×
Ad

​ಹೊರಗುತ್ತಿಗೆ ಆಧಾರಿತ ನೌಕರರಿಗೆ ಸೌಲಭ್ಯದಲ್ಲಿ ವಂಚನೆ: ಕೋಟೆಯಾರ್

Update: 2017-05-29 20:05 IST

ಉಡುಪಿ, ಮೇ 29: ವಿವಿಧ ಇಲಾಖೆಗಳಲ್ಲಿ ದುಡಿಯುತ್ತಿರುವ ಹೊರ ಗುತ್ತಿಗೆ ಆಧಾರಿತ ನೌಕರರಿಗೆ ಗುತ್ತಿಗೆದಾರರು ಇಎಸ್‌ಐ, ಭವಿಷ್ಯನಿಧಿ ಹಾಗೂ ಕನಿಷ್ಠ ವೇತನದಲ್ಲಿ ವಂಚನೆ ಮಾಡುತ್ತಿದ್ದಾರೆ. ಈ ಬಗ್ಗೆ 40 ಸರಕಾರಿ ಇಲಾಖೆ ಯಿಂದ ದೂರುಗಳು ಬಂದಿವೆ ಎಂದು ಮಾಸ್ ಇಂಡಿಯಾದ ಅಧ್ಯಕ್ಷ ಜಿ.ಎ. ಕೋಟೆಯಾರ್ ಆರೋಪಿಸಿದ್ದಾರೆ.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ನೀಡುವ ವೇತನದಲ್ಲಿ ಶೇ.60ರಷ್ಟು ಮಾತ್ರ ನೌಕರರಿಗೆ ನೀಡಿ, ಉಳಿದ ಹಣ ವನ್ನು ಗುತ್ತಿಗೆದಾರರೇ ನುಂಗುತ್ತಿದ್ದಾರೆ. ನೌಕರರ ವೇತನದಿಂದ ಇಎಸ್‌ಐ ಹಾಗೂ ಪಿಎಫ್ ವಂತಿಕೆ ಖಡಿತಗೊಳಿಸಿದರೂ ಅದನ್ನು ಸರಕಾರದ ಖಜಾನೆಗೆ ಪಾವತಿಸುತ್ತಿಲ್ಲ. ಈ ಬಗ್ಗೆ ಇಎಸ್‌ಐ ವಿಜಿಲೆಸ್‌ಗೆ ದೂರು ನೀಡಿದ್ದು, ಅದರಂತೆ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ನೌಕರರು ತಮ್ಮ ಹಕ್ಕು ಬಾಧ್ಯತೆಗಳನ್ನು ಮೊದಲು ತಿಳಿದುಕೊಳ್ಳಬೇಕು. ನೌಕರ ರಿಗೆ ತಮ್ಮ ಸೌಲಭ್ಯದ ಬಗ್ಗೆ ಅರಿವೇ ಇಲ್ಲ. ಇದರಿಂದಾಗಿ ನೌಕರರು ಮೋಸ ಹೋಗುತ್ತಿದ್ದಾರೆ. ಇದರ ಬಗ್ಗೆ ಮಾಸ್ ಇಂಡಿಯಾದಿಂದ ರಾಷ್ಟ್ರ ವ್ಯಾಪಿ ಆಂದೋಲನ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಎಂ.ಮಹೇಶ್ ಕುಮಾರ್, ಸಲಹೆಗಾರ ನರಸಿಂಹಮೂರ್ತಿ, ಗೀತಾ ಸಿ.ಪೂಜಾರಿ, ಉಡುಪಿ ಸರ್ವೆ ಇಲಾಖೆಯ ಅಧಿಕಾರಿ ನಾಗೇಶ್ ಉಪಸ್ಥಿತರಿದ್ದರು.

ಮೇ 31ರಂದು ಅರಿವು ಕಾರ್ಯಾಗಾರ
ಮಾಸ್ ಇಂಡಿಯಾದ ವತಿಯಿಂದ ಸರಕಾರಿ ಇಲಾಖೆಗಳಲ್ಲಿ ಹೊರ ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರಿಗೆ ಇಎಸ್‌ಐ ಹಾಗೂ ಭವಿಷ್ಯ ನಿಧಿ ಸೌಲಭ್ಯದ ಕುರಿತ ಅರಿವು ಕಾರ್ಯಾಗಾರವನ್ನು ಮೇ 31ರಂದು ಸಂಜೆ 4ಗಂಟೆಗೆ ಮಣಿಪಾಲ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಉದ್ಘಾಟಿಸಲಿರುವರು ಎಂದು ಜಿ.ಎ.ಕೋಟೆ ಯಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News