ಹಾವೇರಿ ಜಾನಪದ ವಿವಿಯಲ್ಲಿ ಯಕ್ಷಗಾನ ಡಿಪ್ಲೋಮಾ: ಸಚಿವ ಪ್ರಮೋದ್

Update: 2017-05-28 16:06 GMT

ಉಡುಪಿ, ಮೇ 28: ಹಾವೇರಿ ಜಾನಪದ ವಿಶ್ವವಿದ್ಯಾನಿಲಯದಲ್ಲಿ ಈ ವರ್ಷ ದಿಂದ ಮೂರು ವರ್ಷಗಳ ಯಕ್ಷಗಾನ ಮತ್ತು ಬಯಲಾಟ ಡಿಪ್ಲೋಮಾ ಕೋರ್ಸ್‌ಗಳನ್ನು ಆರಂಭಿಸಲಾಗಿದೆ ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಯಕ್ಷಗಾನ ಕಲಾರಂಗದ ವತಿಯಿಂದ ರವಿವಾರ ಬನ್ನಂಜೆ ನಾರಾಯಣ ಗುರು ಮಂದಿರದ ಶಿವಗಿರಿ ಸಭಾಗೃಹದಲ್ಲಿ ನಡೆದ ತಾಳಮದ್ದಲೆ ಸಪ್ತಾಹ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಸಮೃದ್ಧ ಕಲೆಯಾಗಿರುವ ಯಕ್ಷಗಾನವು ಇನ್ನಷ್ಟು ಬೆಳೆಯಬೇಕಾಗಿದೆ. ಸರಕಾರ ದೊಂದಿಗೆ ಸಂಘ ಸಂಸ್ಥೆಗಳು ಕೈಜೋಡಿಸುವುದರಿಂದ ಯಕ್ಷಗಾನ ಕಲೆಯನ್ನು ಜೀವಂತವಾಗಿರಿಸಲು ಸಾಧ್ಯ. ಈ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲೆ ಇದೆ ಎಂದು ಸಚಿವರು ಹೇಳಿದರು.

‘ಮಟ್ಟಿ ಮುರಲೀಧರ ರಾವ್’ ಹಾಗೂ ಪೆರ್ಲಕೃಷ್ಣ ಭಟ್ ಸ್ಮರಣಾರ್ಥ ‘ಯಕ್ಷಗಾನ ಕಲಾರಂಗ ಪ್ರಶಸ್ತಿ’ಯನ್ನು ಕ್ರಮವಾಗಿ ಹಿರಿಯ ಅರ್ಥಧಾರಿಗಳಾದ ಡಾ.ಡಿ.ಸದಾಶಿವ ಭಟ್ ಹಾಗೂ ಡಾ.ಪಿ.ಶಾಂತಾರಾಮ ಪ್ರಭು ಅವರಿಗೆ ಪ್ರದಾನ ಮಾಡಲಾಯಿತು. ಅಧ್ಯಕ್ಷತೆಯನ್ನು ಕರ್ಣಾಟಕ ಬ್ಯಾಂಕ್‌ನ ಜನರಲ್ ಮೆನೇಜರ್ ಮುಳೀಧರಕೃಷ್ಣ ರಾವ್ ವಹಿಸಿದ್ದರು.

 ಮುಖ್ಯ ಅತಿಥಿಗಳಾಗಿ ಮಂಗಳೂರು ಶಾರದಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಂ.ಬಿ ಪುರಾಣಿಕ್, ಉಡುಪಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಬನ್ನಂಜೆ ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಬಿ.ಬಿ.ಪೂಜಾರಿ, ಯಕ್ಷಗಾನ ಅಕಾಡೆಮಿಯ ಸದಸ್ಯ ಕಿಶನ್ ಹೆಗ್ಡೆ ಭಾಗವಹಿಸಿದ್ದರು. ವೆಂಕಟರಾವ್ ಭಟ್ ಸುಳ್ಯ ಸಪ್ತಾಹದ ಅವಲೋಕನ ಮಾಡಿದರು.

ನಾರಾಯಣ ಎಂ.ಹೆಗಡೆ ಪ್ರಶಸ್ತಿ ಪತ್ರ ವಾಚಿಸಿದರು. ಕಲಾರಂಗದ ಉಪಾ ಧ್ಯಕ್ಷರಾದ ಗಂಗಾಧರ್ ರಾವ್, ಎಸ್.ವಿ.ಭಟ್ ಉಪಸ್ಥಿತರಿದ್ದರು. ಅಧ್ಯಕ್ಷ ಕೆ. ಗಣೇಶ್ ರಾವ್ ಸ್ವಾಗತಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಕಾರ್ಯ ಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮಕ್ಕೆ ಮೊದಲು ‘ಸತ್ಯ ದರ್ಶನ’ ತಾಳಮದ್ದಲೆ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News