ಎಚ್-1ಬಿ ವೀಸಾ ನಿಯಮದಿಂದ ಐಟಿ ಉದ್ದಿಮೆಗಳಿಗೆ ತೀವ್ರ ಹಾನಿ
ಹೊಸದಿಲ್ಲಿ, ಮೇ 29: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಜಾರಿಗೆ ತಂದಿರುವ ವೀಸಾ ನಿಯಮದಿಂದ ಉದ್ದಿಮೆಗಳಿಗೆ ತೀವ್ರ ಹಾನಿಯಾಗಲಿದೆ ಎಂದು ದೇಶದ ಬೃಹತ್ ಟೆಕ್ನಾಲಜಿ ಸೇವಾ ಸಂಸ್ಥೆಗಳಲ್ಲಿ ಒಂದಾಗಿರುವ ಟೆಕ್ ಮಹೀಂದ್ರ ಸಂಸ್ಥೆಯ ಉಪಾಧ್ಯಕ್ಷ ವಿನೀತ್ ನಯ್ಯರ್ ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ತಮ್ಮ ಸಂಸ್ಥೆಯ ಲಾಭಗಳಿಕೆಯ ಪ್ರಮಾಣದಲ್ಲಿ ಇಳಿಮುಖವಾಗಿದ್ದು ಸಂಸ್ಥೆಯ ಬಂಡವಾಳದ ಪ್ರಮಾಣ ಕೂಡಾ ಕಡಿಮೆಯಾಗಿದೆ. ಸಂಸ್ಥೆಯ ಸರಾಸರಿ ಲಾಭ 7.8 ಬಿಲಿಯನ್ ರೂ. ಆಗಿದ್ದು ನಾಲ್ಕನೇ ತ್ರೈಮಾಸಿಕದ ಅವಧಿಯಲ್ಲಿ ಸಂಸ್ಥೆ 5.9 ಬಿಲಿಯನ್ ರೂ. ನಿವ್ವಳ ಲಾಭ ದಾಖಲಿಸಿದೆ. ಇದು ಶೇ.17ರಷ್ಟು ಕಡಿಮೆಯಾಗಿದೆ. ಟ್ರಂಪ್ ಅವರ ‘ಅಮೆರಿಕ ಮೊದಲು’ ಕಾರ್ಯಸೂಚಿ ಮತ್ತು ವಲಸೆ ಬರುವುದನ್ನು ತಡೆಯುವ ಎಚ್-1ಬಿ ವೀಸಾ ನಿಯಮವು ಐಟಿ ಕ್ಷೇತ್ರಕ್ಕೆ ಘಾಸಿಯುಂಟು ಮಾಡಲಿದೆ ಎಂದವರು ತಿಳಿಸಿದ್ದಾರೆ.
ಟೆಕ್ ಮಹೀಂದ್ರ ಸಂಸ್ಥೆಯ ವಾರ್ಷಿಕ ಆರ್ಥಿಕ ಫಲಿತಾಂಶ ಪ್ರಕಟವಾದ ಬಳಿಕ ಹಲವು ವಿಶ್ಲೇಷಕರು ಸಂಸ್ಥೆಯ ಶ್ರೇಯಾಂಕವನ್ನು ಕಡಿಮೆಗೊಳಿಸಿದ್ದಾರೆ. ಹಲವರು ತಮ್ಮಲ್ಲಿದ್ದ ಶೇರುಗಳನ್ನು ಕಡಿಮೆ ಬೆಲೆಗೆ ವಿಕ್ರಯ ಮಾಡಿದ್ದಾರೆ ಎಂದವರು ತಿಳಿಸಿದ್ದಾರೆ.
ಕಾಗ್ನಿಝಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ಮುಂತಾದ ತಂತ್ರಜ್ಞಾನ ಸೇವಾ ಸಂಸ್ಥೆಗಳು ಭಾರತದಲ್ಲಿರುವ ಶಾಖೆಗಳಲ್ಲಿ ಸಿಬ್ಬಂದಿಗಳ ಸಂಖ್ಯೆಯಲ್ಲಿ ಕಡಿತ ಮಾಡುತ್ತಿವೆ. ಟ್ರಂಪ್ ತಂತ್ರಜ್ಞಾನ ಸೇವಾ ಸಂಸ್ಥೆಗಳಲ್ಲಿ ಅನವಶ್ಯಕವಾಗಿ ಸಮಸ್ಯೆಯನ್ನು ಉತ್ತೇಜಿಸಿದ್ದಾರೆ ಮತ್ತು ಕೆಲಸ ಕಡಿತಕ್ಕೆ ಕಾರಣವಾಗಿದ್ದಾರೆ ಎಂದು ಉದ್ಯೋಗಿಗಳು ದೂರುತ್ತಿದ್ದಾರೆ. ಇದುವರೆಗೆ ಐಟಿ ಕ್ಷೇತ್ರದಲ್ಲಿ ಕಾರ್ಮಿಕರ ಯೂನಿಯನ್ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ. ಯಾಕೆಂದರೆ ಈ ಕ್ಷೇತ್ರದಲ್ಲಿ ಸಿಬ್ಬಂದಿಗಳಿಗೆ ಸಾಕಷ್ಟು ಸಂಬಳ ದೊರೆಯುತ್ತಿತ್ತು . ಆದರೆ ಈಗ ಐಟಿ ಕ್ಷೇತ್ರದಲ್ಲೂ ಕಾರ್ಮಿಕರ ಯೂನಿಯನ್ ಸ್ಥಾಪಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.
ಇದೀಗ ಯುರೋಪ್ ಮತ್ತು ಅಮೆರಿಕದಲ್ಲಿ ರಾಜಕೀಯ ಮತ್ತು ಆರ್ಥಿಕ ಕ್ಷೇತ್ರದಲ್ಲಿ ಸಾಕಷ್ಟು ಗೊಂದಲದ ಸ್ಥಿತಿಯಿದೆ. ಅದೇನಿದ್ದರೂ ತಂತ್ರಜ್ಞಾನ ಸೇವೆಗಿರುವ ಬೇಡಿಕೆ ನಿರಂತರವಾಗಿ ಮುಂದುವರಿಯಲಿದೆ. ಇದೀಗ ಇರುವ ಅನಿಶ್ಚಿತತೆಯ ಸ್ಥಿತಿ ದೂರವಾಗಿ , ಗುರಿಯೆಡೆಗೆ ಸಾಗುವ ದಾರಿಯೊಂದು ಗೋಚರವಾಗಲಿದೆ ಎಂಬ ಆಶಾವಾದ ಇದೆ ಎಂದು ವಿನೀತ್ ನಯ್ಯರ್ ಹೇಳಿದ್ದಾರೆ.