ತಕ್ಷಣವೇ ಜಾಧವ್‌ರನ್ನು ಗಲ್ಲಿಗೇರಿಸುವಂತೆ ಆಗ್ರಹಿಸಿ,ಪಿಪಿಪಿ ನಾಯಕನಿಂದ ಪಾಕ್ ಸುಪ್ರೀಂಕೋರ್ಟ್‌ಗೆ ಅರ್ಜಿ

Update: 2017-05-28 16:03 GMT

ಇಸ್ಲಾಮಾಬಾದ್,ಮೇ 28: ಭಾರತೀಯ ನೌಕಾಪಡೆಯ ಮಾಜಿ ಸೇನಾಧಿಕಾರಿ ಕುಲಭೂಷಣ್ ಜಾಧವ್ ವಿರುದ್ಧದ ಮರಣದಂಡನೆ ತೀರ್ಪು ರದ್ದಾಗದೆ ಇದ್ದಲ್ಲಿ ಅವರನ್ನು ತಕ್ಷಣವೇ ಗಲ್ಲಿಗೇರಿಸಬೇಕೆಂದು ಆಗ್ರಹಿಸಿ ಪಾಕಿಸ್ತಾನದ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿದೆ.

   ನ್ಯಾಯವಾದಿ ಮುಝಾಮಿಲ್ ಅಲಿ ಅವರು ಈ ಅರ್ಜಿಯನ್ನು ಶನಿವಾರ ಇನ್ನೋರ್ವ ನ್ಯಾಯವಾದಿ ಹಾಗೂ ಪ್ರತಿಪಕ್ಷ ಪಾಕಿಸ್ತಾನ ಪೀಪಲ್ಸ್ ಪಾರ್ಟಿಯ ನಾಯಕರಾದ ಫರೂಕ್ ನಾಯೆಕ್ ಮೂಲಕ ಸಲ್ಲಿಸಿದ್ದಾರೆ.
  ಜಾಧವ್‌ನ ವಿಚಾರಣೆ ಕಾನೂನು ಪ್ರಕಾರ ನಡೆಸಲಾಗಿದ್ದು,ನ್ಯಾಯಾಂಗದ ಎಲ್ಲ ಪ್ರಕ್ರಿಯೆಗಳನ್ನು ಅನುಸರಿಸಲಾಗಿದೆ. ಭಾರತವು ಆಗ್ರಹಿಸಿದಂತೆ ಆತನಿಗೆ ದೂತಾವಾಸದ ಸಂಪರ್ಕವನ್ನು ಏರ್ಪಡಿಸಿಕೊಡಲಾಗಿತ್ತು ಎಂದು ಅರ್ಜಿದಾರರು ನ್ಯಾಯಾಲಯದ ಗಮನಸೆಳೆದಿದ್ದಾರೆ.

 ತನ್ನ ವಿರುದ್ಧ ಮರಣದಂಡನೆ ಆದೇಶವನ್ನು ರದ್ದುಪಡಿಸುವಂತೆ ಕೋರಿ 46 ವರ್ಷದ ಜಾಧವ್ ಸಲ್ಲಿಸಿದ ಮನವಿಯು ಪುರಸ್ಕೃತಗೊಳ್ಳದಿದ್ದಲ್ಲಿ ಆಂತರಿಕ ಕಾನೂನಿನ ಪ್ರಕಾರ ಸರಕಾರವು ಆತನನ್ನು ತಕ್ಷಣವೇ ಗಲ್ಲಿಗೇರಿಸಬೇಕೆಂದು ಅರ್ಜಿದಾರರು ಪಾಕ್ ಸುಪ್ರೀಂಕೋರ್ಟ್‌ನ್ನು ಕೋರಿದ್ದಾರೆಂದು ಡಾನ್ ಪತ್ರಿಕೆ ರವಿವಾರ ವರದಿ ಮಾಡಿದೆ.

  ಇರಾನ್ ಗಡಿ ಮೂಲಕ ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತವನ್ನು ಪ್ರವೇಶಿಸಿದ್ದ ಕುಲಭೂಷಣ್ ಜಾಧವ್ ಅವರನ್ನು ಮಾರ್ಚ್ 3ರಂದು ತನ್ನ ಭದ್ರತಾ ಪಡೆಗಳು ಬಂಧಿಸಿರುವುದಾಗಿ ಪಾಕಿಸ್ತಾನ ಸರಕಾರವು ಹೇಳಿಕೊಂಡಿದೆ.

ಬೇಹುಗಾರಿಕೆ ಹಾಗೂ ವಿಧ್ವಂಸಕಕೃತ್ಯಗಳನ್ನು ನಡೆಸಲು ಪ್ರಚೋದನೆ ನೀಡಿದ ಆರೋಪದಲ್ಲಿ ಪಾಕಿಸ್ತಾನದ ಸೇನಾ ನ್ಯಾಯಾಲಯವು ಕುಲಭೂಷಣ್ ಜಾಧವ್‌ಗೆ ಎಪ್ರಿಲ್‌ನಲ್ಲಿ ಗಲ್ಲು ಶಿಕ್ಷೆಯನ್ನು ಘೋಷಿಸಿತ್ತು.

  ಆದಾಗ್ಯೂ, ಹೇಗ್‌ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯವು, ಮಧ್ಯಂತರ ತೀರ್ಪೊಂದರ ಮೂಲಕ ಜಾಧವ್‌ನ ಮರಣದಂಡನೆಗೆ ತಡೆಯಾಜ್ಞೆ ನೀಡಿತ್ತು. ಪ್ರಕರಣವು ತಾರ್ಕಿಕ ಅಂತ್ಯ ಕಾಣುವವರೆಗೆ ಜಾಧವ್‌ರನ್ನು ಗಲ್ಲಿಗೇರಿಸದಂತೆ ಅದು ಪಾಕ್‌ಗೆ ತಾಕೀತು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News