×
Ad

ತರಕಾರಿಗೆ ವಿಷಕಾರಿ ರಾಸಾಯನಿಕ ಬಳಕೆ: ಡಾ.ಚೈತನ್ಯ

Update: 2017-05-29 21:37 IST

ಉಡುಪಿ, ಮೇ 29: ರೈತರು ತರಕಾರಿ ಬೆಳೆಗೆ ಕೆಂಪು ಚಿಹ್ನೆ ಇರುವ ಅತ್ಯಂತ ವಿಷಕಾರಿ ಮೊನೊಕ್ರೋಟೊಪಾಸ್ ರಾಸಾಯನಿಕ ವನ್ನು ಬಳಸುತ್ತಿದ್ದಾರೆ. ಇಂದು ಕೃಷಿಕರಿಗೆ ಆರೋಗ್ಯಕ್ಕಿಂತ ಆದಾಯ ಮುಖ್ಯವಾಗಿದೆ. ಆದುದರಿಂದ ವಿಷಯುಕ್ತ ತರಕಾರಿ ತಿನ್ನುವುದಕ್ಕೆ ಬದಲು ಸ್ಥಳೀಯವಾಗಿ ಬೆಳೆಯುವ ತರಕಾರಿಗಳನ್ನು ನಾವೇ ಮನೆಯಲ್ಲಿ ಬೆಳೆಸುವ ವಾತಾವರಣ ಸೃಷ್ಠಿ ಮಾಡಬೇಕೆಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಎಚ್.ಎಸ್.ಚೈತನ್ಯ ಹೇಳಿದ್ದಾರೆ.

ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ವತಿಯಿಂದ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಸೋಮವಾರ ಆಯೋಜಿಸಲಾದ ಡಾ.ಟಿ. ಎಂ.ಎ.ಪೈ ಮತ್ತು ಟಿ.ಎ.ಪೈ ಅವರ ಸ್ಮತಿ ದಿನಾಚರಣೆಯಲ್ಲಿ ಅವರು ತರಕಾರಿ ಬೆಳೆಸುವ ಕುರಿತು ತಾಂತ್ರಿ ಮಾಹಿತಿ ನೀಡಿದರು.

ನಾವಿಂದು ತರಕಾರಿಯ ಗುಣಮಟ್ಟವನ್ನು ನೋಡದೆಯೇ ತಿನ್ನುತ್ತಿದ್ದೇವೆ. ತರಕಾರಿಗೆ ನೀಲಿ ಅಥವಾ ಹಸಿರು ಚಿಹ್ನೆ ಇರುವ ರಾಸಾಯನಿಕವನ್ನು ಮಾತ್ರ ಬಳಸಬೇಕೆ ಹೊರತು ಕೆಂಪು ಚಿಹ್ನೆಯ ರಾಸಾಯನಿಕವನ್ನು ಬಳಸಲೇಬಾರದು. ಆದರೆ ಗೋಬಿ ಮಂಚೂರಿಗೆ ಬಳಸುವ ಹೂಕೋಸನ್ನು ಹುಳಗಳಿಂದ ರಕ್ಷಣೆ ಮಾಡಲು ಇದೇ ಅಪಾಯಕಾರಿ ರಾಸಾಯನಿಕದಿಂದಲೇ ಅದ್ದಿ ಸಾಗಾಟ ಮಾಡಲಾಗುತ್ತಿದೆ ಎಂದರು.

ಬೆಂಗಳೂರಿನಂತಹ ನಗರಗಳಲ್ಲಿ ಸಾವಯವ ತರಕಾರಿ ಎಂಬುದಾಗಿ ಮಾರಾಟ ಮಾಡಿ ಜನರನ್ನು ಮೋಸ ಮಾಡಲಾಗುತ್ತಿದೆ. ಆದುದರಿಂದ ನಾವೇ ತರಕಾರಿಗಳನ್ನು ಬೆಳೆಸಿ ಬಳಸುವುದು ಉತ್ತಮ ಎಂದ ಅವರು, ಡಾಕ್ಟರ್, ಇಂಜಿ ನಿಯರಿಂಗ್ ವ್ಯಾಮೋಹದಿಂದಾಗಿ ಕೃಷಿ ಪದವಿ ಪಡೆಯುತ್ತಿರುವವ ಸಂಖ್ಯೆ ವಿರಳವಾಗುತ್ತಿದೆ. ಅದರಲ್ಲೂ ಕರಾವಳಿಯಲ್ಲಿ ಕೃಷಿ ಪದವಿ ಕಲಿಯಲು ಯಾರು ಸಹ ಮುಂದೆ ಬರುತ್ತಿಲ್ಲ ಎಂದವರು ತಿಳಿಸಿದರು.

ಮಣಿಪಾಲ ವಿವಿಯ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್ ಸಂಸ್ಮರಣೆ ಮಾಡಿ, ಮೆಡಿಕಲ್ ಡಾಕ್ಟರ್, ಬ್ಯಾಂಕರ್ ಹಾಗೂ ಶಿಕ್ಷಣ ತಜ್ಞ ರಾಗಿದ್ದ ಡಾ.ಟಿ.ಎಂ.ಎ.ಪೈ ತ್ರೀ ಇನ್ ಒನ್ ವ್ಯಕ್ತಿ. ಅನಾರೋಗ್ಯ, ಅನಕ್ಷರತೆ, ಬಡತನ ದೇಶದ ಪ್ರಮುಖ ಸಮಸ್ಯೆಯಾಗಿದ್ದು, ಶಿಕ್ಷಣ ಮತ್ತು ಆರೋಗ್ಯ ನೀಡಿದರೆ ಬಡತನ ತಾನಾಗಿಯೇ ನಿವಾರಣೆಯಾಗುತ್ತದೆ ಎಂದು ಟಿ.ಎಂ.ಎ.ಪೈ ನಂಬಿದ್ದರು. ಅದಕ್ಕಾಗಿ ಅವರು ಮೆಡಿಕಲ್ ಕಾಲೇಜು ಹಾಗೂ ಶಿಕ್ಷಣ ಸಂಸ್ಥೆ ಗಳನ್ನು ಆರಂಭಿಸಿದರು ಎಂದರು.

 ಟಿ.ಎ.ಪೈ ಅವರು ಬಹುಪ್ರತಿಭೆ ಇರುವ ವ್ಯಕ್ತಿ. ಧೀರೂಬಾಯಿ ಅಂಬಾನಿಗೆ ಬ್ಯಾಂಕ್‌ನಿಂದ ಸಾಲ ನೀಡುವ ಮೂಲಕ ಅವರ ಬೆಳವಣಿಗೆಗೆ ಕಾರಣರಾದರು. ಇಂದಿಗೂ ಅಂಬಾನಿ ಕಚೇರಿಯಲ್ಲಿ ಟಿ.ಎ.ಪೈ ಅವರ ಭಾವಚಿತ್ರ ಇದೆ. ಉತ್ತಮ ವಾಗ್ಮಿಯಾಗಿದ್ದ ಇವರು ಜಿಲ್ಲೆಯಲ್ಲಿ ಕ್ಷೀರಕ್ರಾಂತಿಗೆ ಬುನಾದಿ ಹಾಕಿದರು. ಹೀಗೆ ಇವರಿಬ್ಬರು ಸಮಾಜಕ್ಕೆ ನೀಡಿದ್ದ ಮಹತ್ತರ ಕೊಡುಗೆಯಿಂದಾಗಿ ಇಂದು ದೇಶ ಅವರನ್ನು ಗುರುತಿಸುವಂತಾಗಿದೆ ಎಂದು ಅವರು ತಿಳಿಸಿದರು.

ತರಕಾರಿ ಬೀಜಗಳ ಸಾಂಕೇತಿಕ ಬಿಡುಗಡೆಯನ್ನು ಸಿಂಡಿಕೇಟ್ ಬ್ಯಾಂಕಿನ ಮಹಾಪ್ರಬಂಧಕ ಸತೀಶ್ ಕಾಮತ್ ನೆರವೇರಿಸಿದರು. ಅಕಾಡೆಮಿಯ ಆಡಳಿತಾಧಿಕಾರಿ ಡಾ.ಎಚ್.ಶಾಂತರಾಮ್, ಕಾಲೇಜಿನ ಪ್ರಾಂಶುಪಾಲೆ ಪ್ರೊ. ಕುಸುಮಾ ಕಾಮತ್, ಸಿಂಡಿಕೇಟ್ ಬ್ಯಾಂಕ್ ಪ್ರಾದೇಶಿಕ ಪ್ರಬಂಧಕ ಎಸ್.ಎಸ್ ಹೆಗ್ಡೆ ಉಪಸ್ಥಿತರಿದ್ದರು.

ಭಾರತೀಯ ವಿಕಾಸ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಕೆ.ಎಂ.ಉಡುಪ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಹೇರಂಜೆ ಕೃಷ್ಣ ಭಟ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News