ಶೂ ಭಾಗ್ಯ ಯೋಜನೆಯಲ್ಲಿ ಚಪ್ಪಲ್ ನೀಡಿದರೆ ಕ್ರಮ: ಸಚಿವ ಪ್ರಮೋದ್
ಉಡುಪಿ, ಮೇ 30: ಶೂ ಭಾಗ್ಯ ಯೋಜನೆಯಲ್ಲಿ ಕೆಲವು ಶಾಲೆಗಳಲ್ಲಿ ಮಕ್ಕಳಿಗೆ ಚಪ್ಪಲಿಗಳನ್ನು ವಿತರಿಸುವ ಕುರಿತು ದೂರುಗಳು ಬಂದಿವೆ. ಈ ಯೋಜನೆಯಲ್ಲಿ ಯಾವುದೇ ಶಾಲೆಗಳ ಮಕ್ಕಳಿಗೆ ಚಪ್ಪಲ್ ನೀಡಬಾರದು. ಅಂತಹ ಶಾಲೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವಜನಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ.
ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಶಾಲಾ ಪ್ರಾರಂಭೋತ್ಸವ ಉದ್ಘಾಟನೆ, ಪ್ರತಿಭಾ ಪುರಸ್ಕಾರ ಹಾಗೂ ಸೈಕಲ್ ವಿತರಣಾ ಕಾರ್ಯಕ್ರಮವನ್ನು ಮಂಗಳವಾರ ನೆರವೇರಿಸಿ ಅವರು ಮಾತನಾಡುತಿದ್ದರು.
ಶಿಕ್ಷಕರು ಹಾಗೂ ಅಧಿಕಾರಿಗಳು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರೆ ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಿಗಿಂತ ಉತ್ತಮವಾಗಿ ನಡೆಸಿಕೊಂಡು ಹೋಗಲು ಸಾಧ್ಯವಾಗುತ್ತದೆ. ಈ ಶಾಲೆಗೆ ಕಳೆದ 4 ವರ್ಷಗಳಲ್ಲಿ ಸರಕಾರದ ವಿವಿಧ ಇಲಾಖೆಗಳಿಂದ 1.20ಕೋಟಿ ರೂ. ಅನುದಾನ ಬಿಡುಗಡೆ ಮಾಡ ಲಾಗಿದೆ. ಈವರೆಗೆ ಜೂನ್ ತಿಂಗಳಲ್ಲಿ ಬರುತ್ತಿದ್ದ ಸೈಕಲ್ ಈ ಬಾರಿ ಶಾಲೆ ಆರಂಭದಲ್ಲೇ ಬಂದಿದೆ ಎಂದು ಅವರು ತಿಳಿಸಿದರು.
ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್ಪಾಲ್ ಸುವರ್ಣ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ದಿವಾಕರ ಶೆಟ್ಟಿ, ಶಾಲಾಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಕಾಶ್ ಅಂದ್ರಾದೆ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಜಗದೀಶ್ ಕುಮಾರ್, ಮಹಾಮಯಿ ಫೌಂಡೇಶನ್‌ನ ಸಂಚಾಲಕಿ ಉಷಾ ಪೈ, ನಿವೃತ್ತ ಮುಖ್ಯೋಪಾಧ್ಯಾಯಿನಿ ಕೆ.ಕೆ.ಹಂಸವತಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಈ ಬಾರಿಯ ಎಸೆಸೆಲ್ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ 40 ವಿದ್ಯಾರ್ಥಿನಿಯರಿಗೆ ನಗದು ಪುರಸ್ಕಾರ ನೀಡಲಾಯಿತು.
ಸಮಾಜ ಕಲ್ಯಾಣ ಇಲಾಖೆಯಿಂದ ಹಿಂದುಳಿದವರ್ಗದ ವಿದ್ಯಾರ್ಥಿಗಳಿಗೆ ಬ್ಯಾಗ್, ವಿದ್ಯಾರ್ಥಿನಿಯರಿಗೆ ಉಚಿತ ಪಠ್ಯಪುಸ್ತಕ ಮತ್ತು ಎಂಟನೆ ತರಗತಿ ವಿದ್ಯಾರ್ಥಿನಿಯರಿಗೆ ಸೈಕಲ್‌ಗಳನ್ನು ವಿತರಿಸಲಾಯಿತು. ಶಾಲಾ ಮುಖ್ಯೋಪಾ ಧ್ಯಾಯ ವಿಶ್ವನಾಥ ಬಾಯರಿ ಸ್ವಾಗತಿಸಿದರು.