ಎಂಡೋ ಸಂತ್ರಸ್ತರ ಆಮರಣಾಂತ ಉಪವಾಸ ಹಿಂದಕ್ಕೆ

Update: 2017-05-28 18:27 GMT

ಬೆಳ್ತಂಗಡಿ, ಮೇ 28: ಕೊಕ್ಕಡ ಎಂಡೋ ಹೋರಾಟ ಸಮಿತಿಯ ನೇತೃತ್ವದಲ್ಲಿ ಕೊಕ್ಕಡ ಜೋಡುಮಾರ್ಗದಲ್ಲಿ ಶನಿವಾರ ಆರಂಭವಾದ ಎಂಡೋ ಸಂತ್ರಸ್ತರ ಆಮರಣಾಂತ ಉಪವಾಸ ರವಿವಾರ ಶಾಸಕ ವಸಂತ ಬಂಗೇರ, ಜಿಲ್ಲಾಧಿಕಾರಿ ಜಗದೀಶ್, ಗಣೇಶ್ ಕಾರ್ಣಿಕ್ ಅವರ ಭೇಟಿ ಹಾಗೂ ಮಾತುಕತೆಯ ಬಳಿಕ ಹಿಂಪಡೆಯಲಾಯಿತು.

ಬೆಳಗ್ಗಿನಿಂದಲೇ ಎಲ್ಲಾ ಕಡೆಗಳ ಎಂಡೋ ಸಂತ್ರಸ್ತರು ಮತ್ತು ಹೋರಾಟವನ್ನು ಬೆಂಬಲಿಸುವ ಸಂಘಸಂಸ್ಥೆಗಳ ಪದಾಧಿಕಾರಿಗಳು ಪ್ರತಿಭಟನಾ ಪೆಂಡಾಲ್‌ನಲ್ಲಿ ಜಮಾಯಿಸಿದ್ದರು. ಸುಮಾರು 500ಕ್ಕೂ ಮಿಕ್ಕಿ ಸಾರ್ವಜನಿಕರು ಮತ್ತು 10ಕ್ಕೂ ಮಿಕ್ಕಿ ಎಂಡೋ ಸಂತ್ರಸ್ತರು ಆಮರಣಾಂತ ಉಪವಾಸ ಸತ್ಯಾಗ್ರಹದ ಸಭೆಯಲ್ಲಿ ಭಾಗವಹಿಸಿದ್ದರು.

 ಶಾಸಕರ ಭೇಟಿ: ಬೆಳ್ತಂಗಡಿ ಶಾಸಕ ವಸಂತ ಬಂಗೇರ ಮಧ್ಯಾಹ್ನದ ವೇಳೆ ಪ್ರತಿಭಟನಾ ಸಭೆಗೆ ಆಗಮಿಸಿ ಎಂಡೋ ಸಂತ್ರಸ್ತರ ಬೇಡಿಕೆಗಳ ಬಗ್ಗೆ ಈಗಾಗಲೇ ಸರಕಾರದಿಂದ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಪ್ರತಿಭಟನಾಕಾರರ ಬೇಡಿಕೆಯನ್ನು ಆರೋಗ್ಯ ಸಚಿವರಿಗೆ ಮತ್ತು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ತಿಳಿಸಿದರು. ಹಾಗೂ ಪ್ರತಿಭಟನಾಕಾರರಲ್ಲಿ ಉಪವಾಸ ಸತ್ಯಾಗ್ರಹ ಕೈಬಿಡುವಂತೆ ವಿನಂತಿಸಿದರು.

ವಿಧಾನ ಪರಿಷತ್ ಮುಖ್ಯ ಸಚೇತಕ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಭೇಟಿ ನೀಡಿ ಮಾತನಾಡಿ, ಜೂನ್ 4ರಂದು ಆರಂಭವಾಗಲಿರುವ ಉಭಯ ಸದನಗಳಲ್ಲೂ ನಮ್ಮ ಜಿಲ್ಲೆಯ ಎಂಡೋ ಸಮಸ್ಯೆಯ ಕುರಿತಾಗಿ ಚರ್ಚಿಸಲು ಬೇಕಾದ ನಿಲುವಳಿಗಳ ಬಗ್ಗೆ ಈಗಾಗಲೇ ವಿಧಾನಪರಿಷತ್ ಅಧ್ಯಕ್ಷರಲ್ಲಿ ಅನುಮತಿಯನ್ನು ಪಡಕೊಂಡಿದ್ದು, ಜಿಲ್ಲೆಯ ಎಲ್ಲಾ ಶಾಸಕರು ಈ ಬಗ್ಗೆ ಒಗ್ಗಟ್ಟಾಗಿ ಚರ್ಚೆಯನ್ನು ನಡೆಸಿ ಅತ್ಯುತ್ತಮ ಮಾದರಿಯಲ್ಲಿ ಎಂಡೋ ಪರಿಹಾರವನ್ನು ಸರಕಾರ ಕಲ್ಪಿಸಲು ಪ್ರಯತ್ನಿಸುವುದಾಗಿ ತಿಳಿಸಿದರು.

 ಜಿಲ್ಲಾಧಿಕಾರಿ ಭೇಟಿ: ಬಳಿಕ ಉಪವಾಸ ಸತ್ಯಾಗ್ರಹ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಜಗದೀಶ್ ಮಾತನಾಡಿ, ಸಂತ್ರಸ್ತರ ಬೇಡಿಕೆಗಳಲ್ಲಿ ಬಹುತೇಕ ಸಮಸ್ಯೆಗಳಲ್ಲಿ ಜಿಲ್ಲಾಡಳಿತದ ಅಧೀನದಲ್ಲಿ ಸರಿಪಡಿಸಬಹುದಾದ ಪಟ್ಟಿಯನ್ನು ಪ್ರತಿಭಟನಾಕಾರರಿಗೆ ವಿವರಿಸಿದರು.

ಬಳಿಕ ಹೋರಾಟಗಾರರು ತಮ್ಮ ಪ್ರತಿಭಟನೆಯನ್ನು ಹಿಂಪಡೆದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ಡಾ.ಅರುಣ್, ಉಪ ವಿಭಾಗಾಧಿಕಾರಿ ರಘುನಂದನ್ ಮೂರ್ತಿ ಹಾಗೂ ಇತರೆ ಅಧಿಕಾರಿಗಳು ಇದ್ದರು.

ಕೊಕ್ಕಡ ಎಂಡೋ ವಿರೋಧಿ ಹೋರಾಟ ಸಮಿತಿ ಗೌರವಾಧ್ಯಕ್ಷ ಕುಶಾಲಪ್ಪಗೌಡ, ಶ್ರೀಧರ ಗೌಡ ಕೆಂಗುಡೇಲು ಪೂವಾಜೆ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಹರೀಶ್ ಪೂಂಜ, ಬೆಳ್ತಂಗಡಿ ತಾಲೂಕು ಬಿಜೆಪಿ ಅಧ್ಯಕ್ಷ ರಂಜನ್ ಗೌಡ ಉಪಸ್ಥಿತರಿದ್ದರು. ಉಪವಾಸ ಸತ್ಯಾಗ್ರಹದ ಪ್ರತಿಭಟನಾ ಸಭೆಗೆ ಜಲ್ಲೆಯ ವಿವಿಧ ಭಾಗಗಳಿಂದ ನೂರಾರು ಜನರು, ಸಂಘಟನೆಗಳ ಪ್ರತಿನಿಧಿಗಳು ಆಗಮಿಸಿ ತಮ್ಮ ಬೆಂಬಲ ಸೂಚಿಸಿದರು.

ಜೂನ್ 15ರಂದು ಕೊಕ್ಕಡದಲ್ಲಿ ಜಿಲ್ಲಾಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲಿದ್ದು, ಜಿಲ್ಲೆಯ ಎಂಡೋ ಸಂತ್ರಸ್ತರ ಗುರುತು ಚೀಟಿ ಮತ್ತು ಇನ್ನಿತರ ಎಲ್ಲಾ ಸಮಸ್ಯೆಗಳನ್ನು ಮುಂಚಿತವಾಗಿ ಕಂದಾಯ ಇಲಾಖೆಗೆ ತಿಳಿಯಪಡಿಸಿದಲ್ಲಿ ಅಂದಿನ ಸಭೆಯಲ್ಲೇ ಇತ್ಯರ್ಥ ಮಾಡಲಾಗುವುದು ಮತ್ತು ಹೊಸದಾಗಿ ನೀಡಿದ ಸಮಸ್ಯೆಗಳನ್ನು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

- ಜಗದೀಶ್, ಜಿಲ್ಲಾಧಿಕಾರಿ

ಕೊಕ್ಕಡದಲ್ಲಿ ಶಾಶ್ವತ ಪುನರ್ವಸತಿ ಕೇಂದ್ರವನ್ನು ಆರಂಭಿಸಲು ಬೇಕಾದ 5 ಎಕ್ರೆ ಸ್ಥಳವನ್ನು ಕೂಡಲೆ ಗುರುತಿಸುವುದು, ಮತ್ತು ಶಾಶ್ವತ ಪುನರ್ವಸತಿ ಕೇಂದ್ರವನ್ನು ಕೊಕ್ಕಡದಲ್ಲೂ ರಚಿಸಲು ಸರಕಾರಕ್ಕೆ ಬರೆ ಯುವುದು, ಮಾಸಾಶನ ವಂಚಿತರನ್ನು ಗುರುತಿಸುವುದು. ಮಲಗಿದಲ್ಲೇ ಇರುವ ಸಂತ್ರಸ್ತರ ಪೋಷಕರಿಗೂ ಮಾಸಿಕ ವೇತನ ಪಿಂಚಣಿಯನ್ನು ನೀಡಲು ಸರಕಾರಕ್ಕೆ ಪ್ರಸ್ತಾವನೆ. ಸಂಚಾರಿ ಆಸ್ಪತ್ರೆಗಳು ಇಂದಿನಿಂದಲೇ ಮಲಗಿದಲ್ಲೇ ಇರುವ ಸಂತ್ರಸ್ತರ ಮನೆಗೆ ಭೇಟಿ ನೀಡಿ ಚಿಕಿತ್ಸೆ ನೀಡುವುದರೊಂದಿಗೆ ಉಚಿತ ಔಷದಿಗಳನ್ನು ವಿತರಿಸಲು ಸ್ಥಳದಲ್ಲೇ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಆದೇಶ ಮತ್ತಿತರ ಹತ್ತಾರು ಬೇಡಿಕೆಗಳ ಈಡೇರಿಕೆಯ ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News