ಪಿಲಿಕುಲದ ವಿಶೇಷ ಅಭಿವೃದ್ಧಿಗೆ ಕಾರ್ಯಯೋಜನೆ: ಸಚಿವ ಎಂ.ಆರ್. ಸೀತಾರಾಂ
ಮಂಗಳೂರು, ಮೇ 29: ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಪ್ರವಾಸಿ ಕೇಂದ್ರಿತ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರವಾಸಿಗರನ್ನು ಇನ್ನಷ್ಟು ಸಂಖ್ಯೆಯಲ್ಲಿ ಆಕರ್ಷಿಸಲು ಪೂರಕವಾಗಿ ಸಮಗ್ರ ಅಭಿವೃದ್ಧಿಗೆ ಕಾರ್ಯಯೋಜನೆಯನ್ನು ರೂಪಿಸಲಾಗುವುದು ಎಂದು ರಾಜ್ಯ ಯೋಜನೆ, ವಿಜ್ಞಾನ, ತಂತ್ರಜ್ಞಾನ ಸಚಿವ ಎಂ. ಆರ್. ಸೀತಾರಾಂ ಹೇಳಿದ್ದಾರೆ.
ಸೋಮವಾರ ಪಿಲಿಕುಳದ ಡಾ. ಶಿವರಾಮ ಕಾರಂತ ನಿಸರ್ಗಧಾಮಕ್ಕೆ ಭೇಟಿ ನೀಡಿ ಅಲ್ಲಿನ ಗುತ್ತಿನ ಮನೆ, ಜಂಗಲ್ ರೆಸಾರ್ಟ್, ಮೃಗಾಲಯ, ಪ್ರಾದೇಶಿಕ ವಿಜ್ಞಾನ ಕೇಂದ್ರಕ್ಕೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜತೆ ಅವರು ಮಾತನಾಡಿದರು. ಈ ಸಂದರ್ಭ ಅವರು ಪಿಲಿಕುಳದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಅಂತಾಷ್ಟ್ರೀಯ ಮಟ್ಟದ ತ್ರಿಡಿ ತಾರಾಲಯದ ಕಾಮಗಾರಿಯನ್ನೂ ಪರಿಶೀಲಿಸಿದರು.
300 ಎಕರೆ ಪ್ರದೇಶದಲ್ಲಿರುವ ಪಿಲಿಕುಳ ನಿಸರ್ಗಧಾಮ ಪ್ರವಾಸಿ ಕೇಂದ್ರವಾಗಿ ರೂಪು ಪಡೆದಿದೆ. ಪ್ರವಾಸಿಗರ ಸಂಖ್ಯೆಯೂ ಇಲ್ಲಿ ವರ್ಷದಿಂದ ವರ್ಷಕ್ಕೆ ಗಣನೀಯ ಮಟ್ಟದಲ್ಲಿ ಎರಿಕೆಯಾಗುತ್ತಿದೆ. ಆದ್ದರಿಂದ ನಿಸರ್ಗಧಾಮವನ್ನು ಪ್ರವಾಸಿಗರಿಗೆ ಇನ್ನಷ್ಟು ಅನುಕೂಲವಾಗುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಬೇಕಾಗಿದೆ. ವಿಶಾಲವಾದ ನಿಸರ್ಗಧಾಮದೊಳಗೆ ಪ್ರವಾಸಿಗರಿಗೆ ನಡೆದಾಡಲು ತುಸು ತೊಂದರೆಯಾಗುತ್ತಿದೆ. ಅದಕ್ಕಾಗಿ ವಾಹನ ಸೌಲಭ್ಯವನ್ನು ಒದಗಿಸುವ ಅಗತ್ಯವಿದೆ. ಈ ಎಲ್ಲಾ ಕುರಿತಂತೆ ವಿಶೇಷ ಸಭೆಯನ್ನು ಕರೆದು ಕಾರ್ಯಯೋಜನೆ ಸಿದ್ಧಪಡಿಗೊಳಿಸಲಾಗುವುದು ಎಂದು ಅವರು ಹೇಳಿದರು.
ಈ ಸಂದರ್ಭ ಶಾಸಕ ಜೆ.ಆರ್. ಲೋಬೋ, ಜಿಲ್ಲಾಧಿಕಾರಿ ಡಾ. ಜಗಜದೀಶ್, ಕಾರ್ಯನಿರ್ವಾಹಕ ನಿರ್ದೇಶಕ ಪ್ರಸನ್ನ ವಿ., ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಕೆ. ವಿ. ರಾವ್, ವಿಜ್ಞಾನಿ ಡಾ. ಎಚ್. ಸೂರ್ಯ ಪ್ರಕಾಶ್ ಶೆಣೈ ಮೊದಲಾದವರು ಉಪಸ್ಥಿತರಿದ್ದರು.
ತ್ರಿಡಿ ತಾರಾಲಯ ವರ್ಷಾಂತ್ಯದೊಳಗೆ ಲೋಕಾರ್ಪಣೆ
ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ತ್ರಿಡಿ ತಾರಾಲಯದ ಕಾಮಗಾರಿ ಕುರಿತಂತೆ ಅಧಿಕಾರಿಗಳ ಜತೆ ಸಚಿವ ಎಂ.ಆ್. ಸೀತಾರಾಂ ಪರಿಶೀಲನೆ ನಡೆಸಿದರು.
ಅಕ್ಟೋಬರ್- ನವೆಂಬರ್‌ನೊಳಗೆ ತ್ರಿಡಿ ತಾರಾಲಯ ಉದ್ಘಾಟನೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವಂತೆ ಅವರು ಈ ಸಂದರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತ್ರಿಡಿ ತಾರಾಯಲದ ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಉಪಕರಣಗಳನ್ನು ಅಳವಡಿಸುವ ಕಾರ್ಯ ನಡೆಯಬೇಕಿದೆ. ಉಪಕರಣಗಳು ಅಮೆರಿಕದ ಇವಾನ್ಸ್ ಆ್ಯಂಡ್ ಸುದರ್‌ಲ್ಯಾಂಡ್ ಕಂಪ್ಯೂಟರ್ ಸಂಸ್ಥೆಯಲ್ಲಿ ಸಿದ್ಧಗೊಳ್ಳುತ್ತಿದ್ದು, ಸಂಸ್ಥೆಯ ಪ್ರತಿನಿಧಿ ಈ ಸಂದರ್ಭ ಉಪಸ್ಥಿತರಿದ್ದು ಸಚಿವರಿಗೆ ಮಾಹಿತಿ ನೀಡಿದರು.