ದೇಶದ ವಿವಿಧ ರಾಜ್ಯಗಳ ಸಾಕ್ಷ್ಯಚಿತ್ರಕ್ಕೆ ಬೈಕ್‌ನಲ್ಲಿ ಹೊರಟ ಯುವಕ

Update: 2017-05-29 17:52 GMT

ಕಾಪು, ಮೇ 29: ದೇಶದ ವಿವಿಧ ರಾಜ್ಯಗಳ ಸಾಂಸ್ಕೃತಿಕ ಜೀವನ, ಆಹಾರ ಪದ್ಧತಿ, ಐತಿಹಾಸಿಕ ಪ್ರದೇಶಗಳ ಕುರಿತಾಗಿ ಸಾಕ್ಷ್ಯಚಿತ್ರ ನಿರ್ಮಾಣ ಗುರಿಯೊಂದಿಗೆ ರಾಷ್ಟ್ರದ 13 ರಾಜ್ಯಗಳು, 11,000 ಕಿಮೀ, ಲೈಟ್ಸ್ ಕ್ಯಾಮರಾ, ರೋಯಲ್ ಎನ್‌ಫೀಲ್ಡ್ ಬೈಕ್‌ನಲ್ಲಿ ಕಾಪುವಿನ ಸಚಿನ್ ಶೆಟ್ಟಿ 40 ದಿನಗಳ ಯಾತ್ರೆ ಕೈಗೊಂಡಿದ್ದಾರೆ.

ಹವ್ಯಾಸಿ  ಬೈಕ್ ರೈಡರ್ ಕಾಪುವಿನ ಕೊಂಬಗುಡ್ಡೆ ನಿವಾಸಿ ಸಚಿನ್ ಶೆಟ್ಟಿ ಅವರು ಲೈಟ್ಸ್ ಕ್ಯಾಮರಾ ಲಡಾಕ್ - ಬೈಕ್ ಯಾತ್ರೆ ಕೈಗೊಂಡಿದ್ದಾರೆ.

ರವಿವಾರ ಬೆಳಗ್ಗೆ ಕಾಪು ಪೇಟೆಯಿಂದ ಹೊರಟ ಇವರ ಯಾತ್ರೆಯು ಸೋಮವಾರ ಮಧ್ಯಾಹ್ನ 1,000 ಕಿಮೀ ದೂರದ ಮುಂಬೈಯ ನವಿಮುಂಬೈ ತಲುಪಿದ್ದಾರೆ. ಮಂಗಳವಾರ ನವಿಮುಂಬೈಯಲ್ಲಿ ಸಚಿನ್ ಅವರ ಸ್ನೇಹಿತರ ಮನೆಯಲ್ಲಿ ತಂಗಲಿದ್ದಾರೆ. ಇದೇ ವೇಳೆ ಅವರು ಬೈಕ್‌ನ್ನು ಶೋರೂಂನಲ್ಲಿ ಸರ್ವೀಸ್‌ಗೆ ನೀಡಲಿದ್ದಾರೆ. ಬುಧವಾರ ರಾಜಸ್ಥಾನಕ್ಕೆ ತೆರಳಲಿದ್ದಾರೆ.

ರೋಯಲ್ ಎನ್‌ಫೀಲ್ಡ್ - ಹಿಮಾಲಯನ್ ಬೈಕ್ ಮೂಲಕ ದೇಶ ಸಂಚರಿಸಲಿರುವ ಇವರು ತನ್ನೊಂದಿಗೆ ಕೊಂಡೊಯ್ಯುವ ಹೆಲ್ಮೆಟ್ ಕ್ಯಾಮೆರಾ, ಡಿಜಿ ಕ್ಯಾಮರಾ, ಗೋಪ್ರೊ ಕ್ಯಾಮರಾಗಳ ಮೂಲಕವಾಗಿ ಯಾತ್ರೆಯ ಸಂಪೂರ್ಣ ಚಿತ್ರೀಕರಣ ನಡೆಸಲಿದ್ದಾರೆ. ತಮ್ಮ ಸಂಚಾರಕ್ಕಾಗಿ 2 ಲಕ್ಷ ರೂ. ವೆಚ್ಚದ ಬೈಕ್‌ನ್ನು ವಿನೂತನ ಶೈಲಿಗೆ ಮಾರ್ಪಾಡು ಮಾಡಿಕೊಂಡಿರುವ ಸಚಿನ್ ಶೆಟ್ಟಿ ಬೈಕ್‌ನಲ್ಲೇ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಪೆಟ್ರೋಲ್ ಕ್ಯಾನ್, ಜಿ.ಪಿ.ಎಸ್. ನೇವಿಗೇಟರ್, ಮೊಬೈಲ್ ಮತ್ತು ಕ್ಯಾಮರಾ ಚಾರ್ಜಿಂಗ್ ವ್ಯವಸ್ಥೆ, ಟೂಲ್‌ಕಿಟ್, ಪಂಪ್, ವಾಟರ್ ಕಿಟ್‌ನ್ನು ಅಳವಡಿಸಿಕೊಂಡಿದ್ದಾರೆ. ತನ್ನೊಂದಿಗೆ ಗೋಪ್ರೊ ಕ್ಯಾಮರಾ, ಡಿಜಿ ಆಸ್ಮೋ, 5 ಡಿ, ಸೋನಿ ಎ-7 ಕ್ಯಾಮರಾಗಳನ್ನು ಕೊಂಡೊಯ್ಯುತ್ತಿದ್ದು, ಹೆಲ್ಮೆಟ್ ಕ್ಯಾಮರಾ, ಮೊಬೈಲ್ ಸ್ಪೀಕರ್, ಹೆಡ್‌ಫೋನ್, ಟಾರ್ಚ್‌ಲೈಟ್‌ನ್ನೂ ಅಳವಡಿಸಿಕೊಂಡಿದ್ದಾರೆ.

ಸಚಿನ್ ಶೆಟ್ಟಿ  ಜಾವಾ ಎಜ್ಡಿ ಟೀಮ್ ಜೊತೆಗೆ ಬೆಂಗಳೂರು, ಮಡಿಕೇರಿ, ಊಟಿ, ಹೈದರಾಬಾದ್, ಕನ್ಯಾಕುಮಾರಿ ಇತರ ಪ್ರದೇಶಗಳಲ್ಲಿ ಬೈಕ್ ಯಾತ್ರೆ ನಡೆಸಿದ್ದು, 2015ರಲ್ಲಿ ಬೆಂಗಳೂರಿನ ಜಾವಾ ಎಜ್ಡಿ ಮೋಟಾರ್ ಸೈಕಲ್ ಅಸೋಸಿಯೇಷನ್ ಸಂಯೋಜಿಸಿದ್ದ ಜ್ವಾಲಿ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿ ಲಿಮ್ಕಾ ಬುಕ್ ಆಫ್ ರೆರ್ಕಾಂಡಿಗ್‌ನಲ್ಲಿ ತಮ್ಮ ಹೆಸರನ್ನು ಸೇರ್ಪಡೆಗೊಳಿಸಿಕೊಂಡಿದ್ದಾರೆ.

ಬೈಕ್ ರೈಡ್ ಎಂದರೆ ತುಂಬಾ ಇಷ್ಟ. ಈ ಮೊದಲು ನಾನು ವಿವಿಧ ಕಡೆಗಳಿಗೆ ಯಾತ್ರೆ ಹೊರಟಿದ್ದೆ. ಇದೀಗ 11,000 ಕಿಮೀ ಯಾತ್ರೆಗೆ ಹೊರಟಿದ್ದೇನೆ. ಇದಕ್ಕೆ 1.30 ಲಕ್ಷ ರೂ ಖರ್ಚಾಗಲಿದ್ದು, ಇದಕ್ಕೆ ಪೋಷಕರ ಹಾಗೂ ಸ್ನೇಹಿತರ ಬೆಂಬಲವೇ ಕಾರಣ ಎನ್ನುತ್ತಾರೆ ಸಚಿನ್ ಶೆಟ್ಟಿ.

ಬೈಕ್‌ನಲ್ಲಿ ಸಂಚಾರ ಆರಂಭಿಸುವ ಬಗ್ಗೆ ಈ ಮುಂಚೆಯೇ ಹೇಳಿದ್ದ. ಆದರೆ ನಾನೇ ಆತನನ್ನು ಈಗ ಬೇಡ ಎನ್ನುತಿದ್ದೆ.  ಭಯ ಆಗುತ್ತಿತ್ತು. ಆದರೆ ಈಗ ಧೈರ್ಯದಿಂದ ಈ ಯಾತ್ರೆಗೆ ಹೋಗಿ ಬರಲು ಹೇಳಿದ್ದೇನೆ. ತಂದೆ ಈತನನ್ನು ಚಿಕ್ಕಂದಿನಿಂದಲೇ ಬೈಕ್ ರೈಡ್‌ಗೆ ಪ್ರೋತ್ಸಾಹ ನೀಡಿದ್ದರು. ಅವರ ಒಂದು ತರಬೇತಿಯಿಂದ ಇಷ್ಟು ದೊಡ್ಡ ಯಾತ್ರೆ ಮಾಡಲು ಪ್ರೇರಣೆ ಆಗಿದೆ ಎನ್ನುತ್ತಾರೆ ಸಚಿನ್ ತಾಯಿ ಜಯಶ್ರೀ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News