×
Ad

​ಕೋಟ: ಕೆರೆಗೆ ಬಿದ್ದು ತಾಯಿ, ಇಬ್ಬರು ಮಕ್ಕಳು ಮೃತ್ಯು

Update: 2017-05-30 22:41 IST

ಕೋಟ, ಮೇ.30: ಬೇಳೂರು ಗ್ರಾಮದ ದೇಲಟ್ಟು ಎಂಬಲ್ಲಿ ಮಂಗಳವಾರ ಸಂಜೆ ತಾಯಿ ಹಾಗೂ ಇಬ್ಬರು ಮಕ್ಕಳು ಕೆರೆಗೆ ಬಿದ್ದು ಮೃತಪಟ್ಟ ಘಟನೆ ವರದಿಯಾಗಿದೆ.

ಮೃತರನ್ನು ದೇಲಟ್ಟುವಿನ ಕೃಷಿಕ ಸುರೇಂದ್ರ ಶೆಟ್ಟಿ ಎಂಬವರ ಪತ್ನಿ ಭಾರತಿ ಶೆಟ್ಟಿ ಹಾಗೂ ಅವರ ಮಕ್ಕಳಾದ ಪೃಥ್ವಿ ಶೆಟ್ಟಿ (21) ಮತ್ತು ಪ್ರಜ್ಞಾ ಶೆಟ್ಟಿ (17) ಎಂದು ಗುರುತಿಸಲಾಗಿದೆ.

ಇವರು ತಮ್ಮ ತೋಟದ ಕೆರೆಯಲ್ಲಿ ಭತ್ತವನ್ನು ಮೊಳಕೆ ಬರಿಸಲು ಗೋಣಿಯಲ್ಲಿ ತುಂಬಿಸಿ ಕೆರೆಯಲ್ಲಿ ನೆನೆಸಲು ಹಾಕಿದ್ದರು ಎನ್ನಲಾಗಿದೆ.

ಇಂದು ಸಂಜೆ 5 ಗಂಟೆಯ ಸುಮಾರಿಗೆ ತಾಯಿ ಹಾಗೂ ಮಕ್ಕಳು ಇದನ್ನು ತೆಗೆಯಲು ಹೋಗಿದ್ದರೆನ್ನಲಾಗಿದೆ. ಆದರೆ ಎರಡು ದಿನಗಳಿಂದ ಸುರಿದ ಮಳೆಯಿಂದಾಗಿ ಕೆರೆಯ ಆಳ ತಿಳಿಯದೆ ಹಾಗೂ ಕೆಸರಿನಿಂದಾಗಿ ಗೋಣಿ ತೆಗೆಯಲು ಹೋದ ಭಾರತಿ ಶೆಟ್ಟಿ ಕೆರೆಗೆ ಬಿದ್ದಿರಬಹುದು ಎಂದು ಶಂಕಿಸಿದ್ದು, ತಾಯಿಯನ್ನು ಮೇಲಕ್ಕೆತ್ತಲು ಹೋದ ಮಕ್ಕಳಿಬ್ಬರೂ ಕೆರೆಯಲ್ಲಿ ಮುಳುಗಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

ಸಂಜೆ 7 ಗಂಟೆಯ ಸುಮಾರಿಗೆ ಭಾರತಿ ಶೆಟ್ಟಿಯವರ ತಮ್ಮ ಉಮೇಶ್ ಮನೆಗೆ ಬಂದ ಸಂದರ್ಭ ಮನೆಯಲ್ಲಿ ಯಾರೂ ಇಲ್ಲದಿದ್ದುದರಿಂದ ಅವರನ್ನು ಹುಡುಕಾಡಿ ತೋಟದ ಕಡೆಗೆ ಬಂದಾಗ ಕೆರೆಯಲ್ಲಿ ಗೋಣಿ ತೇಲುತ್ತಿರುವುದನ್ನು ಕಂಡು ನಂತರ ಭಾರತಿ ಶೆಟ್ಟಿ ಹಾಗೂ ಮಕ್ಕಳು ಕೆರೆಯಲ್ಲಿ ಮುಳುಗಿರುವುದು ತಿಳಿದು ಬಂದಿತು. ಕೂಡಲೇ ಪೊಲೀಸ್ ಹಾಗೂ ಅಗ್ನಿಶಾಮಕದಳದವರು ಸ್ಥಳಕ್ಕೆ ಆಗಮಿಸಿ 7:30ರ ಸುಮಾರಿಗೆ ಮೃತದೇಹಗಳನ್ನು ಮೇಲಕ್ಕೆತ್ತಲಾಯಿತು.
   

ಪೃಥ್ವಿ ಶೆಟ್ಟಿ ಬ್ರಹ್ಮಾವರದ ಎಸ್ ಎಂ ಎಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದರೆ, ಪ್ರಜ್ಞಾ ಶೆಟ್ಟಿ ಕುಂದಾಪುರದ ಭಂಡಾರ್‌ಕರ್ಸ್‌ ಕಾಲೇಜಿನ ಪ್ರಥಮ ವರ್ಷದ ಪದವಿ ವಿದ್ಯಾರ್ಥಿನಿಯಾಗಿದ್ದರು. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News