ಹಾಶಿಮ್ ಆಮ್ಲ ಸಲಹೆ : ಅಂಪೈರ್ ಅಲೀಂ ದಾರ್ ರಿಂದ ಅಚ್ಚರಿಯ ಬದಲಾವಣೆ

Update: 2017-05-29 05:43 GMT

ಲಂಡನ್, ಮೇ 29: ದಕ್ಷಿಣ ಆಫ್ರಿಕದ ದಾಂಡಿಗ ಹಾಶಿಮ್ ಅಮ್ಲ ಅವರ ಸಲಹೆಯಂತೆ ಪಾಕಿಸ್ತಾನದ ಅಂಪೈರ್ ಅಲೀಂ ದಾರ್ ತನ್ನ ಶೈಲಿಯಲ್ಲಿ ಬದಲಾವಣೆ ಮಾಡಿದ್ದಾರೆ.
ಅಂಪೈರ್ ದಾರ್ ರವಿವಾರ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳ ನಡುವಿನ ಚಾಂಪಿಯನ್ಸ್ ಟ್ರೋಫಿ ಅಭ್ಯಾಸ ಪಂದ್ಯದಲ್ಲಿ ಅಂಪೈರ್ ಆಗಿ ಕಾರ್ಯ ನಿರ್ವಹಿಸುವಾಗ ಪ್ರೇಕ್ಷರಿಗೆ ಅಚ್ಚರಿ ಕಾದಿತ್ತು. ಹಿಂದೆ ಕ್ಲೀನ್ ಶೇವ್ ಮಾಡಿ ಕ್ರೀಡಾಂಗಣಕ್ಕೆ ಇಳಿಯುತ್ತಿದ್ದ ದಾರ್ ಮೀಸೆ ಬೋಳಿಸಿ ಗಡ್ಡಧಾರಿಯಾಗಿ ಕಾಣಿಸಿಕೊಂಡರು. ಇದಕ್ಕೆ ಕಾರಣ ಅಮ್ಲ ಸಲಹೆ.
     ಇಸ್ಲಾಂ ಧರ್ಮದ ತತ್ವಾದರ್ಶಗಳನ್ನು ,ಸಂಪ್ರದಾಯವನ್ನು ಕಟ್ಟ್ಟುನಿಟ್ಟಾಗಿ ಪಾಲಿಸುವ ಅಮ್ಲ ಅವರು ಅಂಪೈರ್ ದಾರ್‌ಗೆ ಗಡ್ಡ ಬೋಳಿಸದೆ ಇಸ್ಲಾಂ ಸಂಪ್ರದಾಯವನ್ನು ಪಾಲಿಸುವಂತೆ ಸಲಹೆ ನೀಡಿದ್ದರು ಎಂಬ ವಿಚಾರವನ್ನು ದಾರ್ ಅವರು ಪಿಟಿವಿ ಸ್ಪೋರ್ಟ್ಸ್ ಚಾನಲ್‌ಗೆ ತಿಳಿಸಿದ್ದಾರೆ.
ಪಾಕಿಸ್ತಾನದ ಅನುಭವಿ ಕ್ರಿಕೆಟ್ ಅಂಪೈರ್ ಆಗಿರುವ ದಾರ್ 2009, 2010 ಮತ್ತು 2011ರಲ್ಲಿ ವರ್ಷದ ಐಸಿಸಿ ಅಂಪೈರ್ ಪ್ರಶಸ್ತಿಗೆ ಭಾಜನರಾಗಿದ್ದರು. ಹಾಶಿಮ್ ಅಮ್ಲ ಅವರು ಇತ್ತೀಚೆಗೆ ಮುಕ್ತಾಯಗೊಂಡ ಹತ್ತನೆ ಆವೃತ್ತಿಯ ಐಪಿಎಲ್ ಟ್ವೆಂಟಿ-20 ಟೂರ್ನಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಪರ 10 ಪಂದ್ಯಗಳಲ್ಲಿ ಎರಡು ಶತಕಗಳನ್ನು ಒಳಗೊಂಡ 420 ರನ್ ಗಳಿಸಿದ್ದರು.ಅವರ ತಂಡ 14 ಪಂದ್ಯಗಳಲ್ಲಿ 7ರಲ್ಲಿ ಜಯ ಗಳಿಸಿ 14 ಅಂಕ ಗಳಿಸಿ 5ನೆ ಸ್ಥಾನದೊಂದಿಗೆ ಈ ವರ್ಷದ ಅಭಿಯಾನ ಕೊನೆಗೊಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News