×
Ad

ಗಿನ್ನೆಸ್ ದಾಖಲೆ ಬರೆದ ಸಿನಿಮಾ ನಿರ್ದೇಶಕ ದಾಸರಿ ನಾರಾಯಣ ರಾವ್ ವಿಧಿವಶ

Update: 2017-05-30 20:47 IST

ಹೈದರಾಬಾದ್, ಮೇ 30: ಹಿರಿಯ ತೆಲುಗು ಸಿನಿಮಾ ನಿರ್ದೇಶಕ, ನಿರ್ಮಾಪಕ ಮತ್ತು ನಟ ದಾಸರಿ ನಾರಾಯಣ ರಾವ್ ದೀರ್ಘಕಾಲದ ಅಸೌಖ್ಯದ ಬಳಿಕ ಹೈದರಾಬಾದಿನಲ್ಲಿಂದು ನಿಧನರಾದರು. ಅವರಿಗೆ 75 ವರ್ಷ ವಯಸ್ಸಾಗಿತ್ತು.

  ದಾಸರಿ ನಾರಾಯಣ ರಾವ್ ಅವರ ಪತ್ನಿ 2011ರಲ್ಲಿ ಮೃತಪಟ್ಟಿದ್ದರು. ದಾಸರಿ ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಚಿತ್ರ ನಿರ್ಮಾಪಕರಾದ ದಾಸರಿ 150ಕ್ಕೂ ಹೆಚ್ಚು ಸಿನೆಮಾಗಳನ್ನು ನಿರ್ದೇಶಿಸಿದ್ದರು ಮತ್ತು 50 ಸಿನಿಮಾ ನಿರ್ಮಿಸಿದ್ದರು. ವಿಶ್ವದಲ್ಲಿ ಅತ್ಯಧಿಕ ಸಿನಿಮಾ ನಿರ್ದೇಶಿಸಿದವರೆಂದು ಗಿನ್ನೆಸ್ ವಿಶ್ವದಾಖಲೆಗೆ ಪಾತ್ರರಾಗಿದ್ದರು. 1974ರಲ್ಲಿ ತೆರೆಕಂಡ ‘ತಾತ ಮನಬದು’ ಎಂಬ ತಮ್ಮ ಚೊಚ್ಚಲ ಸಿನಿಮಾದ ಅಭಿನಯಕ್ಕೆ ನಂದಿ ಪುರಸ್ಕಾರಕ್ಕೆ ಪಾತ್ರರಾಗಿದ್ದರು.

    ‘ಪ್ರೇಮಾಭಿಷೇಕಂ, ಮೇಘ ಸಂದೇಶಂ, ಒಸೆ ರಾಮುಲಮ್ಮ , ತಾತ ಮನವದು’ ಮುಂತಾದ ಜನಪ್ರಿಯ ಚಿತ್ರಗಳನ್ನು ನಿರ್ದೇಶಿಸಿದ್ದ ದಾಸರಿ, ತಮಿಳುನಾಡಿನ ದಿವಂಗತ ಮುಖ್ಯಮಂತ್ರಿ ಜಯಲಲಿತಾ ಕುರಿತು ಸಿನಿಮಾ ಮಾಡುವುದಾಗಿ ಇತ್ತೀಚೆಗೆ ಘೋಷಿಸಿದ್ದರು. 2006ರಲ್ಲಿ ಕಾಂಗ್ರೆಸ್ ಬೆಂಬಲದಿಂದ ರಾಜ್ಯಸಭೆಯ ಸದಸ್ಯನಾಗಿ ಆಯ್ಕೆಯಾಗಿದ್ದ ಇವರು, ಕಲ್ಲಿದ್ದಲು ಇಲಾಖೆಯ ಸಹಾಯಕ ಸಚಿವರಾಗಿದ್ದರು. ಈ ಸಂದರ್ಭ ‘ಸ್ಟೀಲ್ ಉದ್ಯಮದ ದೊರೆ’ ಎಂದೇ ಕರೆಯಲ್ಪಡುವ ನವೀನ್ ಜಿಂದಾಲ್‌ಗೆ ಕಲ್ಲಿದ್ದಲು ಗಣಿ ಹಂಚಿಕೆ ಮಾಡಲು 2.25 ಕೋಟಿ ರೂ. ಲಂಚ ಸ್ವೀಕರಿಸಿದ ಪ್ರಕರಣದಲ್ಲಿ ದಾಸರಿ ಹೆಸರು ಕೇಳಿ ಬಂದಿತ್ತು. ದಾಸರಿ ನಾರಾಯಣ ರಾವ್ ನಿಧನಕ್ಕೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News