ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದಿಂದ 7 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ

Update: 2017-05-28 17:53 GMT

ಉಳ್ಳಾಲ, ಮೇ 28: ಭಾರತೀಯ ಜನತಾ ಪಕ್ಷದ ಕಡೆ ಅನುಮಾನದ ದೃಷ್ಟಿ ಇರಿಸಿದ್ದ ಅಲ್ಪಸಂಖ್ಯಾತರಿಂದು ಪಕ್ಷದತ್ತ ಆಕರ್ಷಿತರಾಗುತ್ತಿರಲು ಅಲ್ಪಸಂಖ್ಯಾತ ಮೋರ್ಚಾದ ಕಾರ್ಯವೈಖರಿಯೇ ಕಾರಣ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ರವೀಂದ್ರ ಶೆಟ್ಟಿ ಉಳಿದೊಟ್ಟು ಅಬಿಪ್ರಾಯಪಟ್ಟರು.

ಪಂಡಿತ್ ದೀನ್‌ದಯಾಳ್ ಉಪಾಧ್ಯಾಯರ ಜನ್ಮಶತಾಬ್ದಿ ಪ್ರಯುಕ್ತವಾಗಿ ಬಿಜೆಪಿ ಮಂಗಳೂರು ವಿದಾನಸಭಾ ಕ್ಷೇತ್ರ ಅಲ್ಪಸಂಖ್ಯಾತ ಮೋರ್ಚಾದ ವತಿಯಿಂದ ಅಶಕ್ತ ಕುಟುಂಬಗಳ 7 ಮಕ್ಕಳಿಗೆ ದೇರಳಕಟ್ಟೆಯ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉಚಿತ ಶಿಕ್ಷಣ ನೀಡುವ ಸಲುವಾಗಿ ತೊಕ್ಕೊಟ್ಟಿನ ಬಿಜೆಪಿ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.

ಮಕ್ಕಳಿಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಬೇಕೆಂಬುದು ಪ್ರತಿಯೊಬ್ಬ ಪೋಷಕರ ಕನಸಾಗಿರುತ್ತದೆ. ಆದರೆ ಆರ್ಥಿಕ ಪರಿಸ್ಥಿತಿಯು ಎಲ್ಲರಿಗೂ ತಮ್ಮ ಮಕ್ಕಳಿಗೆ ಪೂರಕ ಶಿಕ್ಷಣವನ್ನು ನೀಡಲು ಅಶಕ್ತರನ್ನಾಗಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಅಶಕ್ತ ಕುಟುಂಬದ ಮಕ್ಕಳನ್ನು ಓದಿಸಲು ಮುಂದಾದ ಕ್ಷೇತ್ರದ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯ ಶ್ಲಾಘನೀಯ. ನಮ್ಮ ಶಾಲಾಡಳಿತವು ಅನೇಕ ಬಡ ಮಕ್ಕಳಿಗೆ ಕಡಿಮೆ ಶುಲ್ಕದಲ್ಲಿ ಓದುವ ಅವಕಾಶವನ್ನು ಕಲ್ಪಿಸಿದ್ದು ಮಕ್ಕಳು ಕೂಡ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಅತ್ಯತ್ತಮ ಪ್ರಜೆಗಳಾಗಿ ಎಂದು ಆಶಿಸಿದರು.

ಕ್ಷೇತ್ರಾಧ್ಯಕ್ಷ ಸಂತೋಷ್‌ಕುಮಾರ್ ಬೋಳಿಯಾರ್ ಮಾತನಾಡಿ ಅಲ್ಪಸಂಖ್ಯಾತರಿಗಿಂದು ಸೂಕ್ತ ಸ್ಥಾನ, ಮಾನ ಕೊಟ್ಟ ಪಕ್ಷ ಬಿಜೆಪಿ. ಕಳೆದ ಬಾರಿ ಕರ್ನಾಟಕದಲ್ಲಿ ಬಿಜೆಪಿ ಆಡಳಿತದ ಚುಕ್ಕಾಣಿ ಹಿಡಿದಾಗ ಚುನಾವಣಾ ಪೂರ್ವದಲ್ಲಿ ಹೇಳಿದ್ದ ಮಾತಿನಂತೆ ಮುಮ್ತಾರ್ ಅಲಿಖಾನ್ ಅವರಿಗೆ ಕ್ಯಾಬಿನೆಟ್ ಸಚಿವ ಸ್ಥಾನ ನೀಡಿ ಗೌರವಿಸಲಾಗಿತ್ತು. ಪಕ್ಷದಲ್ಲಿಂದು ಅಲ್ಪಸಂಖ್ಯಾತ ಮೋರ್ಚಾವು ಕಾರ್ಯೋನ್ಮುಖವಾಗಿದ್ದು ಇಂತಹ ಜನಪರ ಕಾರ್ಯಗಳನ್ನು ನಡೆಸುತ್ತಿರುವುದು ನಿಜಕ್ಕೂ ಹೆಮ್ಮೆಯ ಕಾರ್ಯ ಎಂದರು.

ಕ್ಷೇತ್ರದ ಪ್ರ.ಕಾ ಮೋಹನ್‌ ರಾಜ್ ಯು, ಜಿಲ್ಲಾ ಅಲ್ಪಸಂಖ್ಯಾತ ಮೋರ್ಚಾದ ಪ್ರ.ಕಾ ಹಾಜಿ, ಡಾ.ಕೆ.ಎ ಮುನೀರ್ ಬಾವಾ, ಕ್ಷೇತ್ರಾಧ್ಯಕ್ಷ ಅಶ್ರಫ್ ಹರೇಕಳ, ಪ್ರ.ಕಾ ಅಸ್ಗರ್, ಮಾಜಿ ಶಾಸಕ ಕೆ.ಜಯರಾಮ ಶೆಟ್ಟಿ, ಕ್ಷೇತ್ರ ಉಪಾಧ್ಯಕ್ಷ ಯಶವಂತ್ ಅಮೀನ್, ಪ್ರ.ಕಾ ಮನೋಜ್ ಆಚಾರ್ಯ, ಉಳ್ಳಾಲ ನಗರಸಭಾ ಸದಸ್ಯ ಇಸ್ಮಾಯಿಲ್ ಪೊಡಿಮೋನು, ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ ಮೊದಲಾದವರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News