ಮನುಷ್ಯನಿಗಿಂತ ಪ್ರಾಣಿ ಮೇಲು ಎಂಬ ಸಿದ್ಧಾಂತ ದೇಶದ ದುರಂತ: ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ

Update: 2017-05-29 18:39 GMT

ಬೆಳ್ತಂಗಡಿ, ಮೇ 29: ದನ ಕೊಂದವರು ಜೈಲಲ್ಲಿ ಕೊಳೆಯುತ್ತಾರೆ, ಜನ ಕೊಂದವರು ದೇಶ ಆಳುತ್ತಾರೆ. ಮನುಷ್ಯನಿಗಿಂತ ಪ್ರಾಣಿಯೇ ಮೇಲು ಎಂಬ ಸಿದ್ಧಾಂತ ಮುಂದಿಡುತ್ತಿರುವುದು ನಮ್ಮ ದೇಶದ ದುರಂತವಾಗಿದೆ. ಜನಗಳ ಬಗ್ಗೆ ಕಾಳಜಿಯಿಲ್ಲದವರು ದನಗಳ ರಕ್ಷಣೆಯ ಬಗ್ಗೆ ಕಾನೂನು ಮಾಡುತ್ತಾರೆ ಇದು ಅತ್ಯಂತ ಅಪಾಯಕಾರಿ ಎಂದು ಪ್ರಗತಿಪರ ಸ್ವಾಮೀಜಿಗಳ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ, ಮೈಸೂರಿನ ಉರಿಲಿಂಗಪೆದ್ದಿ ಮಠದ ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ ಅಭಿಪ್ರಾಯಿಸಿದರು. ಬೆಳ್ತಂಗಡಿಯ ಮಂಜುನಾಥ ಕಲಾಭವನದಲ್ಲಿ ಸೋಮವಾರ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ)ಯ ತಾಲೂಕು ಸಮಿತಿ ಹಾಗೂ ಡಾ.ಬಿ.ಆರ್ ಅಂಬೇಡ್ಕರ್ ಜನ್ಮದಿನಾಚರಣಾ ಸಮಿತಿಯ ವತಿಯಿಂದ ವಿಶ್ವಕ್ಕೆ ಶಾಂತಿಯ ಸಂದೇಶ ಸಾರಿದ ಮಹಾನ್ ಚೇತನಗಳಾದ ಬುದ್ಧ, ಬಸವ ಹಾಗೂ ಅಂಬೇಡ್ಕರ್ ಜನ್ಮ ದಿನಾಚರಣೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮಾಂಸ ತಿಂದವರಿಂದ ಈ ದೇಶ ಹಾಳಾಗಿಲ್ಲ. ತುಪ್ಪ ತಿಂದವರಿಂದ ಹಾಳಾಗಿದೆ ಎಂದ ಅವರು, ಆಹಾರದ ಹಕ್ಕಿನ ಮೇಲೆ ನಿಷೇಧ ಹೇರುವಿಕೆ ಸಂವಿಧಾನಬಾಹಿರ ಕೃತ್ಯ ಎಂದರು. ಇಂದು ಡೋಂಗಿ ಪ್ರಜಾಪ್ರಭುತ್ವದಿಂದಾಗಿ ನೈಜ್ಯ ಪ್ರಜಾಪ್ರಭುತ್ವ ಅಪಾಯದಲ್ಲಿದೆ. ಪ್ರಜಾಪ್ರಭುತ್ವ ಉಳಿಸಲು ದಲಿತರು, ಹಿಂದುಳಿದವರು ಅಲ್ಪಸಂಖ್ಯಾತರು ಸಂಘಟಿತರಾಗಿ ಭೀಮ ಬಲದಿಂದ ಅಧಿಕಾರ ಪಡೆಯಲು ಮುಂದಾಗಬೇಕಿದೆ. ಈ ಒಗ್ಗಟ್ಟು ಸಾಧ್ಯವಾದರೆ ಈ ದೇಶದ ಎಲ್ಲ ವಿಧಾನಸಭೆಗಳು ಲೋಕಸಭೆ ನಮ್ಮದಾಗಲಿದೆ. ಈಗ ಹದಿನೈದು ಶೇಕಡ ಜನ ಉಳಿದ ಜನರನ್ನು ಆಳುತ್ತಿದ್ದಾರೆ. ಇದನ್ನು ಬದಲಿಸಲು ಪಣ ತೊಡಬೇಕಾಗಿದೆ ಎಂದರು. ಭಾರತ ಮಾತಾ ಕೀ ಜೈ ಎಂದರೆ ದೇಶ ಉದ್ಧಾರ ವಾಗಲಾರದು. ದೇಶವೆಂದರೆ ಅದು ಕೇವಲ ಕಲ್ಲು ಮಣ್ಣು ಮಾತ್ರವಲ್ಲ ಎಂದ ಅವರು, ಅಂಬೇಡ್ಕರ್ ನೀಡಿದ ಸಂವಿಧಾನದಿಂದಾಗಿ ಈ ದೇಶದಲ್ಲಿ ಚಹಾ ಮಾರುವವನು ಪ್ರಧಾನಿಯಾಗಲು, ಚಪ್ಪಲಿ ಹೊಲಿಯುವವರು ಸ್ಪೀಕರ್ ಆಗಲು, ಕುರಿ ಮೇಯಿಸುವವನು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಆದರೆ ಈ ಭಗವದ್ಗೀತೆಯಿಂದ ಇದು ಯಾಕೆ ಸಾಧ್ಯವಾಗಿಲ್ಲ. ಸಂವಿಧಾನಕ್ಕಿರುವ ತಾಕತ್ತು ಭಗವದ್ಗೀತೆಗಿಲ್ಲ ಎಂದರು. ಅಂಬೇಡ್ಕರ್, ಬಸವಣ್ಣ, ನಾರಾಯಣ ಗುರು... ಹೀಗೆ ಸಮಾಜದಲ್ಲಿ ಬದಲಾವಣೆಗಳನ್ನು ತಂದವರನ್ನು ಜಾತಿಗೆ ಸೀಮಿತಗೊಳಿಸುವ ಕುತಂತ್ರಗಳು ನಡೆಯುತ್ತಿದೆ. ಅಂಬೇಡ್ಕರ್ ಬಯಸಿದ್ದು ಜಾತ್ಯತೀತ ರಾಷ್ಟ್ರ. ಸರ್ವರಿಗೆ ಸಮಬಾಳು ಸರ್ವರಿಗೆ ಸಮಪಾಲು ಅವರ ಧ್ಯೇಯವಾಗಿತ್ತು. ಮತಗಳನ್ನು ಮಾರಾಟ ಮಾಡುವವರು ಅಂಬೇಡ್ಕರ್ ವಾದಿಗಳಾಗಲು ಸಾಧ್ಯವಿಲ್ಲ. ಅಂಬೇಡ್ಕರ್‌ರನ್ನು ಪೂಜಿಸುವ ಮನೋಭಾವಿಕ್ಕಿಂತ ಅವರ ಆದರ್ಶವನ್ನು ಪಾಲಿಸುವ ಮೂಲಕ ಅವರಿಗೆ ಗೌರವ ಸಲ್ಲಿಸಿ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಕರಾವಳಿಯಲ್ಲಿ ಸಂಘಪರಿವಾರ ದಲಿತರನ್ನು ಕೈಗೊಂಬೆಯಾಗಿಸಿ ಬಲಿಪಶುಗಳಾಗಿಸುತ್ತಿದ್ದಾರೆ. ಈ ಬಗ್ಗೆ ದಲಿತ ಸಮುದಾಯ ಎಚ್ಚರ ವಹಿಸುವ ಅಗತ್ಯವಿದೆ. ರಾಜ್ಯ ಸರಕಾರ ದಲಿತರ ಶೋಷಿತರ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು, ಸಮುದಾಯದ ಅಭಿವೃದ್ಧಿಗಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದದ ರಾಜ್ಯ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮಾತನಾಡಿ, ನರೇಂದ್ರ ಮೋದಿ ಪಂಚತೀರ್ಥ ಕ್ಷೇತ್ರಗಳ ಅಭಿವೃದ್ಧಿಯ ಬಗ್ಗೆ ಮಾತನಾಡುತ್ತಿದ್ದಾರೆ. ದಲಿತರಿಗೆ ಇದೀಗ ಬೇಕಾಗಿರುವುದು ಆರ್ಥಿಕ, ಸಾಮಾಜಿಕ ಸಮಾನತೆಯ ಬದುಕು ಅದಕ್ಕಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು. ಶಾಸಕ ಕೆ.ವಸಂತ ಬಂಗೇರ ಮಾತನಾಡಿ, ದಲಿತರಿಗೆ ಮೀಸಲಿರಿಸಲಾಗಿರುವ ಜಮೀನುಗಳು ಅತಿಕ್ರಮಣವಾಗಿದ್ದು, ಅದನ್ನು ತೆರವುಗೊಳಿಸಿ ದಲಿತರಿಗೆ ಹಂಚಲು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಇದೇ ಸಂದರ್ಭ ತಾಲೂಕಿನ ದಲಿತ ಚಳುವಳಿಯ ಹಿರಿಯ ಮುಖಂಡರನ್ನು, ತಾಲೂಕಿನ ಪ.ಜಾತಿ-ಪಂಗಡದಿಂದ ವಿವಿಧ ಕ್ಷೇತ್ರಗಳಿಗೆ ನಾಮನಿರ್ದೇಶನಗೊಂಡ ಸದಸ್ಯರನ್ನು, ತಾಪಂ ಹಾಗೂ ಜಿಪಂ ಸದಸ್ಯರು ಹಾಗೂ ಗ್ರಾಪಂ ಅಧ್ಯಕ್ಷರನ್ನು, ಎಸೆಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ತಾಲೂಕಿನ ಪ.ಜಾತಿ ಪಂಗಡದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

 ಕರ್ನಾಟಕ ದಸಂಸ ತಾಲೂಕು ಸಂಚಾಲಕ ವೆಂಕಣ್ಣ ಕೊಯ್ಯೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಉರಿಲಿಂಗಪೆದ್ದಿ ಮಠದ ಸಿದ್ದರಾಮ ಶಿವಯೋಗಿ ಸ್ವಾಮೀಜಿ, ಜಿಪಂ ಅಧ್ಯಕ್ಷೆ ಮೀನಾಕ್ಷೀ ಶಾಂತಿಗೋಡು, ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಅಧ್ಯಕ್ಷ ಶಾಹುಲ್ ಹಮೀದ್, ದಸಂಸ ಮೈಸೂರು ವಿಭಾಗೀಯ ಸಂಚಾಲಕ ಚಂದು ಎಲ್., ಜಿಪಂ ಸದಸ್ಯ ಶೇಖರ ಕುಕ್ಕೇಡಿ, ದಲಿತ ಕಲಾ ಮಂಡಳಿಯ ರಾಜ್ಯ ಸಂಚಾಲಕ ಬಿಸ್ನಲ್ಲಿ ಮೂರ್ತಿ, ತಾಪಂ ಅಧ್ಯಕ್ಷೆ ದಿವ್ಯಜ್ಯೋತಿ, ಬೆಳ್ತಂಗಡಿ ಪಪಂ ಅಧ್ಯಕ್ಷ ಮುಗುಳಿ ನಾರಾಯಣ ರಾವ್, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕಾರ್ಯದರ್ಶಿ ಜಯಕೀರ್ತಿ ಜೈನ್, ದಸಂಸ ಮಹಿಳಾ ಒಕ್ಕೂಟದ ಸಂಚಾಲಕಿ ಸರಸ್ವತಿ, ತಾಲೂಕು ನಲಿಕೆಯವರ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪಕೆ., ದಸಂಸ ವಿದ್ಯಾರ್ಥಿ ಒಕ್ಕೂಟ ಸಂಚಾಲಕ ಅಭಿನಂದನ್ ಕೊಕ್ರಾಡಿ, ತಾಲೂಕು ಆದಿದ್ರಾವಿಡ ಸಮಾಜ ಸೇವಾ ಸಂಘದ ಅಧ್ಯಕ್ಷ ಗೋಪಾಲಕೃಷ್ಣ ಕುಕ್ಕಳ, ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿಯ ಸದಸ್ಯ ಶೇಖರ್ ಎಲ್., ತಾಲೂಕು ಮೊಗೇರ ಜನಾಂಗ ಜಾಗೃತಿ ಟ್ರಸ್ಟ್‌ನ ಟ್ರಸ್ಟಿ ಕೊರಗಪ್ಪಕೆ.ಅಳದಂಗಡಿ, ತಾಲೂಕು ಭೈರ ಸಮಾಜ ಸೇವಾ ಸಂಘದ ಅಧ್ಯಕ್ಷ ಉದಯಕುಮಾರ್ ಲಾಯಿಲ ಮೊದಲಾದವರು ಉಪಸ್ಥಿತರಿದ್ದರು.

ಕ್ರಾಂತಿಗೀತೆಯೊಂದಿಗೆ ಕಾರ್ಯಕ್ರಮ ಆರಂಭ ಗೊಂಡಿತು. ರೋಹಿತ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು. ಬಿ.ಕೆ.ವಸಂತ್ ಸ್ವಾಗತಿಸಿ, ವಂದಿಸಿದರು.

  •  ಈ ನಾಡಿನ ಶೋಷಿತರ ದಲಿತರ ವಿಮೋಚನೆಯಿರುವುದು ಸಂವಿಧಾನ ನೀಡಿರುವ ಮತಪತ್ರದಲ್ಲಾಗಿದೆ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳಿ
  • ದಲಿತರು ಈ ದೇಶದ ಹೆಬ್ಬಂಡೆಗಳು. ಅವರು ಎದ್ದು ಬಂದು ಸಂಘಟಿತರಾದರೆ ಅವರನ್ನು ಎದುರಿಸಲು ಯಾರಿಂದಲೂ ಸಾಧ್ಯವಿಲ್ಲ.
  • ದಲಿತರು ಶೋಷಿತರು ಮೂಢನಂಬಿಕೆಗಳಿಗೆ ಹೆಚ್ಚು ಬಲಿಯಾಗುತ್ತಿದ್ದಾರೆ ಸರಕಾರ ಇನ್ನಾದರೂ ಎಚ್ಚೆತ್ತುಕೊಂಡು ಮೂಢನಂಬಿಕೆ ತಡೆ ಕಾಯ್ದೆಯನ್ನು ಜಾರಿಗೆ ತರಬೇಕು.

ಜ್ಞಾನಪ್ರಕಾಶ ಸ್ವಾಮೀಜಿ

ನೀಲಿಯಾದ ಬೆಳ್ತಂಗಡಿ

 ದಸಂಸ ಆಯೋಜಿಸಿದ್ದ ಭವ್ಯ ಮೆರವಣಿಗೆ ಇಡೀ ಬೆಳ್ತಂಗಡಿ ನಗರವನ್ನು ನೀಲಿಯಾಗಿಸಿತ್ತು. ಸಾವಿರಾರು ಸಂಖ್ಯೆಯಲ್ಲಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಜನರು ಬೆಳ್ತಂಗಡಿ ಅಂಬೇಡ್ಕರ್ ಭವನದಿಂದ ಸಮಾಜಮಂದಿರಕ್ಕೆ ಮೆರವಣಿಗೆಯಲ್ಲಿ ಸಾಗಿ ಬಂದರು. ನೀಲಿ ಬಾವುಟಗಳು ಬಾನೆತ್ತರಕ್ಕೆ ಹಾರಾಡಿದವು. ಜೈ ಭೀಮ್ ಘೋಷಣೆ ಮುಗಿಲು ಮುಟ್ಟಿತ್ತು. ‘‘ಬಸವಣ್ಣ, ಕುವೆಂಪು, ಪ್ರೊ.ಕೃಷ್ಣಪ್ಪರು ಹುಟ್ಟಿದ ನಾಡಿನಲ್ಲಿ ಕೋಮುವಾದಿಗಳ ಆಟ ನಡೆಯುವುದಿಲ್ಲ’’ ಎಂದು ಕೋಮುವಾದಿಗಳನ್ನು ಎಚ್ಚರಿಸುತ್ತಲೇ ಜಾಥಾ ಸಾಗಿ ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News