ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಗೆ ಮೆರುಗು ನೀಡಿದ ಜಾಂಟಿ ರೋಡ್ಸ್, ನಟ ಸುನಿಲ್ ಶೆಟ್ಟಿ

Update: 2017-05-28 17:00 GMT

 ಮಂಗಳೂರು, ಮೇ 28: ಸಸಿಹಿತ್ಲು ಬೀಚ್‌ನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಇಂಡಿಯನ್ ಓಪನ್ ಆಫ್ ಸರ್ಫಿಂಗ್ ಉತ್ಸವವು ರವಿವಾರ ತೆರೆ ಕಂಡಿತು.

ಮುಂಜಾನೆಯಿಂದಲೇ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು ಸರ್ಫರ್‌ಗಳನ್ನು ಹುರಿದುಂಬಿಸುತ್ತಿದ್ದ ದೃಶ್ಯಗಳು ಕಂಡುಬಂದವು. ಅಲೆಗಳನ್ನು ಸಮರ್ಪಕವಾಗಿ ಕ್ಯಾಚ್ ಮಾಡಿದ ಮಾಲ್ಡೀವ್ಸ್ ಸರ್ಫರ್ ಅಮ್ಮಾಡೇ ಅವರು ಇಂಡಿಯನ್ ಓಪನ್ ಚಾಂಪಿಯನ್ ಆಗಿ ಹೊರಹೊಮ್ಮಿದರು.

ಪುದುಚೇರಿಯ ಸುಹಾಸಿನಿ ದಮಿಯನ್ ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಪಡೆದುಕೊಂಡರು.

ಚೆನ್ನೈ ಸರ್ಫರ್ ವೆಂಕಟ್ ಕೆ. ಹಾಗೂ ಶೇಖರ್ ಪಿಚೈ ಕ್ರಮವಾಗಿ ಮಾಸ್ಟರ್ಸ್‌ ಮತ್ತು ಹಿರಿಯರ ವಿಭಾಗದಲ್ಲಿ ಪ್ರಶಸ್ತಿಗೆ ಭಾಜನರಾದರು.

ಕೋವಳಂ ಸರ್ಫರ್ ರಮೇಶ್ ಮತ್ತು ಅಜೀಶ್ ಅಲಿ ಅವರು ಕ್ರಮವಾಗಿ ಜೂನಿಯರ್ ಮತ್ತು 14ರ ವಯೋಮಿತಿಯ ವಿಭಾಗದ ಪ್ರಶಸ್ತಿಗಳನ್ನು ಗೆದ್ದುಕೊಂಡರು. ಮುಕ್ತ ವಿಭಾಗದ ವಿಜೇತರು 50 ಸಾವಿರ ರೂ. ಹಾಗೂ ರನ್ನರ್ 25 ಸಾವಿರ ರೂ. ಬಹುಮಾನ ಪಡೆದರು.

ರಾಷ್ಟ್ರಮಟ್ಟದ ವಿಜೇತರು ತಲಾ 25 ಸಾವಿರ ರೂ. ಹಾಗೂ ಎರಡು ಹಾಗೂ ಮೂರನೆ ಸ್ಥಾನ ಪಡೆದ ಸರ್ಫರ್‌ಗಳು ಕ್ರಮವಾಗಿ 15 ಸಾವಿರ ಹಾಗೂ 10 ಸಾವಿರ ನಗದು ಬಹುಮಾನ ಪಡೆದರು.14 ವರ್ಷ ವಯೋಮಿತಿ ವಿಭಾಗದಲ್ಲಿ ಪ್ರಥಮ ವಿಜೇತರು 10 ಸಾವಿರ, ದ್ವಿತೀಯ 5 ಸಾವಿರ ಹಾಗೂ ತೃತೀಯ ಸ್ಥಾನ ಪಡೆದ ಸ್ಪರ್ಧಿ 3 ಸಾವಿರ ರೂ. ಬಹುಮಾನ ಗಳಿಸಿದರು.

ಮಾಲ್ಡೀವ್ಸ್‌ನ ಸರ್ಫರ್ ಅಮ್ಮಾಡೇ ಮುಕ್ತ ವಿಭಾಗದಲ್ಲಿ ಚಾಂಪಿಯನ್ ಆಗಿ ಮೂಡಿ ಬಂದರೆ, ಫ್ರಾನ್ಸ್‌ನ ಪೆರ್ಸಿವಲ್ ಫಯಾನ್ ದ್ವಿತೀಯ ಸ್ಥಾನ ಪಡೆದರು. ಮಹಿಳಾ ವಿಭಾಗದಲ್ಲಿ ಬಿರುಸಿನ ಸ್ಪರ್ಧೆ ನಡೆಯಿತು. ಪುದುಚೇರಿಯ ಸುಹಾಸಿನಿ ದಮಿಯನ್ ಪ್ರಶಸ್ತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾದರೆ, ರಷ್ಯಾದ ಓಲ್ಗಾ ಕೊಸೆಂಕೊ ದ್ವಿತೀಯ ಹಾಗೂ ಮಣಿಪಾಲದ ಇಶಿತಾ ಮಾಳವೀಯ ತೃತೀಯ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು.ಮಂಗಳೂರಿನ ಕಿಶೋರ್‌ಗೆ ಮೂರನೆ ಸ್ಥಾನ.

ಚೆನ್ನೈನ ಶೇಖರ್ ಪಿಚ್ಚೈ ಪುರುಷರ ಸ್ಟ್ಯಾಂಡ್ ಅಪ್ ಪೆಡಲ್ ರೇಸ್‌ನಲ್ಲಿ ವಿಜೇತರಾದರು. ತಮಿಳುನಾಡಿನ ವಿಘ್ನೇಶ್ ವಿಜಯ್ ಕುಮಾರ್ ಎರಡನೇ ಸ್ಥಾನ ಗಳಿಸಿದರೆ, ಮಂಗಳೂರಿನ ಕಿಶೋರ್ ಕುಮಾರ್ 3ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಮಾಸ್ಟರ್ಸ್‌ ವಿಭಾಗದಲ್ಲಿ ಚೆನ್ನೈನ ವೆಂಕಟ್ ಕೆ. ಹಾಗೂ ಮೂರ್ತಿ ಮೆಗವನ್ ಗಮನ ಸೆಳೆದರು. 30 ವರ್ಷ ಮೇಲ್ಪಟ್ಟವರ ಈ ವಿಭಾಗದಲ್ಲಿ ಈ ಇಬ್ಬರು ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದರೆ, ಗೋವಾದ ಸಂದೀಪ್ ಸ್ಯಾಮ್ಯುಯೆಲ್ ಮೂರನೇ ಸ್ಥಾನ ಗಳಿಸಿದರು.

ಹಿರಿಯರ ವಿಭಾಗದಲ್ಲಿ ಚೆನ್ನೈ ಸರ್ಫರ್‌ಗಳ ಪ್ರಾಬಲ್ಯ ಕಂಡುಬಂತು. ಶೇಖರ್ ಪಿಚ್ಚೈ, ವರ್ಗೀಸ್ ಆಂಟೋನಿ ಹಾಗೂ ಧರಣಿ ಸೆಲ್ವ ಕುಮಾರ್ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದರು.17 ರಿಂದ 22 ವರ್ಷ ವಯಸ್ಸಿನ ಕಿರಿಯರ ವಿಭಾಗದಲ್ಲಿ ಚಾಂಪಿಯನ್ ಸ್ಥಾನ ಕೋವಳಂ ಸರ್ಫರ್ ರಮೇಶ್ ಅವರ ಪಾಲಾಯಿತು. ಪಿ.ಸೂರ್ಯ ಹಾಗೂ ರಾಹುಲ್ ಗೋವಿಂದ್ ಕ್ರಮವಾಗಿ ನಂತರದ ಎರಡು ಸ್ಥಾನಗಳನ್ನು ಪಡೆದರು.

16 ವರ್ಷ ವಯೋಮಿತಿ ವಿಭಾಗದಲ್ಲಿ ಕೋವಳಂನ ಅಜೇಶ್ ಅಲಿ ರಾಷ್ಟ್ರೀಯ ಚಾಂಪಿಯನ್ ಆಗಿ ಹೊರಹೊಮ್ಮಿದರು. ಸಂತೋಷ್ ಶಾಂತಕುಮಾರ್ ಹಾಗೂ ಶಿವರಾಜ್‌ ಬಾಬು ಎರಡು ಹಾಗೂ ಮೂರನೇ ಸ್ಥಾನ ಪಡೆದರು. 14 ವರ್ಷ ವಯೋಮಿತಿ ವಿಭಾಗದಲ್ಲಿ ಅಖಿಲನ್ ಮೊದಲ ಸ್ಥಾನ ಪಡೆದರೆ, ಸುಬ್ರಮಣಿ ಮುನಿಯನ್ ಹಾಗೂ ಅಬ್ದುಲ್ ರಝಾಕ್ ಜಮಾಲುದ್ದೀನ್ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಗಳಿಸಿದರು.

ಕ್ರಿಕೆಟಿದ ಜಾಂಟಿ ರೋಡ್ಸ್, ನಟ ಸುನಿಲ್ ಶೆಟ್ಟಿ ಭೇಟಿ: ಸ್ಟಾರ್ ಕ್ರಿಕೆಟರ್ ಜಾಂಟಿ ರೋಡ್ಸ್ ಅವರ ಆಗಮನ ಸ್ಪರ್ಧಿಗಳು ಮತ್ತು ಅಭಿಮಾನಿಗಳಿಗೆ ಮುದ ನೀಡಿತು. ಜಾಂಟಿ ರೋಡ್ಸ್ ಸ್ವತಃ ಸರ್ಫರ್ ಕೂಡಾ ಆಗಿದ್ದಾರೆ.

ಮಂಗಳೂರು ಮೂಲದ ಬಾಲಿವುಡ್ ನಟ ಸುನೀಲ್ ಶೆಟ್ಟಿ ಕೂಡಾ ವಿಶೇಷ ಭೇಟಿ ನೀಡಿ ಟೂರ್ನಿಗೆ ಮಹತ್ವ ನೀಡಿದರು. ಕರ್ನಾಟಕ ಬೀಚ್ ಉತ್ಸವ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ಇದನ್ನು ಆಯೋಜಿಸಿದ್ದು, ಇಂಡಿಯನ್ ಸರ್ಫಿಂಗ್ ಫೆಡರೇಷನ್ ಇದಕ್ಕೆ ಮಾನ್ಯತೆ ನೀಡಿದೆ. ಮಂತ್ರ ಸರ್ಫ್ ಕ್ಲಬ್ ಹಾಗೂ ಕೆನರಾ ವಾಟರ್ ಸ್ಪೋರ್ಟ್ಸ್ ಪ್ರಮೋಷನ್ ಕೌನ್ಸಿಲ್ ಸಂಯುಕ್ತವಾಗಿ ಕೂಟವನ್ನು ಆಯೋಜಿಸಿದ್ದವು.

ಅಭಿನಂದನೆ: ಎಲ್ಲ ಸ್ಪರ್ಧಿಗಳೂ ಕಠಿಣ ಸಾಗರ ಅಲೆಗಳನ್ನು ಎದುರಿಸುವ ಸಾಹಸ ತೋರಿದ್ದಕ್ಕಾಗಿ ಅಭಿನಂದನೆಗೆ ಅರ್ಹರು. ಇಂಡಿಯನ್ ಓಪನ್ ಸರ್ಫಿಂಗ್‌ಗೆ ಹಲವು ಮಂದಿ ಆಗಮಿಸಿರುವುದು ಸಂತಸದ ವಿಚಾರ. ಎರಡನೇ ಸಂಚಿಕೆಯಲ್ಲೇ ಕೇವಲ ಸರ್ಫರ್‌ಗಳು ಮಾತ್ರವಲ್ಲದೇ ಸರಕಾರ ಹಾಗೂ ಸ್ಥಳೀಯರು ಈ ಕೂಟದ ಯಶಸ್ಸಿಗೆ ಕಾರಣರಾಗಿದ್ದಾರೆ. ಸರ್ಫಿಂಗ್ ಕ್ರೀಡೆ ಏಷ್ಯನ್ ಗೇಮ್ಸ್‌ನಲ್ಲಿ ಸೇರ್ಪಡೆಯಾಗಿದ್ದು, ಇಂಥ ಕೂಟಗಳನ್ನು ಏರ್ಪಡಿಸುವುದರಿಂದ ಭಾರತದಲ್ಲಿ ಸರ್ಫರ್‌ಗಳು ಬೆಳೆಯಲು ಅನುಕೂಲವಾಗುತ್ತದೆ. ಕರ್ನಾಟಕ ಸರಕಾರ ಕೂಟಕ್ಕೆ ನಿರಂತರ ಬೆಂಬಲ ನೀಡುತ್ತಾ ಬಂದಿದೆ. ಟಿಟಿ ಗ್ರೂಪ್, ಯೂನಿಯನ್‌ಬ್ಯಾಂಕ್ ಹಾಗೂ ಕಾಕ್ಸ್ ಮತ್ತು ಕಿಂಗ್ಸ್‌ನ ಟ್ರಿಪ್ 360 ಕೂಟದ ಪ್ರಾಯೋಜಕತ್ವ ವಹಿಸಿದ್ದು, ಅವರಿಗೂ ಅಭಿನಂದನೆ ಸಲ್ಲಬೇಕು ಎಂದು ಸರ್ಫಿಂಗ್ ಫೆಡರೇಷನ್ ಆಫ್ ಇಂಡಿಯಾ ಅಧ್ಯಕ್ಷ ಕಿಶೋರ್ ಕುಮಾರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News