಯ ಮತ್ತು ಶಿಕ್ಷಣ ಸೇವೆಗಳು ಕೂಡಾ ಅಗ್ಗವಾಗಲಿವೆ. ರಿಯಲ್ ಎಸ್ಟೇಟ್ ಉದ್ಯಮವನ್ನು ಜಿಎಸ್‌ಟಿ ವ್ಯಾಪ್ತಿಯಿಂದ ಹೊರಗಿಡಲಾಗಿದ್ದು, ನಿರ್ಮಿಸಿದ ಕಟ್ಟಡಗಳ ವಹಿವಾಟಿಗೆ ಶೇಕಡ 12ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಈಗ ಶೇಕಡ 15ರಷ್ಟು ಸೇವಾ ತೆರಿಗೆ ಅನ್ವಯವಾಗುತ್ತಿತ್ತು.

ವಿದ್ಯುತ್‌ಚಾಲಿತ ದ್ವಿಚಕ್ರ ಹಾಗೂ ತ್ರಿಚಕ್ರ ವಾಹನಗಳ ತೆರಿಗೆ ಶೇಕಡ 14ರಿಂದ 12ಕ್ಕೆ ಇಳಿದರೆ, ಸೌರ ಪ್ಯಾನಲ್‌ಗಳ ತೆರಿಗೆ 0-5 ಶೇಕಡದಿಂದ 18 ಶೇಕಡಕ್ಕೆ ಏರಿಕೆ ಕಂಡಿದೆ. ಸೋಪು ಮತ್ತು ಟೂತ್‌ಪೇಸ್ಟ್ ಮೇಲಿನ ತೆರಿಗೆ ಶೇಕಡ 25-26ರಿಂದ ಶೇಕಡ 18ಕ್ಕೆ ಇಳಿಯಲಿದೆ.

ಔಷಧಿಗಳ ತೆರಿಗೆ ಶೇಕಡ 13ರಿಂದ 12ಕ್ಕೆ ಇಳಿದರೆ, ಸ್ಮಾರ್ಟ್‌ಫೋನ್‌ಗಳ ಮೇಲಿನ ತೆರಿಗೆ ಶೇಕಡ 13.5ರಿಂದ 12ಕ್ಕೆ ಕಡಿಮೆಯಾಗಲಿದೆ. ಪೂಜಾಸಾಮಾನುಗಳು, ಹವನ ಸಾಮಗ್ರಿಗಳು, ಬಿಂದಿ, ಕುಂಕುಮಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗಿಡಲಾಗಿದೆ.

ಮನೋರಂಜನಾ ಕ್ಷೇತ್ರದ ಮೇಲೆ, ಕೇಬಲ್ ಹಾಗೂ ಡಿಟಿಎಚ್ ಮೇಲಿನ ತೆರಿಗೆ ಕೂಡಾ ಶೇಕಡ 18ಕ್ಕೆ ಇಳಿಯಲಿದೆ. ಪ್ರಸಕ್ತ 10-30 ಶೇಕಡ ತೆರಿಗೆ ಹಾಗೂ ಶೇಕಡ 15ರಷ್ಟು ಸೇವಾ ತೆರಿಗೆ ವಿಧಿಸಲಾಗುತ್ತಿದೆ,

ಪಂಚತಾರಾ ಹೋಟೆಲ್‌ಗಳ ತೆರಿಗೆ ಪ್ರಮಾಣ ಹೆಚ್ಚಳವಾದರೆ, ನಾನ್ ಎಸಿ ರೆಸ್ಟೋರೆಂಟ್‌ಗಳ ಮೇಲಿನ ತೆರಿಗೆ ಕಡಿಮೆಯಾಗಲಿದೆ. ಈಗ 12.5ರಿಂದ 20 ಶೇಕಡ ಇರುವ ರೆಸ್ಟೋರೆಂಟ್ ಮೇಲಿನ ತೆರಿಗೆ ಶೇಕಡ 6ಕ್ಕೆ ಇಳಿಯಲಿದೆ. ಮದ್ಯಸರಬರಾಜು ಮಾಡುವ ಲೈಸನ್ಸ್ ಹೊಂದಿದ ಎಸಿ ಹೋಟೆಲ್‌ಗಳ ಮೇಲೆ ಶೇಕಡ 12ರಷ್ಟು ತೆರಿಗೆ ವಿಧಿಸಲಾಗುತ್ತದೆ. ಎಲ್ಲ ಪಂಚತಾರಾ ಹೋಟೆಲ್‌ಗಳಿಗೆ ಶೇಕಡ 28ರಷ್ಟು ತೆರಿಗೆ ವಿಧಿಸಲಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News