ಪನಾಮಾ ಹಗರಣ ತನಿಖಾ ತಂಡದಿಂದ ನವಾಝ್ ಶರೀಫ್ ಪುತ್ರನ ವಿಚಾರಣೆ

Update: 2017-05-29 16:04 GMT

ಇಸ್ಲಾಮಾಬಾದ್,ಮೇ 29: ಪನಾಮಾ ದಾಖಲೆಪತ್ರ ಹಗರಣಕ್ಕೆ ಸಂಬಂಧಿಸಿ ಪಾಕಿಸ್ತಾನದ ಪ್ರಧಾನಿ ನವಾಝ್ ಶರೀಫ್ ಅವರ ಪುತ್ರ ಹುಸೈನ್ ನವಾಝ್ ಅವರನ್ನು ರವಿವಾರ ಪಾಕ್ ಸುಪ್ರೀಂಕೋರ್ಟ್‌ನಿಂದ ನೇಮಿಸಲ್ಪಟ್ಟ ಜಂಟಿ ತನಿಖಾ ತಂಡವು ಪ್ರಶ್ನಿಸಿದೆ. ವಿದೇಶದಲ್ಲಿ ಶರೀಫ್ ಕುಟುಂಬದ ಉದ್ಯಮ ವ್ಯವಹಾರಗಳಿಗೆ ಸಂಬಂಧಿಸಿ ತನಿಖಾ ತಂಡವು ಹುಸೈನ್ ಅವರನ್ನು ವಿಚಾರಣೆಗೊಳಪಡಿಸಿರುವುದಾಗಿ ಮೂಲಗಳು ತಿಳಿಸಿವೆ.

ವಿಚಾರಣೆಯ ಸಂದರ್ಭದಲ್ಲಿ ಹುಸೈನ್ ಜೊತೆ ಅವರ ವಕೀಲರು ಹಾಜರಿದ್ದರು. ಆದರೆ ಜಂಟಿ ತನಿಖಾ ತಂಡವು ಅವರ ಉಪಸ್ಥಿತಿಯನ್ನು ವಿರೋಧಿಸಿತ್ತು. ಸುಪ್ರೀಂಕೋರ್ಟ್‌ನಿಂದ ಅನುಮತಿ ಪಡೆದ ಬಳಿಕವಷ್ಟೇ ವಕೀಲರ ನೆರವನ್ನು ಪಡೆಯಬಹುದೆಂದು ತನಿಖಾ ತಂಡವು ಶರೀಫ್ ಪುತ್ರನಿಗೆ ತಿಳಿಸಿದ್ದಾಗಿ ಅಧಿಕೃತ ಮೂಲಗಳು ತಿಳಿಸಿವೆ.

 ಆನಂತರ ಹುಸೈನ್ ಅವರು ಏಕಾಂಗಿಯಾಗಿಯೇ ವಿಚಾರಣೆಯನ್ನು ಎದುರಿಸಿದರು. ತನಿಖಾ ತಂಡವು ಅವರನ್ನು ಸುಮಾರು ಎರಡು ತಾಸುಗಳ ಕಾಲ ವಿಚಾರಣೆಗೊಳಪಡಿಸಿತೆನ್ನಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ತನಿಖಾ ತಂಡವು ಶನಿವಾರ ಅವರಿಗೆ ಸಮನ್ಸ್ ನೀಡಿತ್ತು.

 ಈ ಪ್ರಕರಣದಲ್ಲಿ ಶರೀಫ್ ಅವರು 1990ರ ದಶಕದಲ್ಲಿ ಲಂಡನ್‌ನಲ್ಲಿ ಆಸ್ತಿ ಖರೀದಿಸಲು ತನ್ನಲ್ಲಿದ್ದ ಕಪ್ಪುಹಣನನ್ನು ಬಿಳುಪುಗೊಳಿಸಿದ ಆರೋಪವನ್ನು ಎದುರಿಸುತ್ತಿದ್ದಾರೆ. ವಿದೇಶದಲ್ಲಿರುವ ಶರೀಫ್ ಅವರ ಕುಟುಂಬದ ಒಡೆತನದ ಕಂಪೆನಿಗಳ ಮೂಲಕ ಈ ಆಸ್ತಿಯನ್ನು ಖರೀದಿಸಲಾಗಿತ್ತೆಂಬುದನ್ನು ಸೋರಿಕೆಯಾದ ಪನಾಮಾ ಬ್ಯಾಂಕ್ ದಾಖಲೆ ಪತ್ರಗಳು ಬಹಿರಂಗಪಡಿಸಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News