×
Ad

ಹೋರಾಟಗಾರರ ಮನವಿಗೆ ಸ್ಪಂಧಿಸಿದ ಹೈಕೋರ್ಟು: ಕುಮ್ಕಿ ಭೂಮಿ ಯಥಾಸ್ಥಿತಿ ಮುಂದುವರಿಕೆಗೆ ಆದೇಶ

Update: 2017-05-30 20:46 IST

ಪುತ್ತೂರು, ಮೇ 30: ಉಡುಪಿ ಜಿಲ್ಲೆ ಸೇರಿದಂತೆ ಅವಿಭಜಿತ ದ.ಕ. ಜಿಲ್ಲೆಯ ಕೃಷಿಕರ ಅನುಭೋಗದಲ್ಲಿರುವ ವರ್ಗ ಭೂಮಿಗೆ ಸಂಬಂಧಿಸಿದ ಕುಮ್ಕಿ ಭೂಮಿಯನ್ನು ಯಥಾಸ್ಥಿತಿಯಲ್ಲಿ ಮುಂದುವರಿಸುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟುಮಧ್ಯಂತರ ಆದೇಶದಲ್ಲಿ ತಿಳಿಸಿದೆ.
 
ಭಾರತೀಯ ಕಿಸಾನ್ ಸಂಘ ಪುತ್ತೂರು, ಕುಮ್ಕಿ ಹಕ್ಕುಗಳ ಹೋರಾಟಗಾರ ಸುಳ್ಯ ತಾಲ್ಲೂಕಿನ ಎಂ.ಜಿ. ಸತ್ಯನಾರಾಯಣ , ಕೆ.ವಿ. ಕೇಸರಿ ಕಡಬ, ಬಂಟ್ವಾಳ ತಾಲ್ಲೂಕಿನ ಮಂಚಿಯ ಎನ್. ಜಯದೇವ್ , ಸುಳ್ಯ ತಾಲ್ಲೂಕಿನ ಉಬರಡ್ಕದ ಡಿ. ಶಂಕರಿ ಮತ್ತು ಉತ್ತರ ಕನ್ನಡದ ಹೆರೂರಿನ ಶ್ರೀಧರ್ ಸುಬ್ರಾಯ ಹೆಬ್ಬಾರ್ ಅವರು ಕುಮ್ಕಿ ಹಕ್ಕಿನ ಕುರಿತಂತೆ ರಾಜ್ಯ ಹೈಕೋರ್ಟಿನಲ್ಲಿ ದಾವೆ ಹೂಡಿದ್ದರು.

ಈ ದಾವೆ ಅರ್ಜಿಯ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟಿನ ರಜಾ ಕಾಲದ ನ್ಯಾಯಧೀಶ ನ್ಯಾಯಮೂರ್ತಿ ವೀರಣ್ಣ ಅವರು 4 ವಾರಗಳಿಗೆ ಸಂಬಂಧಿಸಿ ಆದೇಶವನ್ನು ನೀಡಿದ್ದು, ನಂತರ ನ್ಯಾಯಾಲಯದ ವಿಭಾಗೀಯ ಫೀಠದಲ್ಲಿ ಈ ಕುರಿತ ವ್ಯವಹರಣೆ ಮುಂದುವರಿಸುವಂತೆ ಅರ್ಜಿದಾರರಿಗೆ ಸೂಚಿಸಿದ್ದಾರೆ.  

ಉತ್ತರ ಕನ್ನಡ ಜಿಲ್ಲೆಯಲ್ಲಿ ರೈತರ ಕುಮ್ಕಿ ಹಕ್ಕು (ಸೊಪ್ಪಿನ ಬೆಟ್ಟ) ಊರ್ಜಿತದಲ್ಲಿದ್ದು, ಭೂಮಿಯ ಅಧಿಕಾರವನ್ನು ಸಂಬಂಧಪಟ್ಟ ಕೃಷಿಕರಿಗೆ ನೀಡಲಾಗಿದೆ. ಭೂಮಿಯ ಕ್ರಯ ಮತ್ತು ವಿಕ್ರಯ ಸಂದರ್ಭದಲ್ಲಿ ಕುಮ್ಕಿ ಸಹಿತ ಭೂಮಿ ನೋಂದಣಿ ನಡೆಯುತ್ತಿದೆ. ಕುಮ್ಕಿ ಭೂಮಿಗೂ ಬ್ಯಾಂಕ್ ಸಾಲ ಸೌಲಭ್ಯ ಸಿಗುತ್ತಿದೆ. ಆದರೆ ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಕೃಷಿಕರ ಅನುಭೋಗದಲ್ಲಿರುವ ಕುಮ್ಕಿ ಭೂಮಿಯನ್ನು ಸರ್ಕಾರ ದಾಖಲೆಗಳಲ್ಲಿ ತನ್ನದೆಂದು ನಮೂದಿಸಿ ಅನುಭೋಗದಾರರಿಂದ ಕಸಿದುಕೊಳ್ಳಲು ಯತ್ನಿಸುತ್ತಿದೆ ಎಂಬ ವಾದದೊಂದಿಗೆ ಕುಮ್ಕಿ ಹಕ್ಕಿನ ಕುರಿತು ಹೈಕೋರ್ಟಿನಲ್ಲಿ ದಾವೆ ಹೂಡಲಾಗಿತ್ತು. ಕುಮ್ಕಿಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿರುವ ಹಿನ್ನೆಲೆಯಲ್ಲಿ ಕೃಷಿಕರ ಪರವಾಗಿ 6 ಮಂದಿ ಅರ್ಜಿದಾರರು  ಹೈಕೋರ್ಟಿನಲ್ಲಿ ದಾವೆ ಹೂಡಿದ್ದರು.

ಅರ್ಜಿದಾರರು ನ್ಯಾಯಾಲಯದಲ್ಲಿ ಮಂಡಿಸಿದ ಎಲ್ಲಾ ವಾದಗಳನ್ನು ಹೈಕೋರ್ಟು ಪುರಸ್ಕರಿಸಿರುವುದರಿಂದ ಕುಮ್ಕಿ ಹಕ್ಕುಗಳ ಹೋರಾಟಕ್ಕೆ ಇದೀಗ ಬಲ ಬಂದಿದ್ದು, ಮುಂದಿನ ಹೋರಾಟಕ್ಕೆ ಸ್ಫೂರ್ತಿ ಸಿಕ್ಕಿದೆ. ನ್ಯಾಯಾಲಯ ತಿರ್ಮಾನಗಳ ವಿರುದ್ದವಾಗಿ ನಡೆದುಕೊಳ್ಳುವ ಮೂಲಕ ಸರ್ಕಾರ ಕುಮ್ಕಿ ಹಕ್ಕುಗಳ ವಿಚಾರದಲ್ಲಿ ಕೃಷಿಕರಿಗೆ ವಂಚನೆ ಮಾಡಿದೆ ಎಂಬುವುದು ಸಾಬೀತಾಗಿದೆ ಎಂದು ಭಾರತೀಯ ಕಿಸಾನ್ ಸಂಘದ ಪ್ರಮುಖರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದಾಖಲೆ ಸಿದ್ಧಪಡಿಸಿ ಕೊಳ್ಳಿ: ಕುಮ್ಕಿದಾರರಿಗೆ ಕಿಸಾನ್ ಸಂಘ ಮನವಿ
ಕುಮ್ಮಿ ಹಕ್ಕುಗಳ ವಿಚಾರದಲ್ಲಿ ಹೈಕೋರ್ಟಿನಿಂದ ಕುಮ್ಕಿ ಹಕ್ಕುದಾರ ಕೃಷಿಕರ ಪರ ಆದೇಶ ಹೊರಬಿದ್ದಿರುವ ಹಿನ್ನಲೆಯಲ್ಲಿ ಮಂಗಳವಾರ ಪುತ್ತೂರಿನಲ್ಲಿರುವ ಭಾರತೀಯ ಕಿಸಾನ್ ಸಂಘದ ಕಾರ್ಯಾಲಯದಲ್ಲಿ ಕಿಸಾನ್ ಸಂಘದ ಪ್ರಮುಖರು ಸಭೆ ಸೇರಿ ಈ ಕುರಿತು ವಿಚಾರ ವಿಮರ್ಶೆ ನಡೆಸಿದರು.

ಭಾರತೀಯ ಕಿಸಾನ್ ಸಂಘದ ಮುಖಂಡರಾದ ಕುಮ್ಕಿ ಹಕ್ಕುಗಳ ಹೋರಾಟಗಾರ ಎಂ.ಜಿ. ಸತ್ಯನಾರಾಯಣ ಅವರು ಹೈಕೋರ್ಟು ಆದೇಶದ ವಿವರವನ್ನು ಮುಂದಿಟ್ಟು ಈ ಆದೇಶದ ಹಿನ್ನಲೆಯಲ್ಲಿ ಅವಿಭಜಿತ ದ.ಕ. ಜಿಲ್ಲೆಯ ಎಲ್ಲಾ ಕೃಷಿಕರು ತಮ್ಮ ಕುಮ್ಕಿ ಹಕ್ಕನ್ನು ಊರ್ಜಿತದಲ್ಲಿರಿಸಿಕೊಳ್ಳಲು ಕೃಷಿ ಭೂಮಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳುವಂತೆ ಮನವಿ ಮಾಡಿದರು.

ಯಾವುದೇ ಅಧಿಕಾರಿಗಳು ರೈತನ ಕುಮ್ಕಿ ಹಕ್ಕು ದಾಖಲೆಗೆ ಸಂಬಂಧಿಸಿ ತಕರಾರು ತೆಗೆದರೆ ಕುಮ್ಕಿ ಹಕ್ಕಿಗೆ ಸಂಬಂಧಪಟ್ಟಂತೆ ಅದು ನ್ಯಾಯಾಲಯ ನಿಂದನೆಯಾಗುತ್ತದೆ. ಎಲ್ಲಾ ಕುಮ್ಕಿದಾರರಿಗೂ ಹೈಕೋರ್ಟು ತೀರ್ಪು ಕಾನೂನಿನಂತೆ ಅನ್ವಯವಾಗುತ್ತದೆ ಎಂದು ಅವರು ತಿಳಿಸಿದರು.
 

ಸಭೆಯಲ್ಲಿ ಭಾರತೀಯ ಕಿಸಾನ್ ಸಂಘದ ಮುಂದಾಳುಗಳಾದ ಡಿ.ಕೆ. ರಮೇಶ್, ಸಿ.ಎಚ್. ನಾರಾಯಣ ಭಟ್, ಬಿ.ಎಸ್. ಸುಬ್ರಾಯ, ಮೂಲಚಂದ್ರ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News