×
Ad

ಅರುಣಾಚಲ-ಅಸ್ಸಾಂ ಸೇತುವೆಗೆ ಚೀನಾ ಕಿರಿಕ್

Update: 2017-05-29 22:07 IST

ಹೊಸದಿಲ್ಲಿ,ಮೇ 29: ಅರುಣಾಚಲ ವಿಷಯದಲ್ಲಿ ಮತ್ತೆ ತಗಾದೆ ಎತ್ತಿರುವ ಚೀನಾವು, ಆ ರಾಜ್ಯದಲ್ಲಿ ಮೂಲಸೌಕರ್ಯಗಳ ನಿರ್ಮಾಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಎಚ್ಚರಿಕೆ ವಹಿಸುವಂತೆ ಹಾಗೂ ಸಂಯಮದಿಂದ ನಡೆದುಕೊಳ್ಳಬೇಕೆಂದು ಭಾರತಕ್ಕೆ ತಿಳಿಸಿದೆ. ನೆರೆಯ ರಾಜ್ಯವಾದ ಅಸ್ಸಾಂ ಜೊತೆ ಅರುಣಾಚಲಕ್ಕೆ ಸಂಪರ್ಕ ಕಲ್ಪಿಸುವ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಅನಾವರಣಗೊಳಿಸಿದ ಕೆಲವೇ ದಿನಗಳ ಬಳಿಕ ಚೀನಾ ಈ ಹೇಳಿಕೆ ನೀಡಿದೆ.

  ‘ ‘ ಚೀನಾದ ಜೊತೆಗಿನ ಗಡಿವಿವಾದವು ಅಂತಿಮವಾಗಿ ಇತ್ಯರ್ಥಗೊಳ್ಳುವುದಕ್ಕೆ ಮೊದಲು ಭಾರತವು ಎಚ್ಚರಿಕೆಯ ಹಾಗೂ ಸಂಯಮದ ವರ್ತನೆಯನ್ನು ಅನುಸರಿಸುವುದೆಂದು ನಾವು ಆಶಿಸುತ್ತೇವೆ ಎಂದು ಚೀನಿ ವಿದೇಶಾಂಗ ಇಲಾಖೆಯು ಹೇಳಿಕೆಯೊಂದರಲ್ಲಿ ತಿಳಿಸಿದೆ.

 ‘‘ ಪೂರ್ವದ ಚೀನಾ-ಭಾರತ ಗಡಿಪ್ರದೇಶಗಳ ಕುರಿತು ಚೀನಾದ ನಿಲುವು ಅಚಲ ಹಾಗೂ ಸ್ಪಷ್ಟವಾದುದು’’ ಎಂದು ಹೇಳಿಕೆ ತಿಳಿಸಿದೆ.

ಅರುಣಾಚಲ ಪ್ರದೇಶದ ಕೆಲವು ಭಾಗಗಳು ದಕ್ಷಿಣ ಟಿಬೆಟ್‌ಗೆ ಸೇರಿದ್ದೆಂದು ಚೀನಾ ವಾದಿಸುತ್ತಿದೆ. ಆದರೆ ಭಾರತವು ಅದನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದು, ಆ ರಾಜ್ಯವು ತನ್ನ ಅವಿಭಾಜ್ಯ ಅಂಗವೆಂದು ಸ್ಪಷ್ಟವಾಗಿ ಪುನರುಚ್ಚರಿಸುತ್ತಲೇ ಬಂದಿದೆ.

ಪ್ರಧಾನಿ ನರೇಂದ್ರ ಮೋದಿ ಕಳೆದ ವಾರ ಅಸ್ಸಾಂನ ಪೂರ್ವಭಾಗವನ್ನು ಅರುಣಾಚಲದ ಜೊತೆ ಸಂಪರ್ಕಿಸುವ, ಬ್ರಹ್ಮಪುತ್ರಾ ನದಿಗೆ ಕಟ್ಟಲಾದ  ಧೋಲಾ-ಸದಿಯಾ ಸೇತುವೆಯನ್ನು ಕಳೆದ ವಾರ ರಾಷ್ಟ್ರಕ್ಕೆ ಸಮರ್ಪಿಸಿದ್ದರು.9.2 ಕಿ.ಮೀ. ವಿಸ್ತೀರ್ಣ ಈ ಸೇತುವೆಯಿಂದಾಗಿ ಅಸ್ಸಾಂ ಹಾಗೂ ಅರುಣಾಚಲ ಪ್ರದೇಶದ ನಡುವಿನ ರಸ್ತೆ ಮಾರ್ಗದ ದೂರವು 165 ಕಿ.ಮೀ.ಗಳಷ್ಟು ಕಡಿಮೆಯಾಗಲಿದ್ದು, ಪ್ರಯಾಣದ ಅವಧಿಯು ಐದು ತಾಸುಗಳಿಗೆ ಇಳಿಕೆಯಾಗಲಿದೆ.

ಅರುಣಾಚಲ ಪ್ರದೇಶಕ್ಕೆ ಸೇನಾ ಟ್ಯಾಂಕ್‌ಗಳು ಹಾಗೂ ಸೇನಾಪಡೆಗಳ ತ್ವರಿತ ಚಲನೆಯು ಈ ಸೇತುವೆಯಿಂದ ಸಾಧ್ಯವಾಗಲಿರುವುದರಿಂದ ಚೀನಾದ ಗಡಿಯಲ್ಲಿ ಭಾರತದ ರಕ್ಷಣಾ ವ್ಯವಸ್ಥೆಯು ಇನ್ನಷ್ಟು ಬಲಿಷ್ಠವಾಗಲಿದೆ.

ಕಳೆದ ತಿಂಗಳು ಟಿಬೆಟಿಯನ್ನರ ಧಾರ್ಮಿಕ ನಾಯಕ ದಲಾಯಿ ಲಾಮಾ ಅವರ ಅರುಣಾಚಲಪ್ರದೇಶ ಭೇಟಿ ನೀಡಿದ್ದನ್ನೂ, ಚೀನಾ ಬಲವಾಗಿ ವಿರೋಧಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News