ಕಲ್ಲಡ್ಕದಲ್ಲಿ ಯುವಕನಿಗೆ ಹಲ್ಲೆ: ಸಂಘಪರಿವಾರದ ಪಿತೂರಿ- ಶ್ರೀರಾಮ ರೆಡ್ಡಿ ಆರೋಪ

Update: 2017-05-28 15:49 GMT

ಮಂಗಳೂರು, ಮೇ 28: ಕಲ್ಲಡ್ಕದಲ್ಲಿ ಯಾವೂದೇ ಪ್ರಚೋದನೆಯಿಲ್ಲದೆ ಮುಸ್ಲಿಂ ಯುವಕರ ಮೇಲೆ ಹಲ್ಲೆ ಮಾಡಿರುವುದು ಸಂಘಪರಿವಾರದ ರಾಜಕೀಯ ಪಿತೂರಿಯ ಭಾಗವಾಗಿದೆ ಎಂದು ಸಿಪಿಐ (ಎಂ)ನ ರಾಜ್ಯ ಕಾರ್ಯದರ್ಶಿ ಶ್ರೀರಾಮ ರೆಡ್ಡಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಪೊಲೀಸರ ವಿರುದ್ಧ ಕಲ್ಲಡ್ಕ ಪ್ರಭಾಕರ ಭಟ್ ಆರೋಪ ಮಾಡುತ್ತಿದ್ದಾರೆ. ಈ ಹಿಂದೆ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಪ್ರಚೋಧನಕಾರಿ ಭಾಷಣ ಮಾಡಿರುವ ಆರೋಪದಲ್ಲಿ ಮಾಜಿ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ ಹಾಗೂ ಹಾಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ಕಾಲದಲ್ಲಿ ಪ್ರಕರಣ ದಾಖಲಾಗಿವೆ.ಈ ಬಗ್ಗೆ ಸೂಕ್ತ ಕ್ರಮ ಸರಕಾರ ಮತ್ತು ಇಲ್ಲಿನ ಪೊಲೀಸರಿಂದ ಜರುಗಿದ್ದರೆ ಕಲ್ಲಡ್ಕ ಪ್ರಭಾಕರ ಭಟ್ ಜೈಲಲ್ಲಿ ಇರಬೇಕಾಗಿತ್ತು. ಆದರೆ ಜಿಲ್ಲಾಡಳಿತದ ವೈಫಲ್ಯದಿಂದ ಕಲ್ಲಡ್ಕ ಪ್ರಭಾಕರ ಭಟ್ ಮೇಲೆ ಯಾವೂದೇ ಕ್ರಮ ಜರುಗಿಲ್ಲ. ಕಲ್ಲಡ್ಕದಲ್ಲಿ ಹಲ್ಲೆ ನಡೆಸಿದರೆನ್ನಲಾದ ಆರೋಪಿಗಳು ಕೊಲೆ ಆರೋಪದಲ್ಲಿ ಜೈಲಲ್ಲಿ ಇದ್ದು ಬಿಡುಗಡೆಯಾಗಿ ಬಂದವರನ್ನು ಈಗ ರಕ್ಷಿಸಲು ಹೊರಟಿದ್ದಾರೆ. ಪ್ರತಿಬಾರಿಯೂ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಕೋಮು ದ್ವೇಷದ ರಾಜಕೀಯವನ್ನು ನಡೆಸುತ್ತಿರುವ ಬಿಜೆಪಿ ಹಾಗೂ ಸಂಘಪರಿವಾರದ ಸಮಾಜದಲ್ಲಿ ಕೋಮುದ್ವೇಷದ ಭಯದ ವಾತಾವರಣವನ್ನು ನಡೆಸುತ್ತಾ ಬಂದಿದೆ. ಅದೇ ರೀತಿಯ ರಾಜಕೀಯ ಪಿತೂರಿಯ ಕಾರಣವಾಗಿ ಕಲ್ಲಡ್ಕದಲ್ಲಿ ಅಮಾಯಕ ಯುವಕರ ಮೇಲೆ ಹಲ್ಲೆ ನಡೆದಿದೆ. ಇದನ್ನು ಸಿಪಿಐ (ಎಂ) ಖಂಡಿಸುತ್ತದೆ ಎಂದು ಶ್ರೀ ರಾಮ ರೆಡ್ಡಿ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಸಿಪಿ(ಐ)ಎಂ ಕಾರ್ಯದರ್ಶಿ ವಸಂತ ಆಚಾರಿ ಹಾಗೂ ಪಕ್ಷದ ಇತರ ಮುಖಂಡರಾದ ಜೆ.ಬಾಲಕೃಷ್ಣ ಶೆಟ್ಟಿ,ಯಾದವ ಶೆಟ್ಟಿ,ಸುನಿಲ್ ಕುಮಾರ್ ಬಜಾಲ್,ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News