ಗೋಹತ್ಯೆ ನಿಷೇಧ ಆದೇಶದ ವಿರುದ್ಧ ರಾಜ್ಯಗಳ ಅಹವಾಲುಗಳ ಪರಿಶೀಲನೆ: ನಾಯ್ಡು

Update: 2017-05-30 15:38 GMT

ಮುಂಬೈ, ಮೇ 30: ಹತ್ಯೆಗಾಗಿ ಗೋವುಗಳ ಖರೀದಿ ಹಾಗೂ ಮಾರಾಟವನ್ನು ನಿಷೇಧದ ಕುರಿತ ಆದೇಶಕ್ಕೆ ಸಂಬಂಧಿಸಿ ವಿವಿಧ ರಾಜ್ಯಗಳು ಹಾಗೂ ಕೆಲವು ಸಂಘಟನೆಗಳು ಸಲ್ಲಿಸಿರುವ ಅಹವಾಲುಗಳನ್ನು ಕೇಂದ್ರ ಸರಕಾರವು ಪರಿಶೀಲಿಸುತ್ತಿರುವುದಾಗಿ ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಮಂಗಳವಾರ ತಿಳಿಸಿದ್ದಾರೆ.

  ಹೊಸದಿಲ್ಲಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ಅವರು ಸುಪ್ರೀಂಕೋರ್ಟ್ ಹಾಗೂ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವ ಕುರಿತ ಸಂಸದೀಯ ಸಮಿತಿ ವ್ಯಕ್ತಪಡಿಸಿದ್ದ ಕೆಲವು ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಹಾಗೂ ಜಾನುವಾರು ಕಳ್ಳಸಾಗಣೆ ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರಕಾರವು ಈ ಅಧಿಸೂಚನೆಯನ್ನು ಜಾರಿಗೊಳಿಸಿದೆಯೆಂದು ಹೇಳಿದ್ದಾರೆ.

 ಆದಾಗ್ಯೂ, ಕೆಲವು ರಾಜ್ಯ ಸರಕಾರಗಳು ಹಾಗೂ ವ್ಯಾಪಾರಿ ಸಂಘಟನೆಗಳು ಈ ಅಧಿಸೂಚನೆಯ ವಿರುದ್ಧ ಆಕ್ಷೇಪವನ್ನು ವ್ಯಕ್ತಪಡಿಸಿದ್ದು, ಅವುಗಳ ಬಗ್ಗೆ ಕೇಂದ್ರವು ಪರಿಶೀಲನೆ ನಡೆಸುತ್ತಿದೆ ಎಂದು ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

ಹತ್ಯೆಗಾಗಿ ಗೋವುಗಳ ಮಾರಾಟ ಹಾಗೂ ಖರೀದಿಯನ್ನು ನಿಷೇಧಿಸಿ ಮೇ 23ರಂದು ಕೇಂದ್ರ ಸರಕಾರ ಜಾರಿಗೊಳಿಸಿದ ಅಧಿಸೂಚನೆಯನ್ನು ಆಕ್ಷೇಪಿಸಿ ಪರಿಸರ ಸಚಿವಾಲಯಕ್ಕೆ ಒಟ್ಟು 13 ಅಹವಾಲುಗಳು ಬಂದಿರುವುದಾಗಿ ಅಧಿಕೃತ ಮೂಲಗಳು ತಿಳಿಸಿವೆ.

  ಕೇಂದ್ರದ ಈ ಅಧಿಸೂಚನೆಯ ವಿರುದ್ಧ ವಿವಿಧ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ತೀವ್ರವಾಗಿ ಟೀಕಿಸಿದ್ದು, ಇದೊಂದು ಕೆಟ್ಟದಾದ ನಿರ್ಧಾರವಾಗಿದೆ ಎಂದು ಹೇಳಿವೆ. ಈ ಅಧಿಸೂಚನೆಯ ಬಳಿಕ ತಥಾಕಥಿತ ಗೋರಕ್ಷಕರ ಭಯೋತ್ಪಾದನೆ ಇನ್ನಷ್ಟು ಹೆಚ್ಚಲಿದೆಯೆಂದಿದ್ದಾರೆ.

ಹತ್ಯೆಗಾಗಿ ಗೋವುಗಳ ಮಾರಾಟದ ವಿರುದ್ಧ ಕೇಂದ್ರದ ಅಧಿಸೂಚನೆಯನ್ನು ಪಶ್ಚಿಮಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ ತೀವ್ರವಾಗಿ ಖಂಡಿಸಿದ್ದಾರೆ. ರಾಜ್ಯದ ಸರಕಾರದ ಅಧಿಕಾರಗಳನ್ನು ಅತಿಕ್ರಮಿಸುವ ಕೇಂದ್ರದ ಪ್ರಯತ್ನ ಇದಾಗಿದೆ ಎಂದು ಹೇಳಿರುವ ಅವರು ಈ ಅಧಿಸೂಚನೆಯನ್ನು ತನ್ನ ಸರಕಾರವು ಒಪ್ಪಿಕೊಳ್ಳುನವುದಿಲ್ಲ ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News