ಗೋಮಾಂಸ ಹೊಂದಿದ ಆರೋಪ: ವ್ಯಾಪಾರಿಗಳ ಮೇಲೆ ಗೋರಕ್ಷಕರ ಹಲ್ಲೆ

Update: 2017-05-29 16:14 GMT

 ಮುಂಬೈ, ಮೇ 29: ಜಾನುವಾರು ಜಾತ್ರೆಗಳಲ್ಲಿ ಕಸಾಯಿಖಾನೆಗಳಿಗೆ ಜಾನುವಾರುಗಳನ್ನು ಮಾರಾಟ ಮಾಡುವುದನ್ನು ನಿಷೇಧಿಸಿ ಕೇಂದ್ರ ಸರಕಾರ ಹೊರಡಿಸಿರುವ ಅಧಿಸೂಚನೆ ವಿರುದ್ಧ ದೇಶಾದ್ಯಂತ ಪರ-ವಿರೋಧ ಚರ್ಚೆಗಳು ನಡೆಯುತ್ತಿರುವಂತೆಯೇ ಮಹಾರಾಷ್ಟ್ರದಲ್ಲಿ ಗೋರಕ್ಷಕರು ಇಬ್ಬರು ವ್ಯಾಪಾರಿಗಳನ್ನು ಥಳಿಸಿದ ಘಟನೆ ವರದಿಯಾಗಿದೆ.

 ಮಹಾರಾಷ್ಟ್ರದ ವಾಶಿಂ ಜಿಲ್ಲೆಯ ಮಲೇಗಾಂವ್‌ನಲ್ಲಿ ಈ ಘಟನೆ ನಡೆದಿದೆ. ಘಟನೆ ಕುರಿತ ವೀಡಿಯೊದಲ್ಲಿ ಈ ವ್ಯಾಪಾರಿಗಳು, ತಮ್ಮಲ್ಲಿರುವ ಮಾಂಸವು ಎಮ್ಮೆಯದ್ದು. ಹಸುವಿನದ್ದಲ್ಲ ಎಂದು ಹೇಳಿದರು. ಆದಾಗ್ಯೂ, ಗೋರಕ್ಷಕರ ಗುಂಪು ಅವರನ್ನು ಥಳಿಸಿ, ಜೈ ಶ್ರೀರಾಮ್ ಎಂದು ಹೇಳುವಂತೆ ಒತ್ತಡ ಹಾಕಿದರು.

 ವ್ಯಾಪಾರಿಗಳನ್ನು ಅವರ ವಸ್ತುಗಳ ಸಹಿತ ಪೊಲೀಸ್ ಠಾಣೆಗೆ ಒಯ್ಯಲಾಗಿದೆ. ಈ ಸಂಬಂಧ ಒಂಬತ್ತು ಮಂದಿಯನ್ನು ಬಂಧಿಸಲಾಗಿದೆ. ಈ ಪೈಕಿ ಇಬ್ಬರ ಮೇಲೆ ಹಲ್ಲೆ ಮಾಡಿದ ಏಳು ಮಂದಿಯ ವಿರುದ್ಧ ಐಪಿಸಿ ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಲಾಗಿದೆ. ಇಬ್ಬರು ಯುವಕರ ವಿರುದ್ಧ ಐಪಿಸಿ 295 ಱಎೞಅನ್ವಯ ಕೇಸು ದಾಖಲಿಸಲಾಗಿದೆ. ಮಾಂಸದ ಮಾದರಿಯನ್ನು ನಾಗ್ಪುರ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿದೆ ಎಂದು ವಾಶಿಂ ಎಸ್ಪಿ ಮೋಕ್ಷಂದ್ ಪಾಟೀಲ್ ಹೇಳಿದ್ದಾರೆ.

ಕೇಂದ್ರದ ಹೊಸ ಅಧಿಸೂಚನೆಯನ್ನು ವಿರೋಧಿಸಿ ಕಣ್ಣೂರಿನಲ್ಲಿ ಯುವ ಕಾಂಗ್ರೆಸಿಗರು ಕರುವನ್ನು ಸಾರ್ವಜನಿಕವಾಗಿಯೇ ಕಡಿದು ಬೀಫ್ ಉತ್ಸವ ಹಮ್ಮಿಕೊಂಡಿದ್ದರು. ಕೇಂದ್ರದ ನಿರ್ಧಾರವನ್ನು ಖಂಡಿಸಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ಇದೀಗ ಹೊಸ ನಿಯಮಾವಳಿಯ ಪ್ರಕಾರ ದೇಶದಲ್ಲಿ, ಕೃಷಿ ಭೂಮಿ ಹೊಂದಿರುವವರು ಮಾತ್ರ ಜಾನುವಾರು ವ್ಯಾಪಾರ ಮಾಡಲು ಅವಕಾಶವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News