ಎಲ್ ಡಿ ಎಫ್ ಸರಕಾರದಿಂದ 4.7 ಲಕ್ಷ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ

Update: 2017-05-28 15:15 GMT

ಕಾಸರಗೋಡು, ಮೇ 28: ಎಲ್ ಡಿ ಎಫ್ ಸರಕಾರ ಅಧಿಕಾರಕ್ಕೆ ಬಂದ  ಬಳಿಕ ಕಳೆದ ಒಂದು ವರ್ಷದ ಅವಧಿಯಲ್ಲಿ 4.7 ಲಕ್ಷ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ನೀಡಿರುವುದಾಗಿ  ಕೇರಳ ವಿದ್ಯುತ್ ಸಚಿವ  ಎಂ.ಎಂ. ಮಣಿ ಹೇಳಿದರು.

ಅವರು ರವಿವಾರ ಸಂಜೆ  ಉದುಮ ಪಾಲಕುನ್ನು ನಲ್ಲಿ  ಕಾಸರಗೋಡು ಜಿಲ್ಲಾ ಸಂಪೂರ್ಣ ವಿದ್ಯುದ್ದೀಕರಣ ಘೋಷಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಂಪೂರ್ಣ ವಿದ್ಯುದ್ದೀಕರಣ ಗೊಳಿಸಿದ್ದರೂ  ವಿದ್ಯುತ್  ಉತ್ಪಾದನೆಯಲ್ಲಿ ರಾಜ್ಯ ಹಿಂದೆ ಉಳಿದಿದೆ.  ಹೊರ ರಾಜ್ಯದಿಂದ ವಿದ್ಯುತ್ ಖರೀದಿಸಿ  ಗ್ರಾಹಕರಿಗೆ ನೀಡಲಾಗುತ್ತಿದೆ. ಬರಗಾಲ, ವಿದ್ಯುತ್ ಲಭ್ಯತೆ ಕೊರತೆ ಇದ್ದರೂ ಪವರ್ ಕಟ್ ಇಲ್ಲದೆ ಗ್ರಾಹಕರಿಗೆ ನಿರಂತರ ವಿದ್ಯುತ್ ನೀಡಲಾಗುವುದು.  ಹೊಸ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆ  ಬಗ್ಗೆ  ಸರಕಾರ ಪ್ರಯತ್ನ ನಡೆಸುತ್ತಿದೆ. ಗಾಳಿಯಿಂದ ವಿದ್ಯುತ್ ಉತ್ಪಾದನೆ ಬಗ್ಗೆ ಅಧ್ಯಯನ ನಡೆಸಲಾಗುತ್ತಿದೆ. ಕಾಸರಗೋಡು ಜಿಲ್ಲೆಯಲ್ಲೂ ವಿದ್ಯುತ್ ಉತ್ಪಾದನೆ ಸಾಧ್ಯತೆ ಬಗ್ಗೆ ಗಮನ ಹರಿಸಲಾಗುವುದು  ಎಂದು ಹೇಳಿದರು 

ರಾಜ್ಯದ 14 ಜಿಲ್ಲೆಗಳಲ್ಲೂ ಸಂಪೂರ್ಣ ವಿದ್ಯುದ್ದೀಕರಣ ಮಾಡಲಾಗಿದೆ.  ಮೇ 29ರಂದು ಕೋಝಿಕ್ಕೋಡ್ ನಲ್ಲಿ ನಡೆಯಲಿರುವ  ಸಮಾರಂಭದಲ್ಲಿ  ಕೇರಳ ರಾಜ್ಯ ಸಂಪೂರ್ಣ  ವಿದ್ಯುದ್ದೀಕರಣ  ಘೋಷಣೆಯನ್ನು ಮುಖ್ಯಮಂತ್ರಿ  ಪಿಣರಾಯಿ ವಿಜಯನ್  ಘೋಷಿಸುವರು ಎಂದು ಸಚಿವರು  ಹೇಳಿದರು.

ಸರಕಾರ, ಅಧಿಕಾರಿಗಳ ಪರಿಶ್ರಮದ ಫಲವಾಗಿ ಎಲ್ಲಾ ಕುಟುಂಬಗಳಿಗೆ ವಿದ್ಯುತ್  ಒದಗಿಸಲಾಗಿದೆ.  ಏ 30 ರೊಳಗೆ ಅರ್ಜಿ ಸಲ್ಲಿಸಿದ ಎಲ್ಲರಿಗೂ  ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇಡೀ ದೇಶದಲ್ಲಿ  ಸಂಪೂರ್ಣ ವಿದ್ಯುದ್ದೀಕರಣ ಗೊಳಿಸಿದ ಪ್ರಥಮ ರಾಜ್ಯ ಕೇರಳ ಎಂದು ಹೇಳಿದರು.

ಕಾಸರಗೋಡು ಸಂಸದ ಪಿ. ಕರುಣಾಕರನ್   ಅಧ್ಯಕ್ಷತೆ ವಹಿಸಿದ್ದರು. ಶಾಸಕರಾದ ಪಿ . ಬಿ ಅಬ್ದುಲ್ ರಜಾಕ್ , ಎನ್. ಎ ನೆಲ್ಲಿಕುನ್ನು , ಎಂ . ರಾಜಗೋಪಾಲ್ , ಕೆ ಎಸ್ ಇ. ಬಿ  ನಿರ್ದೇಶಕ  ಡಾ . ವಿ . ಶಿವದಾಸನ್, ಜಿಲ್ಲಾಧಿಕಾರಿ ಕೆ . ಜೀವನ್ ಬಾಬು , ಮಾಜಿ ಶಾಸಕ  ಕೆ . ವಿ ಕುಂಞಿ ರಾಮನ್ , ನಗರಸಭಾ ಅಧ್ಯಕ್ಷೆ ಬೀಫಾತಿಮ್ಮ ಇಬ್ರಾಹಿಂ, ವಿ . ವಿ ರಮೇಶ್, ಕೆ .ಪಿ  ಜಯರಾಜನ್,  ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ. ಕೆ . ಎಂ ಅಶ್ರಫ್ ,  ಮುಹಮ್ಮದ್  ಕುಂಞಿ , ಒಮನಾ ರಾಮಚಂದ್ರನ್ , ವಿ .ಪಿ ಜಾನಕಿ , ಪಿ .ರಾಜನ್ , ಕೆ . ಎ ಮುಹಮ್ಮದಾಲಿ ,  ಶಾನವಾಝ್ ಪಾದೂರು  ಹಾಗೂ ಅಧಿಕಾರಿಗಳು , ಜನಪ್ರತಿನಿಧಿಗಳು , ರಾಜಕೀಯ ಪಕ್ಷದ  ಮುಖಂಡರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News