250 ವರ್ಷಗಳ ಬಳಿಕ ಒಂದಾದ ಸೋದೆ- ಸುಬ್ರಹ್ಮಣ್ಯ ಮಠಗಳು
ಉಡುಪಿ, ಮೇ 29: ಕಳೆದ ಸುಮಾರು 250 ವರ್ಷಗಳ ಪರಸ್ಪರ ಸಂಪರ್ಕ ಹಾಗೂ ಸಂಬಂಧವನ್ನು ಕಡಿದುಕೊಂಡಿದ್ದ ಎರಡು ವೈಷ್ಣವ ಮಠಗಳಾದ ಶ್ರೀಸೋದೆ ವಾದಿರಾಜ ಮಠ ಹಾಗೂ ಕುಕ್ಕೆ ಸುಬ್ರಹ್ಮಣ್ಯದ ಶ್ರೀಸುಬ್ರಹ್ಮಣ್ಯ ಮಠಗಳ ಮಠಾಧೀಶರು, ಪರ್ಯಾಯ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ಇಂದು ಒಂದಾಗಿದ್ದಾರೆ.
ಇಂದು ಬೆಳಗ್ಗೆ ರಥಬೀದಿಯಲ್ಲಿರುವ ಅನಂತೇಶ್ವರ ದೇವಸ್ಥಾನದೊಳಗಿರುವ ಮಧ್ವಾಚಾರ್ಯರು ಅಂತರ್ದಾನರಾದ ಸ್ಥಳಕ್ಕೆ ಹಿರಿಯರಾದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಸೇರಿದಂತೆ ಅಷ್ಟ ಮಠಾಧೀಶರೊಂದಿಗೆ ತೆರಳಿದ ಶ್ರೀಸೋದೆ ಮಠದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಹಾಗೂ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಹಿಂದಿನೆಲ್ಲಾ ಕಹಿ ಘಟನೆಗಳನ್ನು ಮರೆತು ಮತ್ತೆ ಒಂದಾಗುವ ನಿರ್ಧಾರವನ್ನು ಪ್ರಕಟಿಸಿ ಪರಸ್ಪರ ಅಭಿನಂದಿಸಿದರು.
ಬಳಿಕ ರಥಬೀದಿಯಲ್ಲಿ ಮೆರವಣಿಗೆಯಲ್ಲಿ ತೆರಳಿ ಶ್ರೀಕೃಷ್ಣ, ಮುಖ್ಯಪ್ರಾಣರ ದರ್ಶನ ಪಡೆದರು. ಅನಂತರ ಪೇಜಾವರ ಶ್ರೀಗಳೊಂದಿಗೆ ರಾಜಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಅಲ್ಲಿ ಸೇರಿದ ಉಭಯ ಮಠಗಳ ಭಕ್ತರೊಂದಿಗೆ ತಮ್ಮ ಸಮಾಗಮದ ಖುಷಿಯನ್ನು ಹಂಚಿಕೊಂಡರು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕ ಮಾತುಗಳನ್ನಾಡಿದ ಪರ್ಯಾಯ ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಸ್ವಾಮೀಜಿ, ಉಡುಪಿ ಹಾಗೂ ಅಷ್ಟಮಠಗಳ ಪಾಲಿಗೆ ಇದು ಐತಿಹಾಸಿಕ ಅಮೃತಘಳಿಗೆಯಾಗಿದ್ದು, ಇಬ್ಬರು ವೈಷ್ಣವ ಮಠಾಧೀಶರ ಸಮಾಗಮ ಸಂತೋಷ ಹಾಗೂ ಸ್ಪೂರ್ತಿ ನೀಡುವ ಘಟನೆ ಎಂದರು.
ಇಬ್ಬರು ಸಜ್ಜರ ಸಮಾಗಮ ಪುಣ್ಯ, ಇಬ್ಬರು ಸಂತರ ಸಮಾಗಮ ದೊಡ್ಡ ಪುಣ್ಯ. ಇದು ಮಠಗಳ ಎಲ್ಲಾ ಭಕ್ತರು, ಹಿರಿಯರು ಹಾಗೂ ಸಂತರು ಸಂತೋಷ ಪಡುವ ಕ್ಷಣ. ಈ ಮೂಲಕ ಸೋದೆ ಮಠದ ಹಿರಿಯ ಯತಿಗಳಾದ ದಿ.ಶ್ರೀ ವಿಶ್ವೋತ್ತಮ ತೀರ್ಥರ ಕನಸು ನನಸಾಗಿದೆ. ಇಂದು ಇಬ್ಬರು ಯತಿಗಳ ಈ ನಿರ್ಧಾರವನ್ನು ಮಧ್ವಾರ್ಚಾಯರೇ ಒಪ್ಪಿಕೊಂಡು ಹರಸಿದ್ದಾರೆ ಎಂದರು.
ಸಹೋದರರ ಜಗಳ ಹಾಗೂ ದ್ವೇಷ ದೀರ್ಘಕಾಲ ಇರುವುದಿಲ್ಲ. ಇದಕ್ಕೆ ಸೋದೆ ಮತ್ತು ಸುಬ್ರಹ್ಮಣ್ಯ ಮಠಾಧೀಶರ ಇಂದಿನ ನಿರ್ಧಾರ ನಿದರ್ಶನ. ಆಚಾರ್ಯ ಮಧ್ವರ ಸಂಕಲ್ಪದಂತೆ ಈ ಸಮಾಗಮ ನಡೆದಿದೆ. ಇದರಿಂದ ನಾಡಿಗೆ, ದೇಶಕ್ಕೆ ಕ್ಷೇಮವಾಗಲಿದೆ ಎಂದು ಪೇಜಾವರ ಶ್ರೀಗಳು ನುಡಿದರು.
ಶ್ರೀಸೋದೆ ಮಠಾಧೀಶರಾದ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರು ಮಾತನಾಡಿ, ಮಾಧ್ವ ಸಮಾಜಕ್ಕೆ ಇದು ಐತಿಹಾಸಿಕ ಕ್ಷಣ. ಎರಡು ಮಠಗಳು 250 ವರ್ಷಗಳ ಬಳಿಕ ಮಧ್ವಾಚಾರ್ಯರ ಸನ್ನಿಧಾನದಲ್ಲಿ ಮತ್ತೆ ಒಂದಾಗಿದ್ದೇವೆ. ಇದಕ್ಕೆ ಅಷ್ಟ ಮಠಗಳ ಸ್ವಾಮೀಜಿಗಳು ಸಾಕ್ಷಿಯಾಗಿದ್ದಾರೆ. ಎರಡು ಮಠಗಳು ಒಂದಾದಾಗ ಸಮಾಜವೂ ಶಕ್ತಿಶಾಲಿಯಾಗುವುದು. ಪೇಜಾವರ ಶ್ರೀಗಳ ಐತಿಹಾಸಿಕ ಐದನೇ ಪರ್ಯಾಯದಲ್ಲಿ ಈ ಸಮಾಗಮವಾಗಿರುವುದು ಇನ್ನೊಂದು ವಿಶೇಷ ಎಂದರು.
ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥರು ಮಾತನಾಡಿ, ಕಳೆದ 250ಕ್ಕೂ ಅಧಿಕ ವರ್ಷಗಳಿಂದ ಸೋದೆ ಮಠ ಹಾಗೂ ನಮ್ಮ ಮಠದ ನಡುವೆ ವ್ಯವಹಾರ, ಮಾತುಕತೆ ಇಲ್ಲದಿದ್ದರೂ, ದ್ವೇಷವಂತೂ ಇರಲ್ಲಿಲ್ಲ. ಈ ಸಮಾಗಮದ ಮೂಲಕ ನಾವು ಸಾಮರಸ್ಯದ ಸಂದೇಶವನ್ನು ಸಮಾಜಕ್ಕೆ ನೀಡುತಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಾಗೂ ಅದಮಾರು ಮಠದ ಕಿರಿಯ ಯತಿಗಳಾಜದ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಉಪಸ್ಥಿತರಿದ್ದರು. ಬೆ.ನಾ.ವಿಜಯೇಂದ್ರ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಮೇ 30ರಂದು ಸುಬ್ರಹ್ಮಣ್ಯ ಮಠಾಧೀಶರು ಇದೇ ಮೊದಲ ಬಾರಿ ಶಿರಸಿ ಸಮೀಪದ ಸೋದೆಯಲ್ಲಿರುವ ಶ್ರೀಸೋದೆ ಮೂಲ ಮಠಕ್ಕೆ ತೆರಳಲಿದ್ದು, ಅಲ್ಲಿ ಅವರಿಗೆ ಅಭಿನಂದನೆ ನಡೆಯಲಿದೆ. ಬಳಿಕ ಮೇ 31ರಂದು ಸೋದೆ ಮಠಾಧೀಶರು 250 ವರ್ಷಗಳ ಬಿಳಿಕ ಕುಮಾರಧಾರ ನದಿಯನ್ನು ದಾಟಿ ಸುಬ್ರಹ್ಮಣ್ಯ ಕ್ಷೇತ್ರ ಪ್ರವೇಶಿಸಲಿದ್ದಾರೆ. ಜೂ.1ರಂದು ಬೆಳಗ್ಗೆ ಸುಬ್ರಹ್ಮಣ್ಯ ಮಠದಲ್ಲಿ ಅವರಿಗೆ ಅಭಿನಂದನೆ ನಡೆಯಲಿದೆ.