×
Ad

ಕಲ್ಲಡ್ಕ ಘಟನೆಗೆ ಪ್ರಭಾಕರ ಭಟ್ ನೇರ ಹೊಣೆ: ಎಸ್‌ಡಿಪಿಐ

Update: 2017-05-30 17:52 IST

ಮಂಗಳೂರು, ಮೇ 30: ಕಲ್ಲಡ್ಕದಲ್ಲಿ ಮೇ 26ರಂದು ನಮಾಝ್ ಮುಗಿಸಿ ಮನೆಗೆ ತೆರಳುತ್ತಿದ್ದ ಮುಹಮ್ಮದ್ ಹಾಶಿರ್ ಮತ್ತು ಮುಹಮ್ಮದ್ ಮಾಶೂಕ್ ಮೇಲೆ ಕಾರಿನಲ್ಲಿ ಬಂದು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಕೃತ್ಯಕ್ಕೆ ಕಲ್ಲಡ್ಕ ಪ್ರಭಾಕರ್ ಭಟ್ ನೇರ ಹೊಣೆ ಎಂದು ಎಸ್‌ಡಿಪಿಐ ದ.ಕ.ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ ಆರೋಪಿಸಿದ್ದಾರೆ.

ಮಂಗಳೂರು ನಗರದ ಖಾಸಗಿ ಹೊಟೇಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಆರೋಪಿ ಮಿಥುನ್ ಮತ್ತಿತರರು ಕೊಲೆ, ಕೊಲೆಯತ್ನ, ದರೋಡೆ, ಕೋಮುಗಲಭೆಗೆ ಸಂಚು ಸೇರಿದಂತೆ 20ಕ್ಕೂ ಅಧಿಕ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.

ರೌಡಿ ಶೀಟರ್‌ಗಳಾಗಿರುವ ಈ ಆರೋಪಿಗಳು ಬಿ.ಸಿ.ರೋಡ್ ಸಮೀಪದ ತಲಪಾಡಿಯಲ್ಲಿ 5 ವರ್ಷದ ಹಿಂದೆ ನಡೆದ ಬದ್ರುದ್ದೀನ್ ಕೊಲೆ, 2 ವರ್ಷದ ಹಿಂದೆ ನಾವೂರಿನ ಹರೀಶ್ ಪೂಜಾರಿಯ ಕೊಲೆ, ಸಜಿಪಮುನ್ನೂರಿನ ಹರೀಶ್ ಗೌಡನ ಕೊಲೆಯತ್ನದಂತಹ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿದ್ದು, ಇಂತಹವರನ್ನು ಆರೆಸ್ಸೆಸ್ಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸಮರ್ಥಿಸುವುದನ್ನು ಗಮನಿಸುವಾಗ ಕಲ್ಲಡ್ಕದಲ್ಲಿ ಘಟಿಸಿದ ಅಹಿತಕರ ಘಟನೆಗೆ ಪ್ರಭಾಕರ್ ಭಟ್‌ ನೇರ ಹೊಣೆ ಎಂದರು.

ಚೂರಿ ಇರಿತ ಪ್ರಕರಣದಲ್ಲಿ ಮಿಥುನ್ ಮತ್ತಿತರರು ಭಾಗಿಯಾಗಿಲ್ಲ, ಅವರ ಮೇಲೆ ದಾಖಲಿಸಿರುವ ಪ್ರಕರಣ ಕೈ ಬಿಡಬೇಕು ಎಂದು ಪ್ರಭಾಕರ ಭಟ್ ಪೊಲೀಸರ ಮೇಲೆ ಒತ್ತಡ ಹಾಕುತ್ತಿರುವುದು ಖಂಡನೀಯ. ಕೃತ್ಯದಲ್ಲಿ ಅವರ ಕೈವಾಡವಿರುವ ಸಾಧ್ಯತೆ ಇದೆ. ಹಾಗಾಗಿ ತಕ್ಷಣ ಅವರನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಮತ್ತು ಪೊಲೀಸ್ ಇಲಾಖೆ ಮಿಥುನ್‌ನ ಮೇಲೆ ಗೂಂಡಾ ಕಾಯ್ದೆ ದಾಖಲಿಸಬೇಕು ಮತ್ತು ಆತನನ್ನು ಗಡಿಪಾರು ಮಾಡಬೇಕು ಎಂದು ಹನೀಫ್ ಖಾನ್ ಕೊಡಾಜೆ ಆಗ್ರಹಿಸಿದರು.

ಕೇವಲ 2 ವಾರದ ಹಿಂದೆ ಜೈಲಿನಿಂದ ಜಾಮೀನಿನ ಮೇಲೆ ಹೊರ ಬಂದ ಮಿಥುನ್ ಇಂತಹ ದುಷ್ಕೃತ್ಯ ಎಸಗಿದ್ದರೂ ಆತನನ್ನು ಸಮರ್ಥಿಸುವುದರ ಹಿಂದೆ ವ್ಯವಸ್ಥಿತ ಷಡ್ಯಂತ್ರವಿದೆ. ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಿ ಇದರ ಹಿಂದಿರುವ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಜರಗಿಸಬೇಕು ಎಂದು ಹನೀಫ್ ಖಾನ್ ಕೊಡಾಜೆ ಒತ್ತಾಯಿಸಿದರು.
 

ಚುನಾವಣೆ ಸಮೀಪಿಸುತ್ತಿದ್ದಂತೆಯೇ ಸಂಘ ಪರಿವಾರ ಮತ್ತು ಬಿಜೆಪಿ ಕೋಮುಗಲಭೆಗೆ ಯತ್ನಿಸುತ್ತಿದೆ. ರಮಝಾನ್‌ನಲ್ಲಿ ಮಸೀದಿಗಳಲ್ಲಿ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಗುತ್ತಿದ್ದು, ಈ ಸಂದರ್ಭ ಜಿಲ್ಲಾದ್ಯಂತ ಸೂಕ್ತ ಬಂದೋಬಸ್ತ್ ಏರ್ಪಡಿಸಬೇಕು ಎಂದರು. ಕಲ್ಲಡ್ಕ ಘಟನೆಯಲ್ಲಿ ಪಾಲ್ಗೊಂಡ ಮಿಥುನ್ ಸಹಿತ 7 ಮಂದಿಯನ್ನು ಬಂಧಿಸಿ ಗೂಂಡಾ ಕಾಯ್ದೆ ಹಾಕದಿದ್ದರೆ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಎಸ್ಪಿಗೆ ಶಹಭಾಷ್: ಕಲ್ಲಡ್ಕ ಪ್ರಕರಣವನ್ನು ಅತ್ಯಂತ ಚಾಕಚಕ್ಯತೆಯಿಂದ ನಿಭಾಯಿಸಿ ಜಿಲ್ಲಾ ಎಸ್ಪಿ ಭೂಷಣ್ ಗುಲಾಬ್‌ರಾವ್ ಬೊರಸೆಗೆ ಅಭಿನಂದನೆ ಸಲ್ಲಿಸಿದ ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಹನೀಫ್ ಖಾನ್, ಪರಿಸ್ಥಿತಿಯ ನಿಯಂತ್ರಣಕ್ಕೆ ಅವರು ಊಟ, ನಿದ್ದೆ ಬಿಟ್ಟಿದ್ದಾರೆ. ಅವರಿಗೆ ಸಾಥ್ ನೀಡಿರುವ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ ರವೀಶ್ ಮತ್ತವರ ಅಧೀನ ಅಧಿಕಾರಿಗಳ ಶ್ರಮ ಅಪಾರ. ಹಾಗಿದ್ದರೂ ಕಲ್ಲಡ್ಕ ಪ್ರಭಾಕರ ಭಟ್ ಪೊಲೀಸರ ವಿರುದ್ಧ ಮಾಧ್ಯಮಗಳ ಮೂಲಕ ಹರಿಹಾಯುತ್ತಿರುವುದು ಖಂಡನೀಯ ಎಂದರು.

ಸುದ್ದಿಗೋಷ್ಠಿಯಲ್ಲಿ ಎಸ್‌ಡಿಪಿಐ ಮುಖಂಡರಾದ ಶಾಹುಲ್ ಎಸ್.ಎಚ್., ಇಕ್ಬಾಲ್ ಬೆಳ್ಳಾರೆ, ಅಶ್ರಫ್ ಮಂಚಿ, ಝಕರಿಯಾ ಗೋಳ್ತಮಜಲು, ಅಥಾವುಲ್ಲಾ ಜೋಕಟ್ಟೆ, ಹಲ್ಲೆಗೊಳಗಾದ ಹಾಶಿರ್‌ನ ತಂದೆ ಯೂಸುಫ್ ಮತ್ತು ಮಾಶೂಕ್‌ನ ತಂದೆ ಅಬ್ದುಲ್ ಮಜೀದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News