ರಂಝಾನ್ ಪಾಪಗಳನ್ನು ಮನ್ನಿಸುವ ತಿಂಗಳು: ಹಸನ್ ಮೌಲವಿ ಕೋಟಯಂ
ಪುತ್ತೂರು, ಮೇ 30: ರಮಝಾನ್ ಪಾಪ ವಿಮೋಚಕ ತಿಂಗಳಾಗಿದ್ದು, ನಿಮ್ಮ ಶರೀರದ ಪ್ರತಿಯೊಂದು ಅಂಗಾಂಗಗಳನ್ನು ನಿಯಂತ್ರಣದಲ್ಲಿಡಲು ಕಲಿಸುವುದಲ್ಲದೇ ನಮ್ಮ ಪಾಪ ಗಳನ್ನು ಮನ್ನಿಸುವ ತಿಂಗಳಾಗಿದೆ ಎಂದು ಕೇರಳದ ಕೋಟಯಂನ ಮತ ಪಂಡಿತ ಹಸನ್ ಮೌಲವಿ ಕೋಟಯಂ ಹೇಳಿದರು.
ಅವರು ಮುಹ್‌ಯುದ್ದೀನ್ ಜಮಾಅತ್ ಕಮಿಟಿ ಪರ್ಲಡ್ಕ ಹಾಗೂ ಎಸ್‌ಕೆಎಸ್‌ಎಸ್‌ಎಫ್ ಪರ್ಲಡ್ಕ ಶಾಖೆ ಇದರ ಸಂಯುಕ್ತ ಆಶ್ರಯದಲ್ಲಿ ರಮಝಾನ್ ಸ್ವಾಗತ ಮತ ಪ್ರಭಾಷಣ ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣಗಾರರಾಗಿ ಆಗಮಿಸಿ ರಮಝಾನ್ ತಿಂಗಳ ಮಹತ್ವವನ್ನು ವಿವರಿಸಿ ಮಾತನಾಡಿದರು.
ಪ್ರಥಮ ದಿನ ಮುಖ್ಯ ಪ್ರಭಾಷಣಗೈದ ಅಶ್ರಫ್ ಫೈಝಿ ಕೊಡಗು ಮಾತನಾಡಿ, ರಂಝಾನ್ ತಿಂಗಳು ಪಾವನ ಮಾಸವಾಗಿದ್ದು, ನಾವು ಭಯ, ಭಕ್ತಿಯಿಂದ ಉಪವಾಸವನ್ನು ಆಚರಿಸಿ ದೇವರಲ್ಲಿ ಪ್ರಾರ್ಥನೆಯನ್ನು ಮಾಡಿದಾಗ ನಮ್ಮ ಪಾಪ ವಿಮೋಚನೆಗೆ ಸಹಕಾರಿಯಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪರ್ಲಡ್ಕ ಮುಹ್‌ಯುದ್ದೀನ್ ಜಮಾಅತ್ ಕಮಿಟಿಯ ಅಧ್ಯಕ್ಷ ಶಹಬಾನ್ ವಹಿಸಿದ್ದರು. ಪರ್ಲಡ್ಕ ಮುಹ್‌ಯುದ್ದೀನ್ ಜುಮಾ ಮಸೀದಿ ಯ ಖತೀಬ್ ಮುಹಮ್ಮದ್ ಅಲಿ ದಾರಿಮಿ ಉದ್ಘಾಟಿಸಿದರು. ಸಾಲ್ಮರ ಸಯ್ಯದ್‌ಮಲೆ ಮಸೀದಿಯ ಖತೀಬ್ ಉಮ್ಮರ್ ದಾರಿಮಿ ಸಾಲ್ಮರ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ವೇದಿಕೆಯಲ್ಲಿ ಎಸ್‌ಕೆಎಸ್‌ಎಸ್‌ಎಫ್ ರಾಜ್ಯಾಧ್ಯಕ್ಷ ಅನೀಸ್ ಕೌಸರಿ, ಪುತ್ತೂರು ವಲಯಾಧ್ಯಕ್ಷ ತಾಜುದ್ದೀನ್ ರಹಮಾನಿ, ಕ್ಲಸ್ಟರ್ ಅಧ್ಯಕ್ಷ ಮುಸ್ತಫಾ ಫೈಝಿ, ಕ್ಲಸ್ಟರ್ ಕಾರ್ಯದರ್ಶಿ ನಝೀರ್ ಅರ್ಶದಿ, ವಲಯ ಕಾರ್ಯದರ್ಶಿ ಮುಹಮ್ಮದ್ ಮುಸ್ಲಿಯಾರ್, ಅಧ್ಯಕ್ಷ ಖಮರಲಿ, ಪರ್ಲಡ್ಕ ಮುಹ್‌ಯುದ್ದೀನ್ ಜಮಾಅತ್ ಕಮಿಟಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಶೀದ್ ಹಾಜಿ ಪರ್ಲಡ್ಕ ಉಪಸ್ಥಿತರಿದ್ದರು