ಎಲ್ಲ ಇಲಾಖೆಗಳು ನೋಟು ರದ್ದತಿ ವಿವರ ಬಿಡುಗಡೆ ಮಾಡುವುದು ಕಡ್ಡಾಯ: ಸಿಐಸಿ

Update: 2017-05-28 14:43 GMT

ಹೊಸದಿಲ್ಲಿ: ಸರ್ಕಾರದ ನೋಟು ರದ್ದತಿ ವಿಷಯವನ್ನು ನಿರ್ವಹಿಸಿದ ಪ್ರತಿಯೊಂದು ಇಲಾಖೆಗಳು ಕೂಡಾ ಸೂಕ್ತ ಮಾಹಿತಿಗಳನ್ನು ಬಿಡುಗಡೆ ಮಾಡುವುದು ಕರ್ತವ್ಯ ಎಂದು ಕೇಂದ್ರ ಮಾಹಿತಿ ಆಯೋಗ ಸೂಚಿಸಿದೆ.

ನೋಟು ಅಮಾನ್ಯ ಪ್ರಕರಣದ ಬಗ್ಗೆ ಪಾರದರ್ಶಕ ಸಮಿತಿಯ ಮೊದಲ ಅಭಿಪ್ರಾಯ ಏನು ಎಂಬ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿರುವ ಮಾಹಿತಿ ಆಯುಕ್ತ ಶ್ರೀಧರ ಆಚಾರ್ಯಲು, ಮಾಹಿತಿಯನ್ನು ಮುಚ್ಚಿಡುವ ಯಾವುದೇ ಪ್ರಯತ್ನಗಳು ಗಂಭೀರ ಸಂದೇಹವನ್ನು ಆರ್ಥಿಕತೆಯಲ್ಲಿ ಹುಟ್ಟುಹಾಕುತ್ತದೆ ಎಂದು ಎಚ್ಚರಿಸಿದ್ದಾರೆ. ಈ ನಿರ್ಧಾರದ ಸುತ್ತ ಉಕ್ಕಿನ ಕೋಟೆ ಕಟ್ಟುವ ಪ್ರವೃತ್ತಿ ಸರಿಯಲ್ಲ ಎಂದು ಹೇಳಿದ್ದಾರೆ. ಇಂಥ ಉಕ್ಕಿನ ಕೋಟೆಯನ್ನು ಬಾಹುಬಲಿ ಕೂಡಾ ಭೇದಿಸಲಾರ ಎಂದು ವ್ಯಂಗ್ಯವಾಡಿದ್ದಾರೆ.

ನೋಟು ನಿಷೇಧದ ಹಿಂದಿನ ಕಾರಣಗಳನ್ನು ಬಹಿರಂಗಪಡಿಸುವಂತೆ ಕೋರಿ ಸಲ್ಲಿಸಿದ ಆರ್‌ಟಿಐ ಅರ್ಜಿಗಳಿಗೆ ಉತ್ತರ ನೀಡಲು ಪ್ರಧಾನಮಂತ್ರಿ ಕಚೇರಿ, ಭಾರತೀಯ ರಿಸರ್ವ್ ಬ್ಯಾಂಕ್, ಹಣಕಾಸು ಸಚಿವಾಲಯ ನಿರಾಕರಿಸಿರುವ ಹಿನ್ನೆಲೆಯಲ್ಲಿ ಈ ಆದೇಶಕ್ಕೆ ವಿಶೇಷ ಮಹತ್ವ ಬಂದಿದೆ. ಪ್ರಧಾನಿ ನರೇಂದ್ರ ಮೋದಿಯವರು 2016ರ ನವೆಂಬರ್ 8ರಂದು 1000 ಮತ್ತು 500 ರೂಪಾಯಿ ಮುಖಬೆಲೆಯ ನೋಟುಗಳನ್ನು ರದ್ದುಪಡಿಸುವ ಆದೇಶ ಪ್ರಕಟಿಸಿದ್ದರು.

ಒಟ್ಟು ವಿನಿಮಯವಾದ ಕರೆನ್ಸಿಯ ಮಾಹಿತಿ ನೀಡುವಂತೆ ಕೋರಿ ರಾಮಸ್ವರೂಪ್ ಎಂಬುವವರು ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸಿದ ಸಿಐಸಿ ಈ ಆದೇಶ ನೀಡಿದೆ. ಯಾರೆಲ್ಲ ಹಣವನ್ನು ವಿನಿಮಯ ಮಾಡಿಕೊಂಡಿದ್ದಾರೆ ಹಾಗೂ ಎಷ್ಟು ಮಂದಿ ಗುರುತುಪತ್ರ ಹಾಜರುಪಡಿಸಿದ್ದಾರೆ ಎಂಬ ಮಾಹಿತಿ ಬಯಸಿದ್ದರು. ಆದರೆ ಈ ಬಗ್ಗೆ ಕ್ರೋಢೀಕೃತ ಮಾಹಿತಿ ಇಲ್ಲ ಎಂದು ಅಂಚೆ ಕಚೇರಿ ಹೇಳಿತ್ತು.

ದೇಶದ ಪ್ರತಿಯೊಬ್ಬ ಪ್ರಜೆಯ ಮೇಲೆ ಪರಿಣಾಮ ಬೀರಿದ ನಡೆಯ ಬಗ್ಗೆ ಮಾಹಿತಿ ನೀಡುವುದು ಇಲಾಖೆಯ ಕರ್ತವ್ಯ ಎಂದು ಆಚಾರ್ಯಲು ಸ್ಪಷ್ಟಪಡಿಸಿದ್ದಾರೆ.

"ಎಲ್ಲ ಸರ್ಕಾರಿ ಅಧಿಕಾರಿಗಳಿಗೆ ನೈತಿಕ, ಸಾಂವಿಧಾನಿಕ ಹಾಗೂ ಪ್ರಜಾಸತ್ತಾತ್ಮಕ ಹೊಣೆಗಾರಿಕೆ ಇದೆ. ನೋಟು ರದ್ದತಿಯಿಂದ ತೊಂದರೆಗೀಡಾದ ಪ್ರತಿಯೊಬ್ಬರಿಗೆ, ಅದರ ಕಾರಂ, ಪರಿಣಾಮ ಹಾಗೂ ಪರಿಹಾರ ಕ್ರಮದ ಬಗ್ಗೆ ಮಾಹಿತಿ ನೀಡಬೇಕಾಗಿದೆ" ಎಂದು ಸೂಚಿಸಿದ್ದಾರೆ. ಸಿಪಿಐಓ ಆರ್‌ಟಿಐ ಅರ್ಜಿಯನ್ನು ಬದಿಗಿಟ್ಟದ್ದು ಸರಿಯಲ್ಲ ಎಂದು ಹೇಳಿದ್ದಾರೆ.

ಈ ನಿರ್ಧಾರದಿಂದ ತೊಂದರೆಗೀಡಾದವರಲ್ಲಿ ಭಿಕ್ಷುಕರು, ರಿಕ್ಷಾವಾಲಾಗಳು, ತಳ್ಳುಗಾಡಿಯವರು ಕೂಡಾ ಸೇರಿದ್ದಾರೆ. ಈ ತೊಂದರೆಗಳು ಅಲ್ಪಕಾಲೀನ ಎನ್ನುವುದಾದರೆ ಆ ಮಾಹಿತಿಯನ್ನಾದರೂ ಎಲ್ಲರಿಗೂ ನೀಡಬೇಕು. ಮಾಹಿತಿ ನೀಡಲು ಅಧಿಕಾರಿಗಳು ಹಿಂದೇಟು ಹಾಕಿದರೆ ಜನರಲ್ಲಿ ಗಂಭೀರ ಪ್ರಶ್ನೆಗಳು ಏಳುತ್ತವೆ ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News