ಗೋಮಾರಾಟ ನಿಷೇಧ: ಮೇಘಾಲಯ ಬಿಜೆಪಿ ನಾಯಕರಿಂದ ಪಕ್ಷ ತ್ಯಜಿಸುವ ಬೆದರಿಕೆ
ಶಿಲ್ಲಾಂಗ್,ಮೇ 30: ಹತ್ಯೆಗಾಗಿ ಗೋಮಾರಾಟ ನಿಷೇಧಿಸುವ ಕುರಿತ ಮೋದಿ ಸರಕಾರದ ಆದೇಶಕ್ಕೆ ಮೇಘಾಲಯದಲ್ಲಿ ಬಿಜೆಪಿ ನಾಯಕರಿಂದಲೇ ವಿರೋಧ ವ್ಯಕ್ತವಾಗಿದೆ. ನೂತನ ಆದೇಶವನ್ನು ಹಿಂಪಡೆಯದಿದ್ದಲ್ಲಿ ಪಕ್ಷವನ್ನು ತ್ಯಜಿಸುವುದಾಗಿ ಅವರು ಬೆದರಿಕೆ ಹಾಕಿದ್ದಾರೆ.
‘‘ಗೋಮಾರಾಟ ಕುರಿತ ನೂತನ ಕಾನೂನಿನ ಬಗ್ಗೆ ಮೇಘಾಲಯದ ಬಹುತೇಕ ಬಿಜೆಪಿ ನಾಯಕರು ಅಸಂತುಷ್ಟರಾಗಿದ್ದಾರೆ. ಈ ಕಾನೂನು ಜನತೆಯ ಸಾಮಾಜಿಕ- ಆರ್ಥಿಕ ಸ್ಥಿತಿಗತಿ ಮೇಲೆ ದುಷ್ಪರಿಣಾಮ ಬೀರಲಿದೆ’’ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಜಾನ್ ಆಂಟೊನಿಯಸ್ ಲಿಂಗ್ಡೊ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸೋಮವಾರ ಕರೆಯಲಾದ ಸಭೆಯೊಂದರಲ್ಲಿ ಈ ಬಗ್ಗೆ ಪಕ್ಷದ ಕಾರ್ಯಕರ್ತರು ಗಂಭೀರವಾಗಿ ಚರ್ಚಿಸಿರುವುದಾಗಿ ಅವರು ಹೇಳಿದ್ದಾರೆ.
ಈ ಕಾನೂನು ಜನತೆಯ ಆಹಾರ ಪದ್ಧತಿಗೆ ವಿರುದ್ಧವಾಗಿದೆ ಎಂದು ಹೇಳಿದ ಅವರು, ದನದ ವ್ಯಾಪಾರ, ಕಸಾಯಿಖಾನೆಗಳ ಉದ್ಯಮದಲ್ಲಿ ತೊಡಗಿರುವವರು ಇದರಿಂದ ಬಾಧಿತರಾಗಲಿದ್ದಾರೆ ಎಂದು ಹೇಳಿದರು.
ಗೋಹತ್ಯೆ ನಿಷೇಧಿಸುವ ನೂತನ ಕಾನೂನಿಂದಾಗಿ ಪಕ್ಷದ ಅಭ್ಯರ್ಥಿಗಳಿಗೆ ಚುನಾವಣಾ ಪ್ರಚಾರ ನಡೆಸಲೂ ಕಷ್ಟವಾಗಲಿದೆ ಎಂದು ಜಾನ್ ಅಂಟೊನಿಯಸ್ ಹೇಳಿದ್ದಾರೆ. ಆದರೆ ಲಿಂಗ್ಡೊ ಅವರ ಬೆದರಿಕೆಯನ್ನು ಪಕ್ಷಾಧ್ಯಕ್ಷ ಶಿಂಬುಂ ಲಿಂಗ್ಡೊ ತಳ್ಳಿಹಾಕಿದ್ದಾರೆ.ಇದೊಂದು ಕಾನೂನಿಗೆ ಸಂಬಂಧಿಸಿದ ವಿಷಯವಾಗಿರುವುದರಿಂದ ಆ ಬಗ್ಗೆ ತಾನು ಪ್ರತಿಕ್ರಿಯಿಸುವುದಿಲ್ಲವೆಂದು ಹೇಳಿದ ಅವರು, ಪಕ್ಷದಿಂದ ನಿರ್ಗಮಿಸಲು ಬಯಸುವವರು ಹಾಗೆ ಮಾಡಲು ಮುಕ್ತರಾಗಿದ್ದಾರೆ ಎಂದರು.