ನದಿ ಮುಖದಿಂದ ಮರಳು ಸಂಗ್ರಹಿಸುವ ಸಂರಚನೆ ವಿನ್ಯಾಸ
ಉಡುಪಿ, ಮೇ 30: ನದಿ ಮುಖದಿಂದ ಮರಳು ಹೊರತೆಗೆದು ಸಂಗ್ರಹಿಸ ಬಲ್ಲ ಸಂರಚನೆಯೊಂದನ್ನು ಬಂಟಕಲ್ಲು ಶ್ರೀ ಮಧ್ವವಾದಿ ರಾಜ ತಾಂತ್ರಿಕ ಮಹಾ ವಿದ್ಯಾಲಯದ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕ ರವಿಕುಮಾರ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳಾದ ಸಚಿನ್ ಸುವರ್ಣ, ಪ್ರಕಾಶ್, ಆದಿತ್ಯ ಸಾಮಂತ್, ಅಭಿಷೇಕ್ ಎ. ವಿನ್ಯಾಸಗೊಳಿಸಿದ್ದಾರೆ.
ಇದು ನದಿಯ ತಳದಲ್ಲಿ ಅಳವಡಿಸುವ ಕಾಂಕ್ರೀಟಿನಿಂದ ರಚಿಸಲ್ಪಟ್ಟ ಜಲ ಚಾಲಿತವಾದ ಸಂರಚನೆಯಾಗಿದೆ. ಅದರಲ್ಲೂ ಮುಖ್ಯವಾಗಿ ನದಿಯು ಸಮುದ್ರ ಸೇರುವಲ್ಲಿ ಇದರ ಅಳವಡಿಕೆ ಪರಿಣಾಮಕಾರಿಯಾಗಿರುತ್ತದೆ. ನದಿ ಮುಖಜ ಭೂಮಿಯನ್ನು ಪ್ರವೇಶಿಸುವ ಮರಳು ಈ ಸಂರಚನೆಯಲ್ಲಿರುವ ಟೊಳ್ಳು ಜಾಗದಲ್ಲಿ ಸಂಗ್ರಹವಾಗಿ ಮತ್ತೆ ನದಿ ತೀರಕ್ಕೆ ಸಾಗಿಸಲ್ಪಟ್ಟು ಅಲ್ಲಿ ಸಂಗ್ರಹ ವಾಗುತ್ತದೆ. ಈ ವಿನ್ಯಾಸದಲ್ಲಿ ಅಲ್ಪವೇಗದ ಹರಿವು ಮತ್ತು ಇಳುಕಲು ಸ್ಥಿತಿಗಳ ಬದಲಾವಣೆಗಳ ಮೂಲಕ ಮರಳು ಸರಿಯಾಗಿ ತಳ ಸೇರುವುದನ್ನು ಧೃಡ ಪಡಿಸುತ್ತದೆ.
ಜಲಚರ ಪ್ರಾಣಿಗಳು ಮತ್ತು ಸಸ್ಯಗಳಿಗೆ ಹಾನಿಯಾಗದಂತೆ ಅಳವಡಿಸಬಹು ದಾದ ವಿನ್ಯಾಸವನ್ನು ಹೊಂದಿರುವ ಈ ಸಂಗ್ರಾಹಕ ದಿಂದ ಉತ್ತಮ ಗುಣಮಟ್ಟದ ಮರಳನ್ನು ಪಡೆಯಬಹುದು. ನದಿ ಮುಖಜ ಭೂಮಿಯಲ್ಲಿ ಅತಿಯಾಗಿ ಮರಳು ಶೇಖರಗೊಳ್ಳುವುದನ್ನು ತಡೆಗಟ್ಟಬಹುದು. ಯಾವತ್ತು ಬೇಕಾದರೂ ತೆರೆಯುವ ಅಥವಾ ಮುಚ್ಚುವ ರೀತಿಯಲ್ಲಿ ವಿನ್ಯಾಸ ಮಾಡಿರುವುದರಿಂದ ತುರ್ತು ಸಮಯದಲ್ಲಿ ಮುಚ್ಚುವ ಮೂಲಕ ನದಿ ತಳದಂತೆ ಬಳಸಬಹುದು. ನೈಸರ್ಗಿಕ ಸಮತೋಲ ಕಾಯ್ದುಕೊಳ್ಳುವಲ್ಲಿಯೂ ಇದು ಪೂರಕ ಎಂದು ವಿನ್ಯಾಸಗೊಳಿಸಿರುವ ತಂಡ ತಿಳಿಸಿದೆ.