ಪತಂಜಲಿ ಉತ್ಪನ್ನ ಗುಣಮಟ್ಟದ ಪರೀಕ್ಷೆಯಲ್ಲಿ ವಿಫಲ

Update: 2017-05-29 15:08 GMT

ಹರಿದ್ವಾರ, ಮೇ 29: ಬಾಬಾ ರಾಮ್‌ದೇವ್ ಅವರ ಪತಂಜಲಿ ಉತ್ಪನ್ನಗಳು ಸೇರಿದಂತೆ ಸುಮಾರು ಶೇ.40ರಷ್ಟು ಆಯುರ್ವೇದ ಉತ್ಪನ್ನಗಳು ಕೆಳದರ್ಜೆಯ ಗುಣಮಟ್ಟ ಹೊಂದಿರುವುದಾಗಿ ಹರಿದ್ವಾರದ ಆಯುರ್ವೇದ ಮತ್ತು ಯುನಾನಿ ಕಚೇರಿ ತಿಳಿಸಿದೆ.

   2013ರಿಂದ 2016ರವರೆಗಿನ ಅವಧಿಯಲ್ಲಿ 82 ಮಾದರಿಗಳನ್ನು ಪರೀಕ್ಷಿಸಲಾಗಿದ್ದು ಇದರಲ್ಲಿ ಪತಂಜಲಿಯ ‘ದಿವ್ಯ ಆಮ್ಲ ಜ್ಯೂಸ್, ಶಿವ್‌ಲಿಂಗಿ ಬೀಜ’ ಸೇರಿದಂತೆ 32 ಉತ್ಪನ್ನಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿವೆ ಎಂದು ಮಾಹಿತಿ ಹಕ್ಕು ಕಾಯ್ದೆಯಡಿ ಪಡೆಯಲಾದ ಮಾಹಿತಿಯಿಂದ ತಿಳಿದ ಬಂದಿದೆ.

        ಪತಂಜಲಿ ಸಂಸ್ಥೆಯ ನೆಲ್ಲಿಕಾಯಿ ಜ್ಯೂಸ್ ನಿರ್ಧಿಷ್ಟ ಗುಣಮಟ್ಟವನ್ನು ಹೊಂದಿಲ್ಲ ಎಂದು ಕಳೆದ ತಿಂಗಳು ಪ.ಬಂಗಾಲದ ಸಾರ್ವಜನಿಕ ಸ್ವಾಸ್ಥ ಪ್ರಯೋಗಾಲಯ ನಡೆಸಿದ ಪರೀಕ್ಷೆಯಿಂದ ತಿಳಿದು ಬಂದ ಬಳಿಕ ಇವುಗಳ ಮಾರಾಟಕ್ಕೆ ಸಶಸ್ತ್ರ ದಳಗಳ ಕ್ಯಾಂಟೀನ್ ಸ್ಟೋರ್ಸ್ ಡಿಪಾರ್ಟ್‌ಮೆಂಟ್ ನಿಷೇಧ ಹೇರಿತ್ತು. ಪತಂಜಲಿ ಉತ್ಪನ್ನಗಳಲ್ಲಿ ನೀರಿನಲ್ಲಿ ಕರಗಬಲ್ಲ ಹುಳಿಯ ಅಂಶ ನಿಗದಿತ ಅಂಶಕ್ಕಿಂತ ಕಡಿಮೆ ಇರುವುದು ಪತ್ತೆಯಾಗಿದೆ. ಈ ಅಂಶ ಕಡಿಮೆಯಾಗಿದ್ದರೆ ಅಸಿಡಿಟಿ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅಲ್ಲದೆ ‘ಶಿವಲಿಂಗಿ ಬೀಜ’ದಲ್ಲಿ ಶೇ.31.68ರಷ್ಟು ವಿದೇಶಿ ಪದಾರ್ಥ ಇರುವುದು ದೃಢಪಟ್ಟಿದೆ.

ಆದರೆ ಪ್ರಯೋಗಾಲಯದ ವರದಿಯನ್ನು ರಾಮ್‌ದೇವ್ ಸಹವರ್ತಿ ಮತ್ತು ಪತಂಜಲಿ ಸಂಸ್ಥೆಯ ಆಡಳಿತ ನಿರ್ದೇಶಕ ಆಚಾರ್ಯ ಬಾಲಕೃಷ್ಣ ನಿರಾಕರಿಸಿದ್ದಾರೆ. ಶಿವಲಿಂಗಿ ಬೀಜ ಒಂದು ಪ್ರಾಕೃತಿಕ ಬೀಜ. ಅದನ್ನು ಕಲಬೆರೆಕೆ ಮಾಡಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿರುವ ಅವರು, ಪತಂಜಲಿ ಸಂಸ್ಥೆಯ ಹೆಸರು ಕೆಡಿಸಲು ಮಾಡಿರುವ ಪ್ರಯತ್ನ ಇದಾಗಿದೆ ಎಂದಿದ್ದಾರೆ.

ಪತಂಜಲಿ ಉತ್ಪನ್ನಗಳಲ್ಲದೆ, ಅವಿಪಟ್ಟಿಕರ ಚೂರ್ಣ, ತಲಿಸದ್ಯ ಚೂರ್ಣ, ಪುಷ್ಯಾನುಗ ಚೂರ್ಣ, ಲವಣ ಭಾಸ್ಕರ ಚೂರ್ಣ, ಯೋಗರಾಜ ಗುಗ್ಗುಲು, ಲಕ್ಷ ಗುಗ್ಗುಲು ಮುಂತಾದ ಆಯುರ್ವೇದ ಉತ್ಪನ್ನಗಳೂ ಕಡಿಮೆ ಗುಣಮಟ್ಟ ಹೊಂದಿರುವುದಾಗಿ ವರದಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News