ರಾಜ್ಯದ ನಾಲ್ಕು ಕಡೆ ವಿಜ್ಞಾನ ಕೇಂದ್ರ ಸ್ಥಾಪನೆ: ಸಚಿವ ಸೀತಾರಾಂ

Update: 2017-05-29 18:40 GMT

ಮಂಗಳೂರು, ಮೇ 29: ಕೊಡಗು, ಬಾಗಲಕೋಟೆ, ಬಿಜಾಪುರ, ಹುಬ್ಬಳ್ಳಿ ಸಹಿತ ರಾಜ್ಯದ ನಾಲ್ಕು ಕಡೆ ವಿಜ್ಞಾನ ಕೇಂದ್ರ ಸ್ಥಾಪಿಸಲಾಗುವುದು ಮತ್ತು ಗದಗ ಜಿಲ್ಲೆಯಲ್ಲಿ ವಿಜ್ಞಾನ ಕೇಂದ್ರ ಸ್ಥಾಪಿಸಲು ಪ್ರಸ್ತಾವ ಬಂದಿದೆ ಎಂದು ರಾಜ್ಯ ಯೋಜನೆ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎಂ.ಆರ್.ಸೀತಾರಾಂ ತಿಳಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿಂದು ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಡಾ.ಕೋಟ ಶಿವರಾಮ ಕಾರಂತ ಪಿಲಿಕುಳ ಜೈವಿಕ ಉದ್ಯಾನವನ, ಸಸ್ಯಕಾಶಿ ಔಷಧ ಗಿಡಗಳ ವನ, ಸಂಸ್ಕೃತಿ ಗ್ರಾಮ, ವಾಟರ್ ಪಾರ್ಕ್, ವಿಜ್ಞಾನ ಕೇಂದ್ರ, ತಾರಾಲಯವಿರುವ ಪಿಲಿಕುಳ ನಿಸರ್ಗಧಾಮವನ್ನು ಸಿಂಗಾಪುರದ ಸೆಂಟೋಸ ಐಲ್ಯಾಂಡ್ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಸರಕಾರದ ಗಮನ ಸೆಳೆಯಲಾಗು ವುದು. ‘ಟೂರಿಸಂ ತ್ರೂ ಸಾಯನ್ಸ್’ ಯೋಜನೆಯಂತೆ ಪಿಲಿಕುಳವನ್ನು ಆಕರ್ಷಕವನ್ನಾಗಿ ಮಾಡಬೇಕಿದೆ. ತಂತ್ರಜ್ಞಾನ ಯುಗಕ್ಕೆ ಅನುಗುಣವಾಗಿ ಸಮಾಜ ಕೂಡ ಬದಲಾಗಬೇಕು. ಈ ನಿಟ್ಟಿನಲ್ಲಿ ವಿಜ್ಞಾನ ಕೇಂದ್ರ ಸ್ಥಾಪನೆೆ ಹೆಚ್ಚು ಒತ್ತು ನೀಡಲಾಗುವುದು ಎಂದವರು ಹೇಳಿದರು.

  • *ವಿಶ್ವದ 21ನೆ ತಾರಾಲಯ: ಪಿಲಿಕುಳದಲ್ಲಿ ವರ್ಷಾಂತ್ಯದಲ್ಲಿ ಲೋಕಾರ್ಪಣೆಗೊಳ್ಳಲಿರುವ 3ಡಿ ಹೈಬ್ರಿಡ್ ತಾರಾಲಯವು ರಾಷ್ಟ್ರದ ಪ್ರಥಮ ಮತ್ತು ವಿಶ್ವದ 21ನೆಯದ್ದಾಗಲಿದೆ. 35.75 ಕೋ.ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ತಾರಾಲಯದೊಂದಿಗೆ ಪಿಲಿಕುಳದಲ್ಲಿ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದ ಮತ್ತು ಅಂತಾರಾಷ್ಟ್ರೀಯ ಕಾರ್ಯಾಗಾರ ನಡೆಸಲಿದ್ದು, ಈ ಬಗ್ಗೆ ಸಿದ್ಧತೆ ನಡೆಸಲು ಸೆ.1ರಂದು ಮತ್ತೆ ಮಂಗಳೂರಿಗೆ ಬರಲಿದ್ದೇನೆ ಎಂದರು.

ಐದು ವರ್ಷಗಳ ಕಾಲ ತಾರಾಲಯ ನಿರ್ವಹಣೆಗಾಗಿ ಪ್ರತೀ ವರ್ಷ ಸುಮಾರು 1.5 ಕೋ.ರೂ. ಮೊತ್ತವನ್ನು ಸರಕಾರ ನೀಡಲಿದ್ದು, ಐವರು ಸಿಬ್ಬಂದಿಗೆ ಅಮೆರಿಕದಲ್ಲಿ ತರಬೇತಿ ನೀಡಲಾಗುವುದು. ಒಟ್ಟು ನಿರ್ವಹಣಾ ಖರ್ಚಿನ ಸುಮಾರು ಶೇ.25ರಷ್ಟು ಭಾಗವನ್ನು ಸ್ಥಳೀಯವಾಗಿ ಶುಲ್ಕಗಳಿಂದ ಸಂಗ್ರಹಿಸಲಾಗುವುದು ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕಳೆದ ಸಾಲಿನಲ್ಲಿ ನೀಡಿದ್ದ 15 ಕೋ.ರೂ. ಮೊತ್ತದಲ್ಲಿ 12.26 ಕೋ.ರೂ. ಖರ್ಚಾಗಿ ಉಳಿದ ಮೊತ್ತ ಸರಕಾರಕ್ಕೆ ಹೋಗಿದೆ. ಉಳಿಕೆ ಮೊತ್ತ ಇಲ್ಲೇ ಉಳಿಸಲು ಖಾತೆ ತೆರೆಯಲು ಸೂಚನೆ ನೀಡಿದ್ದೇನೆ. ಈ ಬಾರಿ ವಿವಿಧ ಕಾಮಗಾರಿ ನಡೆಸಲು 20 ಕೋ.ರೂ. ಅನುದಾನ ನೀಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊಯ್ದಿನ್ ಬಾವ, ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News