ಅಮೃತ ಯೋಜನೆಯ ಮೂಲಕ ಕ್ಷೇತ್ರಕ್ಕೆ 30 ಕೋಟಿ ರೂ ಅನುದಾನ: ಶಾಸಕ ಮೊಯ್ದಿನ್ ಬಾವ
ಮಂಗಳೂರು, ಮೇ 29: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ಅಮೃತ ಯೋಜನೆಯ ಮೂಲಕ 30 ಕೋಟಿ ರೂ. ಅನುದಾನವನ್ನು ಮೀಸಲಿಡಲಾಗಿದೆ ಎಂದು ಶಾಸಕ ಮೊಯ್ದಿನ್ ಬಾವ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಈ ಅನುದಾನದಲ್ಲಿ ಸುರತ್ಕಲ್ ಪ್ರದೇಶದ ಒಳಚರಂಡಿ ಕಾಮಗಾರಿಯನ್ನು ನಡೆಸಲಾಗುವುದು. ಈ ಹಿಂದೆ ಕುಡ್ಸೆಂಪ್‌ನಿಂದ ಸುರತ್ಕಲ್ ಪ್ರದೇಶದಲ್ಲಿ ಒಳಚರಂಡಿ ವ್ಯವಸ್ಥೆಯ ಕಾಮಗಾರಿ ಕೈಗೊಂಡಿದ್ದರೂ ಇಡ್ಯಾ, ಕಟ್ಲ, ರಾಘವೇಂದ್ರ ಮಠದ ಪರಿಸರದಲ್ಲಿ ತೆರದ ಬಾವಿಗಳ ನೀರು ಮಲೀನಗೊಳ್ಳ ತೊಡಗಿದ್ದರಿಂದ ಒಳಚರಂಡಿ ವ್ಯವಸ್ಥೆಯನ್ನು ಸಮಪರ್ಕವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ಒಳಚರಂಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ಈ ಅನುದಾನವನ್ನು ಬಳಸಿಕೊಳ್ಳಲಾಗುತ್ತಿದೆ.
ಮಂಗಳೂರು ಮಹಾನಗರ ಪಾಲಿಕೆಗೆ ಅಮೃತ ಯೋಜನೆಯ ಮೂಲಕ 179 ಕೊಟಿ ರೂ. ಮಂಜೂರಾಗಿದೆ. ಈ ಅನುದಾನದಲ್ಲಿ ಒಟ್ಟು 55.5 ಕೋಟಿ ರೂ. ಮಂಗಳೂರು ಉತ್ತರ ಮತ್ತು ದಕ್ಷಿಣ ವಿಧಾನ ಸಭಾ ಕ್ಷೇತ್ರಗಳ ಕಾಮಗಾರಿಗಳಿಗೆ ಇಡಲಾಗಿದೆ. ಈ ಯೋಜನೆಯ ನಿಯಮಾವಳಿಗಳನ್ನು ಪಾಲಿಸಿ ಅಧಿಕಾರಿಗಳ ಮಾರ್ಗದರ್ಶನದೊಂದಿಗೆ ಅನುದಾನವನ್ನು ವಿನಿಯೋಗಿಸಲಾಗುತ್ತಿದೆ.
ಎಡಿಬಿ ಬ್ಯಾಂಕ್ ನೆರವಿನ 413 ಕೋಟಿ ರೂ ಯೋಜನೆ ಡಿಪಿಆರ್ ತಯಾರಿ ಹಂತದಲ್ಲಿದೆ ಈ ಯೋಜನೆ ಜಾರಿಗೊಂಡರೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ನೀರು ಸರಬರಾಜು ಹಾಗೂ ಒಳಚರಂಡಿ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ಶಾಸಕ ಮೊಯ್ದಿನ್ ಬಾವ ಸುದ್ದಿಗೊಷ್ಠಿಯಲ್ಲಿಂದು ತಿಳಿಸಿದ್ದಾರೆ.
ಪಚ್ಚನಾಡಿ ಪ್ರದೇಶದಲ್ಲಿ ಗಾಂಜಾ ಚಟುವಟಿಕೆ ನಿಯಂತ್ರಣಕ್ಕೆ ಸೂಚನೆ:- ಪಚ್ಚನಾಡಿ ಪ್ರದೇಶದಲ್ಲಿ ರೈಲ್ವೇ ಹಳಿಯ ಬಳಿ ಕೆಲವರು ಗಾಂಜಾ ಸೇವನೆಯಲ್ಲಿ ತೊಡಗಿರುವ ಬಗ್ಗೆ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಸೂಕ್ತ ಕ್ರಮ ಕೈ ಗೊಳ್ಳಲು ಪೊಲೀಸರಿಗೆ ಸೂಚನೆ ನೀಡಲಾಗಿದೆ ಎಂದು ಮೊಯ್ದಿನ್ ಬಾವ ತಿಳಿಸಿದ್ದಾರೆ.
ಸುರತ್ಕಲ್ ಪ್ರದೇಶದಲ್ಲಿ ರಮಝಾನ್ ಸಂದರ್ಭದಲ್ಲಿ ಎಲ್ಲರೂ ಶಾಂತಿ ಕಾಪಾಡಲು ಸಹಕಾರಿಸಬೇಕು. ಕಾನೂನು ಕೈ ಗೆತ್ತಿಕೊಳ್ಳುವ ಕೆಲಸಕ್ಕೆ ಮುಂದಾಗಬಾರದು. ರವಿವಾರ ಹಟ್ಟಿಯಲ್ಲಿದ್ದ ದನವನ್ನು ಅಕ್ರಮವಾಗಿ ಪ್ರವೇಶಿಸಿ ಕದ್ದ ಘಟನೆ ಗಮನಕ್ಕೆ ಬಂದಿದೆ. ಆರೋಪಿಗಳ ಪತ್ತೆಗೆ ಪೊಲೀಸರಿಗೆ ಸೂಚನೆ ನೀಡಲಾಗಿದೆ. ದನ ಕಳೆದು ಕೊಂಡವರಿಗೆ ತನ್ನ ಸ್ವಂತ ವೆಚ್ಚದಿಂದ ದನ ನೀಡುವುದಾಗಿ ಮೊಯ್ದಿನ್ ಬಾವ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಶಕುಂತಳಾ ಕಾಮತ್, ಸುಹೈಲ್ ಕಾದರ್, ವರುಣ್ ಅಂಬಟ್, ಅಲಿ ಕೂಳೂರು, ಅಬ್ದುಲ್ ಜಲೀಲ್ ಮೊದಲಾದವರು ಉಪಸ್ಥಿತರಿದ್ದರು.