ಕೊಕೈನ್ ಮಾರಾಟ: ಐದು ಮಂದಿ ನೈಜೀರಿಯಾ ಪ್ರಜೆಗಳ ಬಂಧನ

Update: 2017-05-28 17:32 GMT

ಬೆಂಗಳೂರು, ಮೇ 28: ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ನಗರದ ಸಿಸಿಬಿ ಪೊಲೀಸರು ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಟ್ಟು ಐದು ಮಂದಿ ನೈಜೀರಿಯಾ ಮೂಲದ ಪ್ರಜೆಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, 18 ಲಕ್ಷ ರೂ. ಮೊತ್ತದ ಕೊಕೈನ್ ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ನೈಜಿರಿಯಾ ಮೂಲದ ಝಾಗೋ ಕನ್ಸಟಂಟ್ (33), ಇಬೆಲ್ಲೆ ಇಫೆಕ್ವು ಉಫೆರೋ(53), ಉಡೋಗಲ ಆಗಸ್ಟಿನ್ ಅರಿಂಝ್ (29) ಇಬೂಕಾ ಇಮ್ಯಾನೂಲ್(37) ಹಾಗೂ ಪೀಟರ್ ನ್ವೂಬುನ್ ವಕಾಫೊರ್ (26) ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಗಳ ಪೈಕಿ ಇಬ್ಬರು ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ವಡ್ಡರ ಪಾಳ್ಯದಲ್ಲಿ ಮತ್ತು ಮೂರು ಮಂದಿ ಆರೋಪಿಗಳು ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಪೇಟೆ ಕೃಷ್ಣಪ್ಪ ಲೇಔಟ್‌ನಲ್ಲಿ ಮನೆ ಮಾಡಿಕೊಂಡಿದ್ದು, ಕೊಕೈನ್ ಮಾರಾಟ ದಂಧೆ ಮಾಡುತ್ತಿದ್ದರು ಎಂದು ಹೇಳಲಾಗಿದೆ.

ಬಂಧಿತರಿಂದ 15 ಮೊಬೈಲ್, ಐದು ಪಾಸ್‌ಪೋರ್ಟ್, ಲ್ಯಾಪ್‌ಟಾಪ್, ಬೈಕ್‌ಗಳು ಸೇರಿದಂತೆ ಒಟ್ಟು 18 ಲಕ್ಷ ರೂ. ಅಧಿಕ ಮೊತ್ತದ ಮಾದಕ ವಸ್ತು ಕೊಕೈನ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಹೆಣ್ಣೂರು, ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News