ಸಮಾಜಕ್ಕೆ ಆತ್ಮಸ್ಥೈರ್ಯ ತುಂಬುವ ಕಾರ್ಯ ಆಗಬೇಕು: ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ

Update: 2017-05-28 18:07 GMT

ಉಳ್ಳಾಲ, ಮೇ 28: ಸಮಾಜಕ್ಕೆ ಆತ್ಮಸ್ಥೈರ್ಯ ಶಕ್ತಿ ತುಂಬಿಸುವ ಕಾರ್ಯ ಆಗಬೇಕಾಗಿದ್ದು, ಈ ಮೂಲಕ ಸಮಾಜವನ್ನು ಬೆಳೆಸುವ ಮಹತ್ತರ ಕಾರ್ಯ ಸಂಘಟನೆಗಳ ಮೇಲಿದೆ, ಈ ನಿಟ್ಟಿನಲ್ಲಿ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಕೇಂದ್ರ ಸಮಿತಿ ಉಳ್ಳಾಲ ಇದರ ಕಾರ್ಯ ಶ್ಲಾಘನೀಯ ಎಂದು ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಅಭಿಪ್ರಾಯ ಪಟ್ಟರು.

 ಕೊಲ್ಯ ಶ್ರೀ ಸೌಭಾಗ್ಯ ಸದನದಲ್ಲಿ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಕೇಂದ್ರ ಸಮಿತಿ ಉಳ್ಳಾಲ ಇದರ ಅಶ್ರಯದಲ್ಲಿ 17ನೇ ವರ್ಷದ ಬಡ ಕುಟುಂಬದ ವಿದ್ಯಾರ್ಥಿಗಳ ಶೈಕ್ಷಣಿಕ ದತ್ತು ಸ್ವೀಕಾರ, ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ, ಶೈಕ್ಷಣಿಕ ಸಹಾಯಧನ ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮದೊಂದಿಗೆ ರಾಜ್ಯ ಪ್ರಶಸ್ತಿ ಪುರಸ್ಕೃತ ಚಲನಚಿತ್ರ ನಟ ಕುಸಲ್ದರಸೆ ನವೀನ್ ಡಿ. ಪಡೀಲ್ ಅವರಿಗೆ ಬ್ರಹ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
 

ಸಮಾಜದ ಪ್ರತೀ ಕುಟುಂಬದ ಕಟ್ಟಕಡೆಯ ಮಗು ಶಿಕ್ಷಣ ಪಡೆದಾಗ ಸಮಾಜಕ್ಕೆ ಶಕ್ತಿಯಾಗಿ ರೂಪುಗೊಳ್ಳಲು ಸಾಧ್ಯವಿದೆ. ಅಂಗನವಾಡಿಗಳಲ್ಲಿ ಸಿಬ್ಬಂದಿಗೂ ಮೆರಿಟ್ ಆಧಾರದಲ್ಲಿ ಕೆಲಸಗಳು ಸಿಗುತ್ತಿದ್ದು, ಅತ್ಯಂತ ಕಡು ಬಡತನದಲ್ಲಿ ಹುಟ್ಟುವ ಮಗುವೂ ಉನ್ನತ ಶಿಕ್ಷಣಗಳಾದ ಎಂಬಿಬಿಎಸ್, ಇಂಜಿನಿಯರಿಂಗ್ ಪದವಿ ಪಡೆಯಲು ಅವಕಾಶವಿದ್ದು ಇಂತಹ ಮಾಹಿತಿಯನ್ನು ತಿಳಿಸುವ ಕಾರ್ಯ ಸಂಘಟನೆಗಳಿಂದ ಆಗಬೇಕಾಗಿದೆ ಎಂದರು.

 ದತ್ತು ಸ್ವೀಕಾರಕ್ಕೆ ಚಾಲನೆ ನೀಡಿದ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ಮಾತನಾಡಿ ಶೈಕ್ಷಣಿಕ ಸಹಕಾರ ಪಡೆದ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆದು ಆರ್ಥಿಕವಾಗಿ ಸಬಲರಾಗಿ ಇತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಕರಿಸಿ ಎಂದರು.

 ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಡುಮಲೆ ಕೋಟಿ ಚೆನ್ನಯ ಜನ್ಮಸ್ಥಳ ಸಂಚಾಲನ ಸಮಿತಿಯ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿ ಉನ್ನತ ಶಿಕ್ಷಣ ಅಗತ್ಯ. ವೈದ್ಯ, ಇಂಜಿನಿಯರ್ ಕನಸಿನೊಂದಿಗೆ ಜೀವನ ಶಿಕ್ಷಣ ಅರಿವಾಗಬೇಕಾದರೆ ವಿವೇಕಾನಂದ, ನಾರಾಯಣ ಗುರುಗಳ ಜೀವನ ಚರಿತ್ರೆ ಅವರ ಚಿಂತನೆಗಳನ್ನು ಅರಿಯುವ ಕಾರ್ಯ ಮಾಡಬೇಕು. ಬಿಲ್ಲವರಲ್ಲಿ ಧರ್ಮ ಜಾತಿ ಪ್ರಜ್ಞೆ ಯೊಂದಿಗೆ, ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಂಡರೆ ಬಿಲ್ಲವ ಸಮಾಜ ಇನ್ನಷ್ಟು ಬಲಶಾಲಿಯಾಗಲು ಸಾಧ್ಯ ಎಂದರು.
 

ಕಾರ್ಯಕ್ರಮದಲ್ಲಿ ಭವಾನಿ ಸ್ಯಾನಿಟರಿ ಮಂಗಳೂರು ಇದರ ಮಾಲಕ ಯೋಗೀಶ್ ಕುಮಾರ್, ಶ್ರೀ ಮಲರಾಯ ಬಂಟ ದೈವ ಚಾರಿಟೇಬಲ್ ಟ್ರಸ್ಟ್ ಕಿನ್ಯಾ ಇದರ ಆಡಳಿತ ಮೊಕ್ತೇಸರ ಬಾಬು ಕಿನ್ಯಾ, ಶ್ರೀ ಸಾಯಿ ಮಂದಿರ ಮಾಡೂರು ಇದರ ಆಡಳಿತ ಮೊಕ್ತೇಸರ ಕೆ.ಪಿ.ಸುರೇಶ್, ಬಿಲ್ಲವಾಸ್ ದುಬಾ ಇದರ ಮಾಧವ ಪೂಜಾರಿ, ಶಬರಿ ಟ್ರಾವೆಲ್ಸ್ ಮಂಗಳೂರು ಇದರ ಮಾಲಕ ಸದಾನಂದ ಪೂಜಾರಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಮಂಗಳೂರು ಕ್ಷೇತ್ರ ಬಿಜೆಪಿ ಮಾಜಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ, ಬೃಹ್ಮಶ್ರೀ ಬಿಲ್ಲವ ವೇದಿಕೆ ಉಪಾಧ್ಯಕ್ಷರಾದ ಸತೀಶ್ ಕರ್ಕೇರ, ಲಕ್ಷ್ಮಣ್ ಸೋಮೇಶ್ವರ ಸಂಘಟನಾ ಕಾರ್ಯದರ್ಶಿ ಗೋಪಿನಾಥ್ ಬಗಂಬಿಲ, ರವಿಸುವರ್ಣ, ಭಗವಾನ್‌ದಾಸ್ ತೊಕ್ಕೊಟ್ಟು ಉಪಸ್ಥಿತರಿದ್ದರು.

ಬ್ರಹ್ಮಶ್ರೀ ಬಿಲ್ಲವ ವೇದಿಕೆ ಪ್ರಧಾನ ಕಾರ್ಯದರ್ಶಿ ಜೀವನ್ ಕುಮಾರ್ ತೊಕ್ಕೊಟ್ಟು ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಹರೀಶ್ ಮುಂಡೋಳಿ ಪ್ರಸ್ತಾವನೆಗೈದರು. ಕೋಶಾಕಾರಿ ಹರೀಶ್ ಅಂಬ್ಲಮೊಗರು ಪ್ರತಿಭಾನ್ವಿತ ವಿದ್ಯಾರ್ಥಿಗಳ ವಿವರ ನೀಡಿದರು. ದತ್ತು ಸಂಚಾಲಕ ಆನಂದ ಅಸೈಗೋಳಿ ಶೈಕ್ಷಣಿಕ ದತ್ತು ಸ್ವೀಕಾರದ ಮಾಹಿತಿ ನೀಡಿದರು. ಪ್ರವೀಣ್ ಎಸ್. ಕುಂಪಲ ಕಾರ್ಯಕ್ರಮ ನಿರ್ವಹಿಸಿದರು. ಸಮಿತಿ ಸಂಘಟನಾ ಕಾರ್ಯದರ್ಶಿ ಕೃಷ್ಣಪ್ಪ ಕಿನ್ಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News